ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಎಲ್ಲಿ ಹೋಯಿತು 35 ಕೋಟಿ?

Lingaraj Badiger
Updated On : 20 Dec 2013, 11:10 am

ಕ.ಪ್ರ.ವಾರ್ತೆ, ಶಿವಮೊಗ್ಗ,  ಡಿ.19
ಶಿವಮೊಗ್ಗ ಪರಂಪರೆ ಅಭಿವೃದ್ಧಿಗೆಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹಣ ಎಲ್ಲಿ ಹೋಯಿತು?
ಈ ಪ್ರಶ್ನೆ ಜಿಲ್ಲಾಡಳಿತವನ್ನು ಕಾಡುತ್ತಿದೆ. ಕಳೆದ ಒಂದೂವರೆ ವರ್ಷದಿಂದ ಈ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಶಿವಮೊಗ್ಗ ಪರಂಪರೆ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಒನ್ ಟೈಮ್ ಅಡಿಷನಲ್ ಸೆಂಟ್ರಲ್ ಅಸಿಸ್ಟೆನ್ಸ್ ಫಾರ್ ದ ಇಯರ್ 2009-10 ಯೋಜನೆಯಡಿ 15 ಕೋಟಿ ಗ್ರಾಂಟ್ ಕಾಂಪೊನೆಂಟ್ ಸೇರಿ ಒಟ್ಟು ರು. 35 ಕೋಟಿ ಅನುದಾನ ಬಿಡುಗಡೆಯಾಗಿತ್ತು. ನಗರಾಭಿವೃದ್ಧಿ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆಗಳು ಈ ಅನುದಾನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಬಳಕೆ ಮಾಡಲು ನಿಗದಿಯಾಗಿತ್ತು.
ಕೆಲ ತಿಂಗಳ ನಂತರ ಹಣಕಾಸು ಇಲಾಖೆ ಬಾಕಿ ಉಳಿದಿದ್ದ 15 ಕೋಟಿ ಅನುದಾನ ಬಿಡುಗಡೆ ಮಾಡುವುದಕ್ಕಾಗಿ ಈಗಾಗಲೇ ಬಳಕೆಯಾಗಿರುವ 35 ಕೋಟಿ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ಕೇಳಲಾಯಿತು.
2001ರ ಜನವರಿ 7ರಂದು ಅಪರ ಮುಖ್ಯ ಕಾರ್ಯದರ್ಶಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ 35 ಕೋಟಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಗಳು ಹಣ ಬಳಕೆ ಪ್ರಮಾಣ ಪತ್ರ ಸಲ್ಲಿಸುವಂತೆ ಸೂಚಿಸಲಾಯಿತು.
ಈ ಹಿನ್ನೆಲೆಯಲ್ಲಿ ಎರಡೂ ಇಲಾಖೆಗಳಿಗೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಕಾರ್ಯದರ್ಶಿ ಬಸವರಾಜು ಅವರು 2011ರ ಮಾರ್ಚ್ 22ರಂದು ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಪತ್ರ ಬರೆದರು.
ಇದಕ್ಕೂ ಮುಂಚೆ 2011ರ ಫೆಬ್ರವರಿ, ಮೇ ಹಾಗೂ ಜುಲೈ ತಿಂಗಳಲ್ಲಿ ಪತ್ರ ಬರೆದಿದ್ದನ್ನು ನೆನಪಿಸಿ, ಕೂಡಲೇ ಹಣ ಬಳಕೆ ಪ್ರಮಾಣ ಪತ್ರ ಕಳುಹಿಸುವಂತೆ ಕೋರಿದ್ದರು. ಅಲ್ಲಿ ಶುರುವಾಗಿತ್ತು ಸಮಸ್ಯೆ.
ರಾಜಧಾನಿಯಿಂದ ಶಿವಮೊಗ್ಗಕ್ಕೆ ಬಂದ ಪತ್ರವು ಜಿಲ್ಲಾಡಳಿತಕ್ಕೆ ತಲುಪಿದಾಗ ಹುಡುಕಾಟ ಶುರುವಾಯಿತು.
ಹಣ ಎಲ್ಲಿದೆ, ಯಾವ ಇಲಾಖೆ ಬಳಸಿದೆ ಎಂದು ಜಿಲ್ಲಾಡಳಿತಕ್ಕೇ ಗೊತ್ತಿರಲಿಲ್ಲ. ಮೊದಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪತ್ರ ಬರೆಯಲಾಯಿತು. ಅವರು ಶಿವಮೊಗ್ಗ ಪರಂಪರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ತಮಗೆ ಯಾವುದೇ ಅನುದಾನ ಬಿಡುಗಡೆ ಆಗಿಲ್ಲ ಎಂದು ಉತ್ತರಿಸಿದರು.
ನಂತರ ಜಿಲ್ಲಾಡಳಿತ ನಗರಸಭೆ, ಲೋಕೋಪಯೋಗಿ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಹಲವು ಇಲಾಖೆಗಳಿಗೆ ಪತ್ರ ಬರೆಯಿತು. ಇಲ್ಲಿಂದಲೂ ಹಣ ಬಂದಿರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂಬ ಉತ್ತರ ಬಂದಿತು.
ಎಲ್ಲಿ ಅನುದಾನ ಬಳಕೆಯಾಗಿದೆ ಎಂದು ಗೊತ್ತಾಗದೆ ಬಳಕೆ ಪ್ರಮಾಣಪತ್ರ ನೀಡುವುದಾದರೂ ಹೇಗೆ? ಹೀಗಾಗಿ 35 ಕೋಟಿ ಎಲ್ಲಿ ಹೋಯಿತು ಎಂದು ತಿಳಿಯದೇ ಜಿಲ್ಲಾಡಳಿತ ಈಗ ಮತ್ತೊಂದು ಸುತ್ತಿನ ಪತ್ರ ಬರೆದಿದೆ.
ಕನ್ನಡಿಯೊಳಗಿನ ಗಂಟಾಗಿರುವ ಈ ರು. 35 ಕೋಟಿ ಜಿಲ್ಲೆಯ ಪರಂಪರೆ ಅಭಿವೃದ್ಧಿಗಂತೂ ಬಳಕೆಯಾಗಿಲ್ಲ. ಎಲ್ಲಿದೆ ಎನ್ನುವುದೂ ಗೊತ್ತಾಗುತ್ತಿಲ್ಲ. ಹೀಗಾಗಿ ಪತ್ತೆ ಕಾರ್ಯ ಇನ್ನೂ ನಡೆಯುತ್ತಿದೆ.
- ಹೊನ್ನಾಳಿ ಚಂದ್ರಶೇಖರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement