ಸರ್ಕಾರಿ ವೈದ್ಯರಿಗೆ ಗ್ರಾಹಕರ ಆಯೋಗ ಚಾಟಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಡಿ.18
ಸರ್ಕಾರಿ ವೈದ್ಯರು ಸೇವೆ ನೀಡುವಾಗ ಉದಾಸೀನ ಧೋರಣೆ ಅನುಸರಿಸಿದ್ದರ ಪರಿಣಾಮ ಈಗ ಪರಿಹಾರ ನೀಡಬೇಕಾಗಿ ಬಂದಿರುವ ಪ್ರಸಂಗವೊಂದು ಶಿವಮೊಗ್ಗದಲ್ಲಿ ನಡೆದಿದೆ.
ಹಾಗೆಯೇ, ಉಚಿತ ಸೇವೆ ನೀಡುವ ವೈದ್ಯರಿಗೆ ರೋಗಿಗಳು ಎಂದೂ ಗ್ರಾಹಕರಲ್ಲ ಎಂಬ ವೈದ್ಯರ ವಾದವನ್ನು ಆಯೋಗ ತಿರಸ್ಕರಿಸಿ ಮಹತ್ವದ ಆದೇಶ ನೀಡಿದೆ.
ಆಗಿದ್ದಿಷ್ಟು, ಶಾಲಿನಿ (ಹೆಸರು ಬದಲಿಸಲಾಗಿದೆ) ಎಂಬುವರು ಹೆರಿಗೆ ನೋವಿನ ಕಾರಣ 2012ರ ಏಪ್ರಿಲ್ 2ರಂದು ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಆಗಮಿಸುತ್ತಾರೆ. ತೀವ್ರ ನೋವಿದ್ದ ಕಾರಣ ಅವರು ತಕ್ಷಣವೇ ಹಾಸಿಗೆ ವ್ಯವಸ್ಥೆ ಮಾಡುವಂತೆ ಕೋರುತ್ತಾರೆ. ಅಲ್ಲಿದ್ದ ವೈದ್ಯರು, ಬೆಡ್ ಖಾಲಿ ಇಲ್ಲ, ಕಾರಿಡಾರ್ನಲ್ಲಿ ಓಡಾಡುತ್ತಿರಿ ಸರಿಯಾಗುತ್ತದೆ ಎಂದು ಸಲಹೆ ನೀಡುತ್ತಾರೆ.
ಕಾರಿಡಾರ್ನಲ್ಲೇ ಬೆಡ್: ಹೆರಿಗೆ ನೋವು ತೀವ್ರಗೊಂಡಾಗ ಪುನಃ ಬೆಡ್ಗಾಗಿ ಕೋರಿಕೆ ಸಲ್ಲಿಸಲಾಗುತ್ತದೆ. ಕೊನೆಗೆ ಅಲ್ಲಿನ ಸಿಬ್ಬಂದಿ ಆಸ್ಪತ್ರೆ ಕಾರಿಡಾರ್ನಲ್ಲೇ ಬೆಡ್ ವ್ಯವಸ್ಥೆ ಮಾಡುತ್ತಾರೆ.
ಇದಾದ ನಂತರ ವೈದ್ಯರು ಪರಿಶೀಲಿಸಿ ಮಲ್ನಾಡ್ ಡಯಾಗ್ನಸ್ಟಿಕ್ ಎಂಬ ಖಾಸಗಿ ಸ್ಕ್ಯಾನಿಂಗ್ ಸೆಂಟರ್ನಿಂದ ಸ್ಕ್ಯಾನ್ ಮಾಡಿಸಿಕೊಂಡು ಬನ್ನಿ ಎಂದು ಸಲಹೆ ಕೊಡುತ್ತಾರೆ. ಅದೇ ಹೆರಿಗೆ ನೋವಿನಲ್ಲೇ ಆಕೆ ವೈದ್ಯರು ಸೂಚಿಸಿದಲ್ಲಿ ಹೋಗಿ ಸ್ಕ್ಯಾನ್ ಮಾಡಿಸಿಕೊಂಡು ಬರುತ್ತಾರೆ. ಸ್ಕ್ಯಾನ್ ರಿಪೋರ್ಟ್ ನೋಡಿದ ವೈದ್ಯರು, ಸಿಜೇರಿಯನ್ ಮಾಡಲೇಬೇಕು ಎಂದು ಅನುಮತಿ ಪಡೆಯುತ್ತಾರೆ. ಆದರೆ, ಅನಸ್ತೇಶಿಯಾ ವೈದ್ಯರ ಲಭ್ಯತೆ ಇಲ್ಲ ಎಂಬ ಕಾರಣಕ್ಕೆ ಹೆರಿಗೆ ಮುಂದೂಡುತ್ತಾರೆ.
