ದೌರ್ಜನ್ಯ ತಾಳದೇ ದೇವರಿಗೆ ಮೊರೆ!
ಶಿವಮೊಗ್ಗ: ಇಲಾಖೆಯೊಳಗಿನ ದೌರ್ಜನ್ಯದಿಂದ ರೋಸಿಹೋದ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಒಬ್ಬ ಚಾಲಕ ನ್ಯಾಯ ಕೊಡಿಸುವಂತೆ ಧರ್ಮಸ್ಥಳ ಮಂಜುನಾಥನಿಗೆ ಮೊರೆ ಹೋಗಿರುವ ರೋಚಕ ಘಟನೆ ಇದು.
ಡಿಪೋ ಮ್ಯಾನೇಜರ್ ದಿನೇಶ್ಕುಮಾರ್ ಚನ್ನಗಿರಿಯವರು ಪದೇ ಪದೇ ಕಿರುಕುಳ ನೀಡುತ್ತಿದ್ದಾರೆ. ವಿನಾಕಾರಣ ಆರೋಪ ಹೊರಿಸಿ ಕೆಲಸಕ್ಕೆ ಅಡಚಣೆ ಮಾಡುತ್ತಿದ್ದಾರೆ.
ನನಗೆ ನ್ಯಾಯ ಕೊಡಿಸು ದೇವ, ನನ್ನಿಂದ ತಪ್ಪಾಗಿದ್ದರೆ ನನಗೆ ಶಿಕ್ಷೆಯಾಗಲಿ. ದಿನೇಶ್ ಅವರು ತಪ್ಪೆಸಗಿದ್ದರೆ ಅವರನ್ನು ಶಿಕ್ಷಿಸಲಿ ಎಂದು 250ಯನ್ನು ಧರ್ಮಸ್ಥಳಕ್ಕೆ ಹರಕೆ ಕಟ್ಟಿದ್ದಾರೆ ಆ ಚಾಲಕ.
ಪತ್ರದ ದಾಖಲೆಯೊಂದಿಗೆ 'ಕನ್ನಡಪ್ರಭ' ಸಂಪರ್ಕಿಸಿದ ಫ್ರಾನ್ಸಿಸ್ (ಹೆಸರು ಬದಲಿಸಲಾಗಿದೆ) ಶಿವಮೊಗ್ಗ ಘಟಕದ ಒಬ್ಬ ಹಿರಿಯ ಚಾಲಕ. ಇವರು ಹೇಳಿದ್ದಿಷ್ಟು, 'ರಜೆಗಾಗಿ ವಿನಂತಿಸಿಕೊಂಡು ಅನುಮತಿ ಪಡೆದು ರಜೆ ಹಾಕಿದರೆ, ಅಧಿಕಾರಿಗಳು ಮರುದಿನ ಆರೋಪ ವರದಿ ಸಲ್ಲಿಸಿದ್ದಾರೆ. ನಾನು ಕೆಲಸಕ್ಕೆ ಹೋಗುವುದಿಲ್ಲ, ಏನು ಬೇಕಾದರೂ ಮಾಡಿಕೊಳ್ಳಿ ಎಂದು ತಾನು ಹೇಳಿದ್ದಾಗಿ ದಾಖಲಿಸಿಕೊಂಡು, ನನ್ನ ಸೇವೆಗೆ ಚ್ಯುತಿ ಬರುವಂತೆ ಕ್ರಮ ಕೈಗೊಳ್ಳಲು ಆಸಕ್ತಿ ವಹಿಸುತ್ತಾರೆ'.
ಚಾಲಕ- ನಿರ್ವಾಹಕರಿಂದ ಮಾಸಿಕ ಹಣ ಕೊಡುವಂತೆ ಪೀಡಿಸುವುದು ಸಾಮಾನ್ಯ ಸಂಗತಿ. ನನಗೂ ಈ ರೀತಿ ಹಣ ಕೇಳುತ್ತಿದ್ದರು.
ನಾನು ನಿರಾಕರಿಸುತ್ತಲೇ ಬಂದೆ. ಇದರಿಂದ ನನ್ನ ಮೇಲೆ ಹಗೆತನ ಹೆಚ್ಚಾಗುತ್ತಲೇ ಹೋಯಿತು. ಅಂತಿಮವಾಗಿ ನನ್ನ ಮೇಲೆ ದೂರುಗಳು ಹುಟ್ಟಿಕೊಳ್ಳಲು ಆರಂಭವಾಯಿತು ಎನ್ನುತ್ತಾರೆ ಅವರು.
ನನ್ನ ಸಹೋದ್ಯೋಗಿಗಳಿಂದಲೇ ದೂರು ಬರೆಸಿದರು, ಕರ್ತವ್ಯಕ್ಕೆ ಅಡ್ಡಗಾಲು ಹಾಕಲಾರಂಭಿಸಿದರು. ಇದರಿಂದ ಬೇಸತ್ತು ಹಿರಿಯ ಅಧಿಕಾರಿಗಳಿಂದ ಹಿಡಿದು ಮುಖ್ಯಮಂತ್ರಿಗಳಾದಿಯಾಗಿ ಎಲ್ಲರಿಗೂ ದೂರು ಸಲ್ಲಿಸಿದೆ.
ಒಮ್ಮೆ ತನಿಖೆಯ ಶಾಸ್ತ್ರವೂ ನಡೆಸಿದರು. ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಅನಿವಾರ್ಯವಾಗಿ ನಾನು ದೇವರ ಮೊರೆ ಹೋಗಬೇಕಾಯಿತು ಎಂದರು ಫ್ರಾನ್ಸಿಸ್.
-ಶ್ರೀಕಾಂತ್ ಭಟ್