604 ಎಕರೆ ಭೂಸ್ವಾಧೀನ ಪ್ರಸ್ತಾವ ಕೈ ಬಿಡಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಡಿ.19
ಸೋಗಾನೆಯ ಸುತ್ತಮುತ್ತ ಕೈಗಾರಿಕಾ ಉದ್ದೇಶಕ್ಕಾಗಿ 604 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಜಿಲ್ಲಾಡಳಿತ ಮುಂದಾಗಿರುವ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ರೈತ ಸಂಘ, ತಕ್ಷಣವೇ ಪ್ರಸ್ತಾವನೆ ಕೈಬಿಡುವಂತೆ ಆಗ್ರಹಿಸಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ಮುಖಂಡ ಕೆ.ಟಿ.ಗಂಗಾಧರ್, ಅಭಿವೃದ್ಧಿಗೆ ನಾವು ಸಹಕರಿಸುತ್ತೇವೆ. ಆದರೆ 2ನೇ ಹಂತದ ಕೈಗಾರಿಕಾ ಪ್ರದೇಶಾಭಿವೃದ್ಧಿಯ ಹೆಸರಿನಲ್ಲಿ ಭೂಸ್ವಾಧೀನಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಈ ಹಿಂದೆ ವಿಮಾನ ನಿಲ್ದಾಣ, ಫುಡ್‌ಪಾರ್ಕ್, ಕಾರಾಗೃಹ ನಿರ್ಮಾಣ, ಸುವರ್ಣ ಕಾರಿಡಾರ್ ಯೋಜನೆಗೆಂದು ಭೂಸ್ವಾಧೀನಪಡಿಸಿಕೊಂಡಿದ್ದರೂ, ಯಾವುದೇ ಯೋಜನೆಯ ಉದ್ದೇಶ ಪರಿಪೂರ್ಣಗೊಂಡಿಲ್ಲ. ಹಳೆಯ ಯೋಜನೆಗಳೇ ಬಾಕಿ ಇರುವಾಗ ಮತ್ತೆ ಭೂಸ್ವಾಧೀನಕ್ಕೆ ಮುಂದಾಗಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಜಿಲ್ಲಾಧಿಕಾರಿ ಅವರು ಸೋಗಾನೆಯ ಸರ್ವೆ ನಂಬರ್ 120ರಲ್ಲಿನ 604 ಎಕರೆ ಪೈಕಿ 22 ಖಾತೆದಾರರೊಂದಿಗೆ ಸಭೆ ನಡೆಸಿ ಎಕರೆಗೆ ತಲಾ 20 ಲಕ್ಷ ಕೊಡುವುದಾಗಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಉಳಿದಿರುವ ಭೂಮಿ ಸರ್ಕಾರದ್ದು, ಅಲ್ಲಿ ಕೃಷಿ ಮಾಡುತ್ತಿರುವ ಬಗರ್‌ಹುಕುಂ ರೈತರ ಬಗ್ಗೆ ನಂತರ ನೋಡೋಣ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಲ್ಲಿನ ಬಗರ್‌ಹುಕುಂ ರೈತರೆಲ್ಲರೂ ಹಕ್ಕುಪತ್ರಕ್ಕಾಗಿ ಫಾರಂ 50 ಹಾಗೂ 53ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇಂತಹ ರೈತರನ್ನು ಪರಿಹಾರ ನೀಡದೇ ಒಕ್ಕಲೆಬ್ಬಿಸುವ ಹುನ್ನಾರವನ್ನು ಜಿಲ್ಲಾಡಳಿತ ಮಾಡಿರುವುದು ಸರಿಯಲ್ಲ. ರೈತರ ವಿಶ್ವಾಸಕ್ಕೆ ಪಡೆಯದೆ ಭೂಸ್ವಾಧೀನಕ್ಕೆ ಸಿದ್ಧತೆ ನಡೆಸಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ ಮಾತನಾಡಿ, ಸರ್ವೆ ನಂಬರ್ 120ರ ಭೂಮಿಯ ಸ್ವಾಧೀನ ಪ್ರಕ್ರಿಯೆ ಕುರಿತಾಗಿ ಕ್ಷೇತ್ರದ ಶಾಸಕರಾದ ತಮಗೆ ಯಾವುದೇ ಮಾಹಿತಿ ನೀಡುವ ಗೋಜಿಗೆ ಜಿಲ್ಲಾಡಳಿತ ಹೋಗಿಲ್ಲ ಎಂದು ಬೇಸರಿಸಿದರು.
ನಮಗೂ ಮಾಹಿತಿ ನೀಡಿಲ್ಲ, ರೈತರ ಸಭೆಗೂ ಆಹ್ವಾನಿಸಿಲ್ಲ. ಬಗರ್‌ಹುಕುಂ ರೈತರ ವಿಶ್ವಾಸಕ್ಕೆ ಪಡೆದಿಲ್ಲ ಎಂದು ದೂರಿದ ಅವರು, ಕ್ಷೇತ್ರದ ಹಸಿರು ಭೂಮಿಯನ್ನು ರೈತರಿಂದ ಕಿತ್ತುಕೊಂಡು ಬಂಡವಾಳಶಾಹಿಗಳಿಗೆ ನೀಡುವ ಹುನ್ನಾರದಿಂದ ಭೂಸ್ವಾಧೀನ ನಡೆಯುತ್ತಿದೆ. ಈ ಹಿಂದೆ ನಡೆದ ಭೂಸ್ವಾಧೀನದ ಸಮರ್ಪಕ ಬಳಕೆಯಾಗದೆಯೇ ಮತ್ತೆ ಭೂಸ್ವಾಧೀನ ಸರಿಯಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿಯ ರೈತ ಮುರುಗೇಶ್, ಗಂಗಾಧರ, ಕೃಷ್ಣಪ್ಪ ಸೇರಿದಂತೆ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿರುವ ಹತ್ತಾರು ರೈತರು ಹಾಜರಿದ್ದರು.
ನೀರು ಬಿಡುಗಡೆ ಅವಕಾಶ ಕೊಡಲ್ಲ
ಭದ್ರಾ ಜಲಾಶಯದಿಂದ ಡಿ.21 ರಂದು 1.50 ಟಿಎಂಸಿ ನೀರು ನದಿಗೆ ಬಿಡುವಂತೆ ಸರ್ಕಾರ ಆದೇಶಿಸಿದೆ. ಆದರೆ, ಈ ಆದೇಶಕ್ಕೆ ನಮ್ಮದು ವಿರೋಧವಿದೆ ಎಂದು ರೈತ ಮುಖಂಡ ಕೆ.ಟಿ.ಗಂಗಾಧರ್ ತಿಳಿಸಿದರು.
ನೀರು ಬಿಡುಗಡೆಗೆ ಸರ್ಕಾರದ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ. ಈಗಾಗಲೇ ಜಲಾಶಯದಲ್ಲಿ ನೀರಿಲ್ಲ. ನದಿಗೆ ನೀರು ಏಕೆ ಬಿಡಬೇಕು ಎಂಬ ಮಾಹಿತಿಯೂ ಇಲ್ಲ. ಈ ಸಂದರ್ಭದಲ್ಲಿ ನೀರು ಬಿಟ್ಟರೆ ರೈತರ ಬೆಳೆಗೆ ತೊಂದರೆಯಾಗುತ್ತದೆ. ಈ ಸುತ್ತೋಲೆ ವಾಪಾಸ್ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.