ನೋವು ಹೆಚ್ಚು: ಕೆಲ ಹೊತ್ತಿನ ನಂತರ ಪುನಃ ಆಗಮಿಸಿದ ವೈದ್ಯರು ನಾರ್ಮಲ್ ಡೆಲಿವರಿಗೆ ಪ್ರಯತ್ನಿಸುತ್ತಾರೆ. ಅದರಿಂದ ನೋವು ಹೆಚ್ಚಾಗುತ್ತದೆ. ಹೆರಿಗೆ ಸಾಧ್ಯವಾಗದೇ ಇದ್ದಾಗ ನಾಲ್ಕು ಗಂಟೆಗೆ ಶಸ್ತ್ರಚಿಕಿತ್ಸೆ ಕೊಠಡಿಗೆ ಕರೆದುಕೊಂಡು ಹೋಗಿ ಸಿಜೇರಿಯನ್ ಮಾಡಿ ಗಂಡು ಮಗು ಜನನವಾಗುತ್ತದೆ. ತಾಯಿ ಮಗುವನ್ನು ವಾರ್ಡ್ಗೆ ಶಿಫ್ಟ್ ಮಾಡುತ್ತಾರೆ.
ಏಪ್ರಿಲ್ 4ರಂದು ಮಗುವಿನ ಕೈ ಬಾವು ಬಂದಿರುವುದು ಕಾಣಿಸಿಕೊಳ್ಳುತ್ತದೆ. ವಿಷಯ ತಿಳಿದ ವೈದ್ಯರು ಎಕ್ಸ್ರೇ ರಿಪೋರ್ಟ್ ಗಮನಿಸಿದಾಗ ಮಗುವಿನ ಕೈ ಮುರಿದಿರುವುದು ಕಾಣಿಸುತ್ತದೆ. ನಂತರ ಚಿಕಿತ್ಸೆ ಆರಂಭಿಸುತ್ತಾರೆ.
ಆಯೋಗಕ್ಕೆ ದೂರು: ನೋವು ಅನುಭವಿಸಿದ ತಾಯಿಯು ವೈದ್ಯರ ಉದಾಸೀನ- ನಿರ್ಲಕ್ಷ್ಯ ಧೋರಣೆ ಪ್ರಶ್ನಿಸುವ ಜೊತೆಗೆ ಪರಿಹಾರ ನೀಡುವಂತೆ ವಕೀಲರಿಂದ ಸಂಬಂಧಿಸಿದ ವೈದ್ಯರು, ಆಸ್ಪತ್ರೆಯ ಮುಖ್ಯಸ್ಥರಿಗೆ ನೋಟಿಸ್ ನೀಡುತ್ತಾರೆ.
ದೂರು ಮಾಡಿರುವವರು ಹೇಳಿರುವ ಪ್ರಕಾರ, ವೈದ್ಯರ ನಿರ್ಲಕ್ಷ್ಯದಿಂದಾಗಿ ಈ ಘಟನೆಯಾಗಿದೆ. ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮತ್ತು ಔಷಧಿ ಲಭ್ಯವಿದ್ದರೂ ಕೂಡ ಹೊರಗಿನಿಂದ(ಖಾಸಗಿ) ಸ್ಕ್ಯಾನಿಂಗ್, ಔಷಧಿ ತರಲು ಶಿಫಾರಸು ಮಾಡುತ್ತಾರೆ. ಹಾಗೂ ಮಗು ತಾಯಿಗೆ ಸರಿಯಾದ ವೇಳೆಯಲ್ಲಿ ಸೂಕ್ತ ಚಿಕಿತ್ಸೆ ಕೊಡಲಿಲ್ಲ ಎಂದು ದೂರುತ್ತಾರೆ.
