ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

20ನಿಮಿಷ 20ಸುದ್ದಿ

Mainashree
Updated On : 22 Dec 2013, 11:00 am

ಕಲಿಕೋತ್ಸವ ಶಿಕ್ಷಕ, ವಿದ್ಯಾರ್ಥಿಗೆ ಪೂರಕ
ಶಿವಮೊಗ್ಗ:  ಗೋಪಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ವಿದ್ಯಾನಿಕೇತನ ಶಾಲೆ ಆವರಣದಲ್ಲಿ ಶನಿವಾರ ಪರಿಣಾಮಕಾರಿ ಬೋಧನಾ- ಕಲಿಕೆ ಪ್ರಕ್ರಿಯೆ ಹಾಗೂ ಗುಣಾತ್ಮಕ ಕಲಿಕೆಗೆ ಹಾದಿ ಎಂಬುದನ್ನು ಸಾಬೀತುಪಡಿಸುವ ಕಲಿಕೋತ್ಸವ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಲಾಯಿತು. ಮಿಳಘಟ್ಟ ಕ್ಲಸ್ಟರ್‌ನ ಸಂಪನ್ಮೂಲ ವ್ಯಕ್ತಿ ಎಂ.ಪಿ. ಮಂಜುನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಅಯಾಜ್ ಖಾನ್ ಅಫ್ರಿ, ಕಲಿಕೋತ್ಸವವು ಸರ್ಕಾರಿ ಶಾಲೆಗಳಲ್ಲಿನ ಗುಣಾತ್ಮಕ ಶಿಕ್ಷಣ ನೀಡುವ ವ್ಯವಸ್ಥೆಯ ಬಗ್ಗೆ ಸಮುದಾಯಕ್ಕೆ ತಿಳಿಸಲು ಮತ್ತು ಆ ಮೂಲಕ ಸರ್ಕಾರಿ ಶಾಲೆಗಳಿಗೆ ಆಕರ್ಷಿಸಲು ಸಹಾಯಕವಾಗಿದ್ದು, ಇಂತಹ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಅನುಕೂಲವಾಗಲಿದೆ ಎಂದರು. ಈ ಕಾರ್ಯಕ್ರಮಕ್ಕೆ ರಾಣೀಬೆನ್ನೂರು ತಾಲೂಕಿನ ಖಂಡೋರಾಯನಹಳ್ಳಿ ಸಿದ್ಧರೂಢಮಠದ ಶ್ರೀ ನಾಗರಾಜಾನಂದಸ್ವಾಮಿ ಅವರ ಭಕ್ತ ನಂದಕುಮಾರ್ ಮಕ್ಕಳಿಗೆ ಉಚಿತವಾಗಿ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದರು. ಕಾರ್ಯಕ್ರಮದಲ್ಲಿ ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆಯ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಆರ್.ಪಿ.ಮಂಜುನಾಥ್, ಶಿವಗಂಗಮ್ಮ, ಚಂದ್ರಿಕಾ, ಮಂಜಾನಾಯ್ಕ್, ಜಿ.ಹಾಲೇಶಪ್ಪ, ಜಯಶೀಲ, ಸವಿತ, ಪುಷ್ಪಲತ, ರಾಮಚಂದ್ರಪ್ಪ ಮತ್ತಿತರರು ಇದ್ದರು.

ಜಾನುವಾರು ಕಳ್ಳತನ: ಪ್ರತಿಭಟನೆ
ಶಿವಮೊಗ್ಗ:  ತಾಲೂಕಿನ ಹಲವಾರು ಗ್ರಾಮಗಳಲ್ಲಿ ಜಾನುವಾರುಗಳ ಕಳ್ಳತನ ಅವ್ಯಾಹತವಾಗಿ ನಡೆಯುತ್ತಿದ್ದು, ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಶಿವಮೊಗ್ಗ ತಾಲೂಕಿನ ಸುತ್ತ-ಮುತ್ತಲಿನ ಗ್ರಾಮಗಳ ಕೊಟ್ಟಿಗೆಯಲ್ಲಿ ಕಟ್ಟಿರುವ ಮತ್ತು ಮೇಯಲು ಹೋದ ದನ, ಕರು, ಎಮ್ಮೆ, ಎತ್ತುಗಳನ್ನು ಕಳ್ಳತನ ಮಾಡಿಕೊಂಡು ಕಸಾಯಿಖಾನೆಗಳಿಗೆ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಮಾಹಿತಿ ನೀಡಲಾಗಿದೆ. ಆದರೆ, ಯಾವುದೇ ಕ್ರಮಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ದೂರಿದರು. ತಾಲೂಕಿನ ಶ್ರೀರಾಂಪುರದ ರಾಜೇಶ್ ಹಾಗೂ ಆನಂದ್ ಎಂಬುವವರ ಕೊಟ್ಟಿಗೆಯ ಹಸುಗಳು ತಿಂಗಳ ಹಿಂದೆ ಕಾಣಿಯಾಗಿದ್ದವು. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರೂ ಕ್ರಮ ಕೈಗೊಂಡಿಲ್ಲ. ಪುಟ್ಟಮ್ಮ ಎಂಬುವವರ ಎಮ್ಮೆಗಳು, ತ್ಯಾವರೆಕೊಪ್ಪದ ಆಯಾಮ್, ಮುದ್ದಿನಕೊಪ್ಪದ ಶಂಕರಿ ಅವರ 15 ಎಮ್ಮೆಗಳು ಕಳ್ಳತನವಾಗಿವೆ. ಕಳುವಾಗಿರುವ ರಾಸುಗಳ ಮಾಲೀಕರಿಗೆ ಸರ್ಕಾರದಿಂದ ಪರಿಹಾರ ಧನ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಂಘದ ಕಾರ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ, ಜಿಲ್ಲಾಧ್ಯಕ್ಷ ಟಿ.ಎಂ. ಚಂದ್ರಪ್ಪ, ಕಡಿದಾಳು ಶಾಮಣ್ಣ, ಈರಣ್ಣ, ಇ.ಬಿ. ಜಗದೀಶ್ ಮತ್ತಿತರರು ಇದ್ದರು.

