ಕೆಎಸ್ಆರ್ಟಿಸಿ ಹುದ್ದೆ: ನಗರ ಸಾರಿಗೆ ಕಾರ್ಮಿಕರ ನೇಮಕಕ್ಕೆ ಆಗ್ರಹ
ಶಿವಮೊಗ್ಗ: ನಗರದಲ್ಲಿ ಆರಂಭಿಸಲು ಉದ್ದೇಶಿಸಿರುವ ಕೆಎಸ್ಆರ್ಟಿಸಿ ಬಸ್ಗಳ ಚಾಲಕ ಮತ್ತು ನಿರ್ವಾಹಕ ಹುದ್ದೆಗಳಿಗೆ ನಗರ ಸಾರಿಗೆ ಕಾರ್ಮಿಕರನ್ನೇ ನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಿ ಶಿವಮೊಗ್ಗ ನಗರ ಸಾರಿಗೆ ಕಾರ್ಮಿಕರ ಸಂಘ ಜಿಲ್ಲಾಡಳಿತವನ್ನು ಆಗ್ರಹಿಸಿದೆ.
23 ವರ್ಷಗಳಿಂದ ಶಿವಮೊಗ್ಗ ನಗರದಲ್ಲಿ ಸುಮಾರು 70ಕ್ಕೂ ಅಧಿಕ ನಗರ ಸಾರಿಗೆ ಬಸ್ಗಳು ಸಂಚರಿಸುತ್ತಿದ್ದು, 350ಕ್ಕೂ ಅಧಿಕ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೀಗ ರಾಜ್ಯ ರಸ್ತೆ ಸಾರಿಗೆ ಇಲಾಖೆ ತೆಗೆದುಕೊಂಡಿರುವ ಕ್ರಮದಿಂದ ಎಲ್ಲಾ ಕಾರ್ಮಿಕರ ಕುಟುಂಬಗಳು ಬೀದಿಗೆ ಬೀಳಲಿವೆ ಎಂದು ಸಂಘ ತಿಳಿಸಿದೆ.
ಕೇಂದ್ರ ಸರ್ಕಾರ ಜನ್ ನರ್ಮ್ ಯೋಜನೆಯಡಿ ಶಿವಮೊಗ್ಗ ನಗರದಲ್ಲಿ ಸರ್ಕಾರಿ ಸಾರಿಗೆ ಅರಂಭಕ್ಕೆ ಅನುಮತಿ ನೀಡಿದೆ. ಅನುದಾನ ಕೂಡ ಬಿಡುಗಡೆ ಮಾಡಿದೆ. ಸರ್ಕಾರಿ ನಗರ ಸಾರಿಗೆ ಬಸ್ಗಳ ಆರಂಭದಿಂದ ಪೈಪೋಟಿ ಹೆಚ್ಚಾಗುವ ಸಾಧ್ಯತೆಯಿದೆ. ಜೊತೆಗೆ ಎರಡು ಕಡೆಯವರಿಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ. ಇದರಿಂದ ನಗರ ಸಾರಿಗೆ ಕಾರ್ಮಿಕರು ದುಡಿಮೆ ಇಲ್ಲದೇ ವಿಷ ಕುಡಿಯುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಸಂಘ ವಿಷಾದಿಸಿದೆ.
ನಗರ ಸಾರಿಗೆ ಕಾರ್ಮಿಕರಿಗೆ ಉದ್ಯೋಗ ಒದಗಿಸಬೇಕು. ಇಲ್ಲವಾದಲ್ಲಿ ಆಮರಣಾಂತರ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ ಎಂದು ಕಾರ್ಮಿಕರ ಸಂಘ ಎಚ್ಚರಿಸಿದೆ.
ಸಂಘದ ವಿ.ಮಂಜುನಾಥ್ ಸೇರೆಗಾರ್, ನರೇಂದ್ರ, ರವಿ, ಚಂದ್ರೇಶ್, ದೊಡ್ಡಲಿಂಗರಾಜ್, ರಮೇಶ್ ನಾಯ್ಕ್ ಮತ್ತಿತರರು ಇದ್ದರು.