ಮೆಗ್ಗಾನ್ ಆಸ್ಪತ್ರೆಯ ವೈದ್ಯರಾದ ಅಶ್ವಿನಿ, ಶೋಭಾ, ಬೋಧನಾ ಆಸ್ಪತ್ರೆಯ ಪ್ರಾಂಶುಪಾಲ ಡಾ.ಕೆ.ಎಸ್. ಗಂಗಾಧರ್, ಆಸ್ಪತ್ರೆ ಮುಖ್ಯಾಧಿಕಾರಿ ಲೇಪಾಕ್ಷಿಯವರಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ. ರು. 10 ಲಕ್ಷ ಪರಿಹಾರ ನೀಡಬೇಕೆಂದು ಕೋರಲಾಗುತ್ತದೆ. ಆದರೆ, ಸೂಕ್ತ ಉತ್ತರ ಬಾರದ ಕಾರಣ ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ನ್ಯಾಯ ಕೇಳುತ್ತಾರೆ.
ಆರೋಪ ನಿರಾಕರಣೆ: ಗ್ರಾಹಕರ ಆಯೋಗ ಪ್ರಕರಣ ಕೈಗೆತ್ತಿಕೊಂಡು ವಿಚಾರಣೆ ನಡೆಸಿದಾಗ, ವೈದ್ಯರು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸುತ್ತಾರೆ. ನಾವು ಇವರೆಲ್ಲರೂ ಆರೋಪವನ್ನು ನಿರಾಕರಿಸುತ್ತಾರೆ. ಚಿಕಿತ್ಸೆ ಸರಿಯಾಗಿಯೇ ಇತ್ತು. ಮಗು ತಾಯಿಗೆ ಹಸ್ತಾಂತರಿಸಿದ ನಂತರ ಆಗಿರುವ ಘಟನೆ, ಅದಕ್ಕೆ ನಮಗೂ ಸಂಬಂಧ ಇಲ್ಲ ಎಂದು ಸ್ಪಷ್ಟೀರಣ ನೀಡುತ್ತಾರೆ.
ಹಾಗೆಯೇ, ನಾವು ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡುವ ಕಾರಣ, ರೋಗಿಗಳು ಗ್ರಾಹಕರಾಗುವುದಿಲ್ಲ ಎಂದು ವಾದ ಮುಂದಿಡುತ್ತಾರೆ. ಆದರೆ, ಆಯೋಗ ಕೂಲಂಕಷ ವಿಚಾರಣೆ ನಡೆಸಿ ವೈದ್ಯರ ನಿರ್ಲಕ್ಷ್ಯ ಎತ್ತಿ ತೋರಿಸುತ್ತದೆ.
ಹಾಗೆಯೇ ಒಂದನೇ ಪ್ರತಿವಾದಿ (ಡಾ.ಅಶ್ವಿನಿ) ರು. 50 ಸಾವಿರ ಪರಿಹಾರ ಕೊಡಬೇಕು. ಜೊತೆಗೆ ರು. 3,000 ಪ್ರಕರಣದ ಖರ್ಚನ್ನು ನೀಡಬೇಕು ಎಂದು ಆದೇಶಿಸಿದ್ದಾರೆ. ಉಳಿದ 3 ಮತ್ತು 4ನೇ ಪ್ರತಿವಾದಿಗಳ ಮೇಲೆ ಮಾಡಲಾದ ಆರೋಪದಲ್ಲಿ ಹುರುಳಿಲ್ಲ ಎಂದು ಅವರ ವಿರುದ್ಧದ ದೂರನ್ನು ವಜಾ ಮಾಡಿ ಮಹತ್ವದ ಆದೇಶ ನೀಡಿದೆ.