ಜ.5ರಿಂದ ಯುವಜನ ಮೇಳ
ಶಿವಮೊಗ್ಗ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಅಬ್ಬಲಗೆರೆ, ಪತಂಜಲಿ ಯುವಕ ಮಂಡಳಿ ಹಾಗೂ ಸ್ಥಳೀಯ ಯುವಕ-ಯುವತಿ ಮಂಡಳಿಗಳ ಸಂಯುಕ್ತಾಶ್ರಯದಲ್ಲಿ 2014ರ ಜನವರಿ 5ರಂದು ಶಿವಮೊಗ್ಗ ತಾಲೂಕು ಅಬ್ಬಲಗೆರೆಯ ಸರ್ಕಾರಿ ಪ್ರೌಢಶಾಲಾ ಆವರಣದ ರಂಗಮಂದಿರದಲ್ಲಿ ಶಿವಮೊಗ್ಗ ತಾಲೂಕು ಮಟ್ಟದ ಯುವಜನ ಮೇಳವನ್ನು ಏರ್ಪಡಿಸಲಾಗಿದೆ. ಸ್ಫರ್ಧಾಳುಗಳಿಗೆ ಉಪಹಾರ ವ್ಯವಸ್ಥೆ ಕಲ್ಪಿಸಲಾಗುವುದು. ತಾಲೂಕು ಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸುವ ಯುವಕ-ಯುವತಿ ಮಂಡಳಿಗಳಿಗೆ 2014-15ನೇ ಸಾಲಿನಲ್ಲಿ ವಿವಿಧ ಯೋಜನೆಯಡಿ ಅನುದಾನಗಳನ್ನು ನೀಡಲಾಗುವುದು ಹಾಗೂ ತರಬೇತಿ ಶಿಬಿರಗಳಿಗೆ ಕಳುಹಿಸಿಕೊಡಲಾಗುವುದು. ಈ ಯುವಜನ ಮೇಳದಲ್ಲಿ ಭಾಗವಹಿಸಲಿಚ್ಚಿಸುವ ಸ್ಪರ್ಧಿಗಳು ಜನವರಿ 5ರಂದು ಬೆಳಿಗ್ಗೆ 9 ಗಂಟೆಯೊಳಗಾಗಿ ಅಬ್ಬಲಗೆರೆ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಅಥವಾ ಸಂಘಟಕರು-ಮೊ.9731160675 ಇವರಲ್ಲಿ ವರದಿ ಮಾಡಿಕೊಂಡು ಹೆಸರು ನೋಂದಾಯಿಸಿಕೊಳ್ಳುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ದೃಶ್ಯಮಾಧ್ಯಮ ಕಾರ್ಯಾಗಾರಕ್ಕೆ ಅರ್ಜಿ
ಶಿವಮೊಗ್ಗ: ವಾರ್ತಾ ಇಲಾಖೆಯು ದೃಶ್ಯಮಾಧ್ಯಮದಲ್ಲಿ ಅಧ್ಯಯನ ಮಾಡುವ ಪರಿಶಿಷ್ಟ ಜಾತಿಯ 100 ಅಭ್ಯರ್ಥಿಗಳಿಗೆ ಚಿತ್ರಕಲೆ, ಗ್ರಾಫಿಕ್ಸ್ ಕಲೆ, ಅನ್ವಯಿಕ ಕಲೆಗಳ ಕುರಿತು 5 ದಿನಗಳ ಕಾರ್ಯಾಗಾರವನ್ನು ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನಲ್ಲಿ 2014ರ ಜನವರಿ ಮತ್ತು ಫೆಬ್ರವರಿ ಮಾಹೆಯಲ್ಲಿ ನಡೆಸಲು ಉದ್ದೇಶಿಸಿದ್ದು, ಪರಿಶಿಷ್ಟ ಜಾತಿಯ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಊಟ, ವಸತಿ ಸೌಕರ್ಯ ಒದಗಿಸಲಾಗುವುದು. ಕಾರ್ಯಾಗಾರಕ್ಕೆ ರಾಜ್ಯದ ಯಾವುದೇ ಕಲಾ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವ ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಅಭ್ಯರ್ಥಿಗಳು ತಮ್ಮ ಹೆಸರು, ವಯಸ್ಸು, ವಿಳಾಸ, ವಿದ್ಯಾರ್ಹತೆ, ಜಾತಿ ಇತ್ಯಾದಿ ಸ್ವ-ವಿವರಗಳುಳ್ಳ ಮಾಹಿತಿಯನ್ನು ಬಿಳಿಹಾಳೆಯ ಮೇಲೆ ಬೆರಳಚ್ಚು ಮಾಡಿಸಿ ಅಥವಾ ಕೈಯಿಂದ ಸ್ಪಷ್ಟವಾಗಿ ಬರೆದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 31ರೊಳಗಾಗಿ ನಿರ್ದೇಶಕರು, ವಾರ್ರ್ತಾ ಇಲಾಖೆ, ವಾರ್ತಾಸೌಧ, ನಂ.17, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು-560001 ವಿಳಾಸಕ್ಕೆ ಖುದ್ದಾಗಿ ಅಥವಾ ಅಂಚೆ/ಕೊರಿಯರ್ ಮೂಲಕ ತಾಂತ್ರಿಕ ವೃತ್ತಿ ತರಬೇತಿಗಾಗಿ ಅರ್ಜಿ ಎಂದು ಲಕೋಟೆ ಮೇಲೆ ನಮೂದಿಸಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗಾಗಿ ಉಪನಿರ್ದೇಶಕರು (ಚಲನಚಿತ್ರ), ವಾರ್ತಾ ಇಲಾಖೆ, ಬೆಂಗಳೂರು, ದೂರವಾಣಿ ಸಂಖ್ಯೆ 080-22028052/56 ಸಂಪರ್ಕಿಸಬಹುದು.

ರಾಷ್ಟ್ರಮಟ್ಟದ ಕ್ರೀಡಾಪಟುಗಳಿಂದ ಅರ್ಜಿ
ಶಿವಮೊಗ್ಗ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕರ್ನಾಟಕವನ್ನು ಅಧಿಕೃತವಾಗಿ ಪ್ರತಿನಿಧಿಸಿ, ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ, ಪದಕ ಪಡೆದ ರಾಜ್ಯದ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡಲು ಉದ್ದೇಶಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಚಿನ್ನದ ಪದಕಕ್ಕೆ 1 ಲಕ್ಷ, ಬೆಳ್ಳಿ ಪದಕಕ್ಕೆ 50 ಸಾವಿರ ಹಾಗೂ ಕಂಚಿನ ಪದಕಕ್ಕೆ 25 ಸಾವಿರ ನಗದು ಪುರಸ್ಕಾರ ನೀಡಲಾಗುವುದು. 2012ರಲ್ಲಿ ರಾಷ್ಟ್ರಮಟ್ಟದಲ್ಲಿ ನಡೆದ ಪಂದ್ಯಾವಳಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಕ್ರೀಡಾಕೂಟಗಳಲ್ಲಿ ಭಾಗವಹಿಸಿ, ಪದಕ- ಪ್ರಶಸ್ತಿ ಪಡೆದ ಕ್ರೀಡಾಳುಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯ ಅರ್ಜಿಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 31ರೊಳಗಾಗಿ ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 08182-223328 ಸಂಪರ್ಕಿಸಬಹುದು.

ಉಚಿತ ಮೂಳೆ ತಪಾಸಣಾ ಶಿಬಿರ
ಶಿವಮೊಗ್ಗ: ನಗರದ ಪಾರ್ಕ್ ಬಡಾವಣೆಯಲ್ಲಿರುವ ವಾತ್ಸಲ್ಯ ಆಸ್ಪತ್ರೆಯಲ್ಲಿ ಡಿ.22ರಂದು ಬೆಳಗ್ಗೆ 10ರಿಂದ 2 ಗಂಟೆ ವರೆಗೆ ಉಚಿತ ಮೂಳೆ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಮಂಡಿ ನೋವು, ಮೊಣಕಾಲು ನೋವು, ಬೆನ್ನು ನೋವು, ಎಲುಬು ಮತ್ತು ಕೀಲುಗಳಿಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿರುವವರು ಶಿಬಿರದಲ್ಲಿ ಪಾಲ್ಗೊಳ್ಳಬಹುದು. ತಜ್ಞ ವೈದ್ಯ ಡಾ. ಬಸವೇಶ ಗದ್ದಿಕೇರಿ ತಪಾಸಣೆ ನಡೆಸಿ ಸಲಹೆ ನೀಡಲಿದ್ದಾರೆ. ಮಾಹಿತಿಗೆ ಪಾರ್ಕ್ ಬಡಾವಣೆಯಲ್ಲಿರುವ ಆಸ್ಪತ್ರೆಯನ್ನು ಸಂಪರ್ಕಿಸಬಹುದು (ಮೊ- 9844201082) ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಧೀರೇಂದ್ರ ಫಂಡರಿ ತಿಳಿಸಿದ್ದಾರೆ.
ಶಿಕ್ಷಣ ಅದಾಲತ್ ರದ್ದು: ಸಾರ್ವಜನಿಕ ಶಿಕ್ಷಣ ಇಲಾಖೆಯು ಡಿಸೆಂಬರ್ 20ರಂದು ನಗರದ ಉಪನಿರ್ದೇಶಕರ ಕಚೇರಿಯಲ್ಲಿ ನಡೆಸಲು ಉದ್ದೇಶಿಸಿದ್ದು ಶಿಕ್ಷಣ ಅದಾಲತ್‌ನ್ನು ಕಾರಣಾಂತರಗಳಿಂದಾಗಿ ಮುಂದೂಡಲಾಗಿದೆ ಎಂದು ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಶರಣ ಸಂಗಮ: ಇಲ್ಲಿನ ವೆಂಕಟೇಶ ನಗರದಲ್ಲಿರುವ ಬಸವ ಕೇಂದ್ರದಲ್ಲಿ 180ನೇ ಶರಣ ಸಂಗಮ ಹಮ್ಮಿಕೊಳ್ಳಲಾಗಿದೆ. ಬಸವ ಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಜಿ. ಬೆನಕಪ್ಪ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಎಚ್.ವಿ. ಮಹೇಶ್ವರಪ್ಪ ಪಾಲ್ಗೊಳ್ಳಲಿದ್ದು, ಮೋಹನ್ ಚಂದ್ರಗುತ್ತಿ ಉಪನ್ಯಾಸ ನೀಡುವರು.

ಮೂಲ ಸೌಲಭ್ಯ ಆಗ್ರಹಿಸಿ ಪ್ರತಿಭಟನೆ
ಶಿವಮೊಗ್ಗ: ನಗರಸಭೆ 29ನೇ ವಾರ್ಡ್‌ಗೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸದಸ್ಯರು ಶನಿವಾರ ನಗರಸಭೆ ಎದುರು ಪ್ರತಿಭಟನೆ ನಡೆಸಿದರು. 29ನೇ ವಾರ್ಡ್‌ನ ಅಜಾದ್ ನಗರದಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೇ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಹೆಚ್ಚು ಅಲ್ಪಸಂಖ್ಯಾತರಿರುವ ಈ ವಾರ್ಡ್‌ನಲ್ಲಿ ಚರಂಡಿ, ಬೀದಿದೀಪಗಳು, ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಯಾವುದು ಸರಿಯಿಲ್ಲ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ದೂರಿದರು. ಈ ಬಡಾವಣೆಯಲ್ಲಿ 7 ನೀರಿನ ಟ್ಯಾಂಕರ್‌ಗಳಿವೆ. ಆದರೆ, ಕೇವಲ 2 ರಲ್ಲಿ ಮಾತ್ರ ನೀರು ಬರುತ್ತಿದೆ. ಉರ್ದು ಶಾಲೆ ಕಾಪೌಂಡ್ ಹಾಳಾಗಿ ವರ್ಷಕಳೆದರೂ ಕಾಮಗಾರಿ ಪ್ರಾರಂಭಿಸುವ ಗೋಜಿಗೆ ಹೋಗಿಲ್ಲ. ಆದರಿಂದ ನಗರಸಭೆ ಆಯುಕ್ತರು ಇಲ್ಲಿನ ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಮಹಮದ್ ಶಕೀಬ್, ಕಲೀಂ, ಆರಿಫ್, ಸೈಫ್, ಇರ್ಫಾನ್ ಮತ್ತಿತರರು ಇದ್ದರು.

ಎಫ್‌ಸಿ, ಎಲ್‌ಎಲ್‌ಆರ್: ಸಾರಿಗೆ ಶಿಬಿರ
ಶಿವಮೊಗ್ಗ: ಸಾರಿಗೆ ಇಲಾಖೆ ಶಿವಮೊಗ್ಗ ಆರ್‌ಟಿಒ ಅಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲಿನ ಭದ್ರಾವತಿ, ತೀರ್ಥಹಳ್ಳಿ ತಾಲೂಕು ಕೇಂದ್ರಗಳಲ್ಲಿ ಚಾಲನಾ ಅನುಜ್ಞಾಪತ್ರ, ಎಫ್ ಸಿ., ಎಲ್‌ಎಲ್‌ಆರ್ ನೀಡಿಕೆಗೆ 2014ನೇ ಸಾಲಿನಲ್ಲಿ ಪ್ರತಿ ತಿಂಗಳ ನಿಗದಿತ ದಿನಾಂಕಗಳಂದು ಸಾರಿಗೆ ಶಿಬಿರಗಳನ್ನು ಏರ್ಪಡಿಸಲು ಉದ್ದೇಶಿಸಿದೆ. ಭದ್ರಾವತಿಯಲ್ಲಿ ಜ.1, 8, 22, 29ರಂದು, ಫೆ.5, 12, 19, 26ರಂದು, ಮಾ.5, 12, 19, 26ರಂದು, ಏ.9, 16, 23, 30ರಂದು, ಮೇ 7, 14, 21, 28ರಂದು, ಜೂ.4, 11, 18, 25ರಂದು, ಜು.2, 9, 16, 23ರಂದು, ಆ.6, 13, 20 ಮತ್ತು 27ರಂದು, ಸೆ.3, 10, 17ರಂದು, ಅ.1, 15 ಮತ್ತು 29ರಂದು, ನ.5, 12, 19 ಮತ್ತು 29ರಂದು, ಡಿ.3, 10, 17, 31ರಂದು. ತೀರ್ಥಹಳ್ಳಿಯಲ್ಲಿ ಜ.17, 31ರಂದು, ಫೆ.14, 28ರಂದು, ಮಾ.14, 28ರಂದು, ಏ.11, 25ರಂದು, ಮೇ 9, 23ರಂದು, ಜೂ.13, 27ರಂದು, ಜುಲೈ 11, 25ರಂದು, ಆ.8, 22ರಂದು, ಸೆ.12, 26ರಂದು, ಅ.17, 31ರಂದು, ನ.14 ಮತ್ತು 28ರಂದು ಮತ್ತು ಡಿ.12, 26ರಂದು ಸಾರಿಗೆ ಶಿಬಿರಗಳನ್ನು ಆಯೋಜಿಸಲಾಗುವುದು ಸಾರ್ವಜನಿಕರು ಈ ಶಿಬಿರದ ಲಾಭ ಪಡೆದುಕೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

