ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಕ್ಕಳು ಸಹಜವಾಗಿ ಕಲಿಯುವಂತಾಗಲಿ

Lingaraj Badiger
Updated On : 21 Dec 2013, 11:07 am

ಕ.ಪ್ರ.ವಾರ್ತೆ, ಸಾಗರ, ಡಿ. 20
ಪ್ರಾಥಮಿಕ ಹಂತದಲ್ಲಿ ಮಕ್ಕಳು ಸಹಜವಾಗಿ ಕಲಿಯುವಂತಾಗಬೇಕು ಎಂದು ಸಾಹಿತಿ ಡಾ. ನಾ. ಡಿಸೋಜ ಹೇಳಿದರು.
ಪಟ್ಟಣದ ಸಂತ ಜೋಸೆಫರ ಕನ್ನಡ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಪ್ರಾಥಮಿಕ ಹಂತದಲ್ಲಿ ಮಕ್ಕಳ ಮೇಲೆ ಪೋಷಕರು ಹಾಗೂ ಶಿಕ್ಷಕರು ಒತ್ತಡ ಹೇರಿದರೆ ಅವರ ಮುಗ್ಧ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಶಿಕ್ಷಣ ಶಿಕ್ಷೆಯಾಗಬಾರದು. ಆಟವಾಡುತ್ತ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತ ಪರಿಸರದೊಂದಿಗೆ ಕಲಿಯಬೇಕು. ಕೇವಲ ನಾಲ್ಕು ಗೋಡೆಗಳ ಶಿಕ್ಷಣದಿಂದ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣವಾಗುವುದಿಲ್ಲ. ಪುಸ್ತಕದ ಶಿಕ್ಷಣದ ಜೊತೆಗೆ ಸಮಾಜದಲ್ಲಿ ಹೇಗೆ ಬದುಕಬೇಕು, ಬದುಕನ್ನು ಹೇಗೆ ಎದುರಿಸಬೇಕು, ನಮ್ಮ ನಡತೆ ಹೇಗಿರಬೇಕು ಎನ್ನುವ ಬದುಕಿನ ಶಿಕ್ಷಣ ಕಲಿಸಬೇಕು ಎಂದು ಸಲಹೆ ಮಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಲಿಂಗಪ್ಪ, ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಇನ್ನಿಲ್ಲದಷ್ಟು ಪ್ರೋತ್ಸಾಹ ನೀಡುತ್ತಿದೆ. ಶಾಲೆಗಳು ಹಾಗೂ ವಿದ್ಯಾರ್ಥಿಗಳು ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಧರ್ಮಗುರುಗಳಾದ ವೀನಸ್ ಪ್ರವೀಣ್ ಕುಲಾಸೊ ಮಾತನಾಡಿ, ಹೆಚ್ಚಿನ ಪೋಷಕರು ಹಾಗೂ ಮಕ್ಕಳು ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಕಟ್ಟುಬಿದ್ದಿದ್ದಾರೆ. ಆದರೆ, ಮಾತೃಭಾಷೆಯಲ್ಲಿ ಕಲಿತರೆ ಅದರ ಪರಿಣಾಮ ಗಾಢವಾಗಿರುತ್ತದೆ. ನಮ್ಮ ಸುತ್ತಮುತ್ತಲಿರುವ ಖ್ಯಾತ ವ್ಯಕ್ತಿಗಳೆಲ್ಲ ಕನ್ನಡ ಮಾಧ್ಯಮದಲ್ಲಿಯೇ ಕಲಿತಿರುವುದನ್ನು ಮರೆಯಬಾರದು. ಕನ್ನಡ ಕಲಿಕೆಗೆ ಯಾವುದೇ ಕೀಳರಿಮೆ ಬೇಡ ಎಂದು ಹೇಳಿದರು.
ಬೆಂಗಳೂರು ಜ್ಯೋತಿ ಕಾಲೇಜಿನ ಉಪನ್ಯಾಸಕಿ ಸಿಸ್ಟರ್ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಸಂಚಾಲಕಿ ಸಿಸ್ಟರ್ ಸುಜನ್, ನಗರಸಭೆ ಸದಸ್ಯ ತೀ.ನ. ಶ್ರೀನಿವಾಸ್, ಕಾರ್ಗಲ್ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಪುಷ್ಪ, ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಮೌಲಿ ಹಾಜರಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement