ಒಡ್ಡು ಕಟ್ಟದ ಪಪಂ; ನೀರಿಗೆ ಹಾಹಾಕಾರ
ಸೊರಬ: ಪಟ್ಟಣದಲ್ಲಿ ನೀರಿಗೆ ಹಾಹಾಕಾರ ಆರಂಭಗೊಳ್ಳುವ ಮುನ್ನ ಅಗತ್ಯ ಕ್ರಮ ಕೈಗೊಳ್ಳಬೇಕಾದ ಪಟ್ಟಣ ಪಂಚಾಯಿತಿ ಆಡಳಿತ ಕುಂಭಕರ್ಣ ನಿದ್ರೆಯಲ್ಲಿದೆ. ಇದರಿಂದಾಗಿ ವರ್ಷಪೂರ್ತಿ ಕುಡಿಯುವ ನೀರು ಪೂರೈಸುವ ವರದಾ ನದಿ ನೀರು ವ್ಯರ್ಥವಾಗುತ್ತಿದೆ.
ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವಧಿಯಲ್ಲಿ ಹೊಳೆ ಜೋಳದಗುಡ್ಡೆ ಬಳಿಯ ವರದಾ ನದಿಯಿಂದ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಲು ಯೋಜಿಸಲಾಗಿತ್ತು. ಯೋಜನೆಗೆ ಪೂರಕವಾಗಿ ಅಲ್ಲಿಂದ ಪೈಪ್ಲೈನ್ ಆಗಿ, ತಾತ್ಕಾಲಿಕ ಒಡ್ಡು ನಿರ್ಮಾಣದ ಮೂಲಕ ನೀರು ಸರಬರಾಜು ಮಾಡಲಾಯಿತು.
ಈ ಅವಧಿಯಲ್ಲಿ ನಿರ್ಮಿಸಿದ ತಾತ್ಕಾಲಿಕ ಒಡ್ಡು ಶಾಶ್ವತವಾಗಿ ಉಳಿದಿದೆ. ನೀರು ಲಭ್ಯವಿರುವಾಗಲೆ ಅಡ್ಡ ಒಡ್ಡು ನಿರ್ಮಿಸಿದರೆ ಮಾತ್ರ ನೀರಿನ ಕೊರತೆ ಅಷ್ಟಾಗಿ ಆಗಲಾರದು. ಆದರೆ, ಪ್ರತಿವರ್ಷ ನಮ್ಮ ಪಪಂ ಆಡಳಿತಕ್ಕೆ ಒಡ್ಡು ಕಟ್ಟಲು ಮೇಲಿಂದ ಮೇಲೆ ನೆನಪು ಮಾಡಿಕೊಡಬೇಕಷ್ಟೇ.
ಚಂದ್ರಗುತ್ತಿ, ಜೋಳದಗುಡ್ಡೆ ವರದಾ ನದಿಯ ನೀರಿಗೆ ಇನ್ನೂ ಅಡ್ಡಗಟ್ಟೆ ಹಾಕಿಲ್ಲ. ಸುಮಾರು 20 ಕಿಮೀ ದೂರದಿಂದ ನೀರು ಸರಬರಾಜು ಆಗುತ್ತಿದ್ದು, ಉತ್ತಮ ಫಿಲ್ಟರ್ ವ್ಯವಸ್ಥೆ ಇಲ್ಲ. ಇದರಿಂದ ನೀರು ಪ್ರಮಾಣ ತಗ್ಗಿದಂತೆ ಕಣಕು ನೀರು ಬರುತ್ತದೆ. ಸಾಲದೆಂಬಂತೆ ಇಷ್ಟೆಲ್ಲ ನೀರಿನ ಹಾಹಾಕಾರ ಇದ್ದರೂ ನೀರು ಪೋಲಾಗುವುದನ್ನು ತಪ್ಪಿಸಲು ಆಡಳಿತ ಮಂಡಳಿ ಮುಂದಾಗುತ್ತಿಲ್ಲ ಎಂಬುದಕ್ಕೆ ಸೊರಬದ ತುಂಬಾ ಇರುವ ನಲ್ಲಿಗಳು ಸೋರುತ್ತಿರುವುದೇ ಉದಾಹರಣೆ.
ಕೆಲವೆಡೆ ನಲ್ಲಿಯೇ ಇಲ್ಲ. ಇಲ್ಲಿನ ಕೆಇಬಿ ಕಾಲೋನಿಯ ಒಂದು ಓವರ್ಹೆಡ್ ಟ್ಯಾಂಕ್ ಸುಸ್ಥಿತಿಯಲ್ಲಿದ್ದರೂ ಅದನ್ನು ಬಳಸದೆ ಹಾಳುಗೆಡವಲಾಗಿದೆ. ಅಲ್ಲಲ್ಲಿ ಪೈಪ್ ಒಡೆದು ನೀರು ವ್ಯರ್ಥವಾಗುತ್ತಿದೆ. ಆದರೂ, ಅಧಿಕಾರಿಗಳು, ಸಿಬ್ಬಂದಿ ನಿಗಾ ವಹಿಸದೆ ನೀರು ವ್ಯರ್ಥವಾಗುತ್ತಿರುವುದು ಸಾಮಾನ್ಯವಾಗಿದೆ.