'ನಾಡಿ'ಗೆ ನಾಗರಿಕ ಸನ್ಮಾನ ನಾಳೆ
ಸಾಗರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ನಗರಸಭೆ, ವಿವಿಧ ಸಂಘಸಂಸ್ಥೆಗಳ ಆಶ್ರಯದಲ್ಲಿ 23ರಂದು ಸಂಜೆ 5ಕ್ಕೆ ಸರ್ಕಾರಿ ನೌಕರರ ಭವನದ ಎದುರಿನ ರಿಲೆಯನ್ಸ್ ಪೆಟ್ರೋಲ್ ಬಂಕ್ ಆವರಣದಲಿ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಯೋಜಿತರಾಗಿರುವ ಸಾಹಿತಿ ಡಾ. ನಾ. ಡಿಸೋಜರವರಿಗೆ ನಾಗರಿಕ ಸನ್ಮಾನವನ್ನು ಏರ್ಪಡಿಸಲಾಗಿದೆ. ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಡಿಸೋಜ ಅವರನ್ನು ಸನ್ಮಾನಿಸಲಿದ್ದು, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಡಾ.ಕಾಳೆಗೌಡ ನಾಗವಾರ ಅವರು ಕಾಗೋಡು ಹೋರಾಟದ ಹಿನ್ನೆಲೆ ಇರುವ ನಾ.ಡಿಸೋಜಾ ಅವರ 'ಕೊಳಗ' ಕಾದಂಬರಿಯ 3ನೇ ಮುದ್ರಣವನ್ನು ಬಿಡುಗಡೆ ಮಾಡಿ ಅಭಿನಂದನಾ ಭಾಷಣ ಮಾಡಲಿದ್ದಾರೆ. ಉಪವಿಭಾಗಾಧಿಕಾರಿ ಡಾ.ಉದಯಕುಮಾರ್ ಶೆಟ್ಟಿ, ತಾಪಂ ಅಧ್ಯಕ್ಷ ಹರೀಶ್ ಘಂಟೆ, ಜಾನಪದ ವಿದ್ವಾಂಸ ಎನ್. ಹುಚ್ಚಪ್ಪ ಮಾಸ್ತರ್, 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಟಿ.ಪಿ.ರಮೇಶ್, ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ, ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹೆಚ್.ಆರ್. ನಾಗಭೂಷಣ್, ಎಸ್. ಬಸವರಾಜ್ ಪಾಲ್ಗೊಳ್ಳುವರು. ಗಾಯಕಿ ವಸುಧಾಶರ್ಮರಿಂದ ಸುಗಮ ಸಂಗೀತಾ ಕಾರ್ಯಕ್ರಮವಿದೆ.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಿ
ಸೊರಬ: ಶಿಕ್ಷಣಕ್ಕೆ ಪೂರಕವಾದ ಸವಲತ್ತುಗಳನ್ನು ಸರ್ಕಾರದಿಂದ ಪಡೆಯುವುದರ ಜೊತೆಗೆ ಪೋಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ವಿರೋಧ ಪಕ್ಷದ ಮುಖ್ಯ ಸಚೇತಕ ಮಧು ಬಂಗಾರಪ್ಪ ಸಲಹೆ ನೀಡಿದರು. ತಾಲೂಕಿನ ಆನವಟ್ಟಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ, ರಸ್ತೆ, ನೀರು ಮುಂತಾದ ಸೌಲಭ್ಯಗಳನ್ನು ಜನತೆಗೆ ಒದಗಿಸಿಕೊಡುವುದರ ಜೊತೆಗೆ ತಾಲೂಕಿನ ಸಮಗ್ರ ಅಭಿವೃದ್ಧಿಯ ಕಡೆ ಗಮನಹರಿಸಿ ಮುಂದಿನ ದಿನಗಳಲ್ಲಿ ಹಂತ- ಹಂತವಾಗಿ ಕಾರ್ಯಗತಗೊಳಿಸಿವುದಾಗಿ ಭರವಸೆ ನೀಡಿದ ಅವರು, ಪೋಷಕರು ಸರ್ಕಾರಿ ಶಾಲೆಗಳ ಆಡಳಿತ ಹಾಗೂ ಶಿಕ್ಷಕರ ಜೊತೆ  ಸಂಪರ್ಕವಿರಿಸಿಕೊಳ್ಳುವುದರ ಜೊತೆಗೆ ಖಾಸಗಿ ಶಾಲೆಗಳ ವ್ಯಾಮೋಹದಿಂದ ದೂರವಿರಬೇಕು ಎಂದರು. ಶಿಕ್ಷಣ ಸಚಿವರು ಸರ್ಕಾರದ ಯೋಜನೆಗಳ ಹೆಸರಿನಲ್ಲಿ ಲೆಕ್ಕ ನೀಡುವುದಷ್ಟೇ ಅಲ್ಲ. ಶಿಕ್ಷಣ ಕ್ಷೇತ್ರಕ್ಕೆ ಅವಶ್ಯವಿರುವ ಸೌಲಭ್ಯಗಳನ್ನು ಹಾಗೂ ಶಿಕ್ಷಕರನ್ನು ನೇಮಕಾತಿ ಮಾಡುವುದರ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಿ ಎಂದು ತಿಳಿಸಿದರು. ಆನವಟ್ಟಿ ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ ಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷ ಎಚ್.ಎಂ. ಬಸವಲಿಂಗಪ್ಪ, ಉಪಾಧ್ಯಕ್ಷೆ ನೀಲಮ್ಮ ಸುರೇಶ್, ವಿಶಾಲ ದಯಾನಂದಗೌಡ, ತಾಪಂ ಮಾಜಿ ಅಧ್ಯಕ್ಷ ಎಚ್. ಗಣಪತಿ, ಶ್ರೀನಾಥ ಇತರರಿದ್ದರು.

ಶಿರಾಳಕೊಪ್ಪ: ಕಲಿಕೋತ್ಸವಕ್ಕೆ ಚಾಲನೆ
ಶಿರಾಳಕೊಪ್ಪ:  ಪಠ್ಯ ಚಟುವಟಿಕೆಯಲ್ಲಿ ಕಲಿತ ಕಲಿಕಾಂಶ ತೋರ್ಪಡಿಸುವ ಕಲಿಕೋತ್ಸವ ಎಂಬ ವಿನೂತನ ಕಾರ್ಯಕ್ರಮವನ್ನು ಸರ್ಕಾರ ಜಾರಿಗೆ ತಂದಿದ್ದು, ಆ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು.  ಪಟ್ಟಣದ ಸರ್ಕಾರಿ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಪಟ್ಟಣದ ಗುರುಭವನದಲ್ಲಿ ಜಿಪಂ ಸದಸ್ಯ ರುದ್ರಪ್ಪ ದಾನೇರ್ ಚಾಲನೆ ನೀಡಿದರು. ಇದೊಂದು ವಿನೂತನವಾದ ಕಾರ್ಯಕ್ರಮವಾಗಿದ್ದು, ಪ್ರತಿಭಾ ಕಾರಂಜಿಯಲ್ಲಿ ಮಕ್ಕಳ ಪ್ರತಿಭೆ ಗುರುತಿಸಿದ ಹಾಗೆ ಈ ಕಾರ್ಯಕ್ರಮದಲ್ಲಿ ಕಲಿಕೆಯ ಪ್ರದರ್ಶನ ನಡೆಯುವದು ಮಕ್ಕಳ ಬೆಳವಣಿಗೆಗೆ ಪೂರಕವಾಗಲಿದೆ ಎಂದರು. ಕ್ಲಸ್ಟರ್ ಅಧಿಕಾರಿ ನಾಗೇಂದ್ರಪ್ಪ ರಾಗೇರ್ ಮಾತನಾಡಿ, ಇದೊಂದು ಶಾಲೆಗಳ ಬಹಿರಂಗ ತಪಾಸಣಾ ಕಾರ್ಯಕ್ರಮವಾಗಿದೆ. ಮಕ್ಕಳು ಶಾಲೆಯಲ್ಲಿ ಕಲಿತದ್ದನ್ನು ಸ್ಪರ್ಧಾ ರೂಪದಲ್ಲಿ ತೋರ್ಪಡಿಸುವ ಉಪಯುಕ್ತ ಕಾರ್ಯಕ್ರಮವಾಗಿದೆ ಎಂದರು. ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿನ್ನಪ್ಪ ಓಬಳೇರ್ ಮಾತನಾಡಿದರು. ಕಾರ್ಯಕ್ರಮದಲ್ಲಿ 400ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ತಾವು ಕಲಿತ ಕಲಿಕೆಯನ್ನು ಪ್ರದರ್ಶಿಸಿದರು. ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಸೋಮಶೇಖರ, ರಂಗರಾಜು, ಶಾಲಾ ಸಮಿತಿಯ ಉಮೇಶ್, ಮಂಜು ನಾಯಕ್ ಹಾಗೂ ಹಲವಾರು ಶಾಲೆಗಳ ಶಿಕ್ಷಕರು ಭಾಗವಹಿಸಿದ್ದರು.

ಅಂತಿಮ ಪರೀಕ್ಷೆಗೆ ಅವಕಾಶ
ಶಿವಮೊಗ್ಗ: ಕುವೆಂಪು ವಿವಿ ವ್ಯಾಪ್ತಿಯ ಎಲ್ಲಾ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎಂ, ಬಿಸಿಎ, ಕಾಲೇಜುಗಳಲ್ಲಿ 2002-03ಕ್ಕೂ ಮೊದಲು ಪ್ರವೇಶ ಪಡೆದ ಎಲ್ಲಾ ನಾನ್ ಸೆಮಿಸ್ಟರ್ ವಿದ್ಯಾರ್ಥಿಗಳು, 2003-04, ನಂತರ ಪ್ರವೇಶ ಪಡೆದ ಎಲ್ಲಾ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ನಡೆದ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿರುವ ಹಿನ್ನೆಲೆಯಲ್ಲಿ 2014 ಮೇ, ಜೂನ್ ಮಾಹೆಯಲ್ಲಿ ನಡೆಯುವ ಪದವಿ ಪರೀಕ್ಷೆಗೆ ಅಂತಿಮ ಅವಕಾಶ ಕಲ್ಪಿಸಲಾಗಿದೆ. 2002- 03ಕ್ಕೂ ಮೊದಲು ಪ್ರವೇಶ ಪಡೆದ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎಂ, ಬಿಸಿಎ ಮತ್ತಿತರ ನಾನ್ ಸೆಮಿಸ್ಟರ್ ವಿದ್ಯಾರ್ಥಿಗಳು 2002ನೇ ಸಾಲಿನಲ್ಲಿ ಚಾಲ್ತಿಯಲ್ಲಿದ್ದ ಪಠ್ಯಕ್ರಮ ಅಭ್ಯಸಿಸಿ 100 ಅಂಕಗಳ ಸ್ಕೀಂನಲ್ಲಿ ಪರೀಕ್ಷೆ ಬರೆಯುವುದು, 2003-04, ನಂತರ ಪ್ರವೇಶ ಪಡೆದ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎಂ, ಬಿಸಿಎ ಮತ್ತಿತರ ಸೆಮಿಸ್ಟರ್ ವಿದ್ಯಾರ್ಥಿಗಳು ತಾವು ಅಭ್ಯಾಸ ಮಾಡಿದ ಆಯಾ ಸೆಮಿಸ್ಟರ್‌ನ ಪಠ್ಯಕ್ರಮದಂತೆ 80 ಅಂಕಗಳ ಸ್ಕೀಂನಲ್ಲಿ ಪರೀಕ್ಷೆ ಬರೆಯುವಂತೆ ನಿರ್ಣಯ ಕೈಗೊಳ್ಳಲಾಗಿದೆ. ಕೆಲ ವಿಷಯಗಳಲ್ಲಿ ಅನುತ್ತೀರ್ಣಗೊಂಡ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಮೇ, ಜೂನ್‌ನಲ್ಲಿ ನಡೆಯುವ ರೆಗ್ಯುಲರ್ ಪರೀಕ್ಷೆಯೊಂದಿಗೆ ವಿಶೇಷ ಶುಲ್ಕ 500 ಪಾವತಿಸುವುದರ ಮೂಲಕ ಶಿವಮೊಗ್ಗ ಒಂದನ್ನೇ ಪರೀಕ್ಷಾ ಕೇಂದ್ರವನ್ನಾಗಿಸಿಕೊಂಡು ಪರೀಕ್ಷೆ ಬರೆಯಲು ಅಂತಿಮ ಅವಕಾಶ ನೀಡಲಾಗಿದೆ ಎಂದು ವಿಭಾಗದ ಕುಲಸಚಿವರು ತಿಳಿಸಿದ್ದಾರೆ.