ಸೊರಬ ಪಟ್ಟಣಕ್ಕಲ್ಲದೆ ಚಂದ್ರಗುತ್ತಿ ಗ್ರಾಮಕ್ಕೂ ಕುಡಿಯುವ ನೀರು ಒದಗಿಸುವ ಈ ಒಡ್ಡು ನಿರ್ಮಾಣದ ವಿಷಯದಲ್ಲಿ ಆಡಳಿತ ನಿಧಾನಗತಿ ಅನುಸರಿಸುತ್ತಿದೆ. ಇದರಿಂದ ಚಂದ್ರಗುತ್ತಿ ಗ್ರಾಮ ವರದಾ ನದಿ ದಂಡೆಯಲ್ಲಿದೆಯಾದರೂ ವರ್ಷದ ಬೇಸಿಗೆ ದಿನಗಳಲ್ಲಿ ಕುಡಿಯುವ ನೀರಿನ ಬವಣೆಯಿಂದ ಬಚಾವಾಗಿಲ್ಲ. ಇಲ್ಲಿನ ಸುಮಾರು 600 ಕುಟುಂಬಗಳ 2-3 ಸಾವಿರ ಜನರು, ಜಾನುವಾರುಗಳಿಗೆ ಇದೇ ನದಿಯೇ ಜೀವನದಿ. ಈ ಸಂಗತಿ ಹಿಂದಿನಿಂದಲೂ ಆಡಳಿತದ ಗಮನಕ್ಕೆ ಬಂದಾಗ, ಈ ಬಗ್ಗೆ ಗಮನ ಸೆಳೆದಾಗ ಇಂದಿಗೂ ಇಲ್ಲಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸಿಲ್ಲ. ಶಾಶ್ವತ ಒಡ್ಡು ನಿರ್ಮಿಸಿಲ್ಲ. ಇದಕ್ಕೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಕಾರಣ ಎನ್ನುವ ಗ್ರಾಮಸ್ಥರು ಇಲ್ಲಿನ ಪ್ರಸಿದ್ಧ ಜಾತ್ರೆಯ ವೇಳೆಗೆ ನೀರಿನ ಕೊರತೆ ಗಮನಾರ್ಹವಾಗಿ ಉಳಿದುಕೊಂಡಿದೆ ಎಂದು ಬೇಸರಿಸುತ್ತಾರೆ.
ಸಾಲದೆಂಬಂತೆ ಈ ಬ್ಯಾರೇಜ್ ಬಳಿಯೇ ಹತ್ತಾರು ಅಧಿಕ ಶಕ್ತಿಯ ಪಂಪ್ಗಳ ಮೂಲಕ ಜೋಳ ಮುಂತಾದ ಹಕ್ಕಲು ಪೈರುಗಳಿಗೆ ಅನಧಿಕೃತ ನೀರು ಬಳಸುತ್ತಿದ್ದಾರೆ. ಇದರಿಂದ ಬಹುಬೇಗ ನದಿ, ನದಿಗಳಲ್ಲಿನ ಜಾಕ್ವೆಲ್ಗಳು ಒಣಗಲಾರಂಬಿಸುತ್ತದೆ. ಈ ವಿಷಯ ಗಮನಿಸಿದ್ದ ಹಿಂದಿನ ಜಿಲ್ಲಾಧಿಕಾರಿ ಕುಡಿಯುವ ನೀರು ಬಳಸುವ ಜಾಗೆಯಲ್ಲಿ ಕೃಷಿಗೆ ನೀರು ಬಳಸಬಾರದೆಂಬ ಆಜ್ಞೆ ಹೊರಡಿಸಿದ್ದರು. ಆದರೂ ಆದೇಶಕ್ಕೆ ಕ್ಯಾರೆ ಎನ್ನದೆ ಬೇಸಿಗೆ ಬೆಳೆಗಾಗಿ ನೀರು ಬಳಸುವುದು ಮುಂದುವರಿದಿತ್ತು. ಈಗಲೂ ಇದೆ. ಇಷ್ಟೆಲ್ಲ ಅವ್ಯವಸ್ಥೆ ಕಂಡು ಬರುತ್ತಿದ್ದರೂ ಪರ್ಯಾಯ ಮಾರ್ಗದ ಕುರಿತು ಚಿಂತನೆ ನಡೆಯಲಿಲ್ಲ ಎಂಬುದು ವಿಷಾಧನೀಯವೂ ಹೌದು.