ಪ್ರಮೋದ್ ನಿಧನಕ್ಕೆ ಸಂತಾಪ
ಸೊರಬ: ಹಿರಿಯ ಪತ್ರಕರ್ತ ಪ್ರಮೋದ್ ಮೆಳ್ಳಗಟ್ಟಿ ಅವರ ನಿಧನಕ್ಕೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಶ್ರದ್ಧಾಂಜಲಿ ಸಲ್ಲಿಸಿದೆ. ಸಂಘದ ಅಧ್ಯಕ್ಷ ಎಚ್.ಕೆ.ಬಿ. ಸ್ವಾಮಿ ಮಾತನಾಡಿ, ಸರಳ ಸಜ್ಜನಿಕೆಗೆ ಹೆಸರಾದ ಮೆಳ್ಳಗಟ್ಟಿ ಅವರು ಕಿರಿಯ ಪತ್ರಕರ್ತರಿಗೆ ದಾರಿದೀಪವಾಗಿದ್ದರು ಎಂದರು. ಕಾರ್ಯದರ್ಶಿ ರಾಜೇಂದ್ರ ಜೈನ್, ಸದಸ್ಯರಾದ ಶ್ರೀಪಾದ ಬಿಚ್ಚುಗತ್ತಿ, ನಟರಾಜ್ ಉಡುಗಣಿ, ಬಣ್ಣದಬಾಬು, ತೋಟಪ್ಪ, ಶಿವಪ್ಪ, ಪತ್ರಕರ್ತರಾದ ರಾಘವೇಂದ್ರ, ದಿನಕರಭಾವೆ, ಬಿ.ಎನ್. ಉಮೇಶ್, ರಾಘವೇಂದ್ರ ಬಾಪಟ್, ಆರಿಫ್, ಕೆರೆಯಪ್ಪ, ಎನ್. ಕುಮಾರ್, ದೀಪ್ತಿಕುಮಾರ್, ಚಿದಾನಂದಗೌಡ, ಹಿರಿಯ ಪತ್ರಕರ್ತ ಬಿ.ಎನ್.ಸಿ. ರಾವ್, ಸೈಯದ್ ಅನ್ಸರ್, ಸುಧೀರ್ ಪೈ, ಎಸ್.ಆರ್. ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
ಸಾಗರ ವರದಿ: ಶಿವಮೊಗ್ಗದ ಹಿರಿಯ ಪತ್ರಕರ್ತ ಪ್ರಮೋದ ಮೆಳ್ಳಗಟ್ಟಿ ನಿಧನಕ್ಕೆ ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಕೆ.ಎನ್. ಭಟ್ ಸಂತಾಪ ವ್ಯಕ್ತಪಡಿಸಿದ್ದಾರೆ. 'ದಿ ಹಿಂದು' ವರದಿಗಾರರಾಗಿ ಪ್ರಮೋದ ಯಾವುದೇ ಸಂದರ್ಭದಲ್ಲಿ ಓಲೈಕೆಯ ವರದಿಗಾರಿಕೆಯಿಂದ ದೂರ ಇದ್ದರು. ಯುವ ಪತ್ರಕರ್ತರಿಗೆ ಮೆಳ್ಳಿಗಟ್ಟಿಯವರ ಮಾದರಿ. ಅವರ ಕುಟುಂಬಕ್ಕೆ ಭಗವಂತ ದುಖಃಭರಿಸುವ ಶಕ್ತಿ ನೀಡಲಿ. ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಕೋರಿದರು.

ಶಿವಮೊಗ್ಗದಲ್ಲಿ ಶ್ರದ್ಧಾಂಜಲಿ ಅರ್ಪಣೆ
ಶಿವಮೊಗ್ಗ: ಹಿರಿಯ ಪತ್ರಕರ್ತ ಪ್ರಮೋದ್ ಮೆಳ್ಳಗಟ್ಟಿ ಅವರನ್ನು ಸ್ಮರಿಸಿ ಗೋಪಾಳ ಪತ್ರಕರ್ತರ ಕಾಲೋನಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.  ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಸಂತಾಪ ಸಭೆಯಲ್ಲಿ ಮಾತನಾಡಿದ ಹಲವರು ಪ್ರಮೋದ್ ವ್ಯಕ್ತಿತ್ವ ಸ್ಮರಿಸಿದರು. ಸಂಘದ ಅಧ್ಯಕ್ಷ ಶೃಂಗೇಶ್, ರಾಜ್ಯ ಕಾರ್ಯದರ್ಶಿ ಎನ್. ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈ.ಕೆ. ಸೂರ್ಯನಾರಾಯಣ, ಖಜಾಂಚಿ ಎಸ್. ಚಂದ್ರಕಾಂತ್, ಗೋಪಾಲ ಯಡಗೆರೆ, ನಾಗರಾಜ ನೇರಿಗೆ, ವಿ.ನಾಗರಾಜು, ವಾರ್ತಾಧಿಕಾರಿ ಹಿಮಂತರಾಜು, ಶಾಸಕ ಕೆ.ಬಿ. ಪ್ರಸನ್ನಕುಮಾರ್ ಇತರರು ಇದ್ದರು. ಪ್ರಮೋದ್ ಮೆಳ್ಳಗಟ್ಟಿ ಅವರ ಅಂತ್ಯಕ್ರಿಯೆಯು ಶನಿವಾರ ರೋಟರಿ ಚಿತಾಗಾರದಲ್ಲಿ ಬಂಧುಗಳು ಹಾಗೂ ಆತ್ಮೀಯರ ಸಮ್ಮುಖದಲ್ಲಿ ನಡೆಯಿತು. ಮೆಳ್ಳಗಟ್ಟಿ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ. ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಸಂಸದ ಬಿ.ವೈ. ರಾಘವೇಂದ್ರ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಕೆ.ಎಸ್. ಈಶ್ವರಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಸಂತಾಪ ಸೂಚಿಸಿದ್ದಾರೆ.

'ಆಪ್ಕೋಸ್ ಸೌಲಭ್ಯ ಪಡೆಯಿರಿ'
ಸಾಗರ:  ಆರ್ಥಿಕವಾಗಿ ಹಿಂದುಳಿದಿರುವ ಪ್ರದೇಶದಲ್ಲಿ ಆಪ್ಕೋಸ್ ತನ್ನ ಶಾಖೆ ಆರಂಭಿಸಿ ಹಿನ್ನೀರಿನ ಜನರಿಗೆ ಸವಲತ್ತು ಕಲ್ಪಿಸಿಕೊಡಲು ಮುಂದಾಗಿರುವುದು ಶ್ಲಾಘನೀಯ ಎಂದು ಸಿಗಂಧೂರು ಶ್ರೀಚೌಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಎಸ್.ಪಿ.ಶೇಷಗಿರಿ ಭಟ್ ಹೇಳಿದರು. ತಾಲೂಕಿನ ತುಮರಿಯಲ್ಲಿ ಅಡಕೆ ಪರಿಷ್ಕರಣೆ ಮತ್ತು ಮಾರಾಟ ಸಹಕಾರ ಸಂಘದ ನೂತನ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ಹಿಂದುಳಿದ ಪ್ರದೇಶದ ಜನರು ಎಲ್ಲ ಕೆಲಸಗಳಿಗೂ ಸಾಗರವನ್ನೇ ಆಶ್ರಯಿಸಬೇಕಾದ ಸ್ಥಿತಿ ಇತ್ತು. ನೂತನ ಶಾಖೆ ಆರಂಭದಿಂದ ಜನರಿಗೆ ನೆಮ್ಮದಿ ಸಿಕ್ಕಿದಂತಾಗಿದೆ ಎಂದರು. ಆಪ್ಕೋಸ್ ಅಧ್ಯಕ್ಷ ಆರ್.ಎಸ್.ಗಿರಿ ಅಧ್ಯಕ್ಷತೆ ವಹಿಸಿ, ಅಡಕೆ ಬೆಳೆಗಾರರು ಮತ್ತು ಸದಸ್ಯರು ಇನ್ನು ಮುಂದೆ ತಮ್ಮೆಲ್ಲಾ ಅಡಕೆ ವ್ಯವಹಾರವನ್ನು ಈ ಶಾಖೆ ಮೂಲಕ ನಿರ್ವಹಿಸಲು ಅವಕಾಶವಿದೆ. ದೈನಂದಿನ ಹಣಕಾಸಿನ ವ್ಯವಸ್ಥೆ, ರಿಯಾಯಿತಿ ದರದಲ್ಲಿ ಅಡಕೆ ಸಾಗಣೆ, ತ್ವರಿತ ಸಾಲದ ವ್ಯವಸ್ಥೆ ಮಾಡಲಾಗಿದೆ. ತಮ್ಮ ಆರ್ಥಿಕ ಸಂಕಷ್ಟ ಪರಿಹರಿಸಿಕೊಳ್ಳುವ ಜೊತೆಗೆ ಸಂಘದ ಇತರೆ ಸೌಲಭ್ಯ ಪಡೆದುಕೊಳ್ಳಬೇಕು ಎಂದರು. ಮುಖ್ಯ ಅತಿಥಿಗಳಾಗಿ ತಾಪಂ ಅಧ್ಯಕ್ಷ ಹರೀಶ್ ಗಂಟೆ, ತುಮರಿ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮೀ ಶ್ರೀಪಾದ, ಎಪಿಎಂಸಿ ಉಪಾಧ್ಯಕ್ಷ ಕೆ.ಡಿ. ಜಿನದತ್ತ ಜೈನ್, ಎಚ್.ವೆಂಕಟಗಿರಿ ಭಟ್, ಟಿ.ಎಸ್. ಅಶೋಕ, ಎ.ಆರ್. ಕೃಷ್ಣಮೂರ್ತಿ ತುಮರಿ, ಬಿ.ಎ.ಇಂದೂಧರ ಗೌಡ ಹಾಜರಿದ್ದರು.

ಸಿಟಿ ಬಸ್ ಸಂಚಾರಕ್ಕೆ ಒತ್ತಾಯ
ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್ ಅವರು ಪ್ರಗತಿ ಪರಿಶೀಲನೆ ಸಭೆ ನಡೆಸುತ್ತಿದ್ದ ವೇಳೆಯೇ ಜೆಎನ್ ನರ್ಮ್ ಯೋಜನೆಯಡಿ ಸಿಟಿ ಬಸ್ ಸಂಚಾರ ಆರಂಭಿಸುವಂತೆ ಒತ್ತಾಯಿಸಿ ಪ್ರತಿಭಟನಾಕಾರರು ಘೋಷಣೆ ಕೂಗಿ ಗಮನ ಸೆಳೆದರು. ಸಭೆ ನಡೆಯುತ್ತಿದ್ದಾಗ ಪ್ರವೇಶದ್ವಾರದಲ್ಲಿ -ಇಂಕ್ವಿಲಾಬ್ ಜಿಂದಾಬಾದ್- ಘೋಷಣೆ ಕೇಳಿಬಂದಾಗ ಅನಿಲ್ ಕುಮಾರ್ ಅವರು ಜಿ.ಪಂ. ಉಪಕಾರ್ಯದರ್ಶಿ ಗೋಪಾಲ್ ಅವರಿಗೆ ಏನೆಂದು ನೋಡುವಂತೆ ಸೂಚಿಸಿದರು. ಆಗ ಪ್ರತಿಭಟನಾಕಾರರು ಅನಿಲ್ ಕುಮಾರ್ ಅವರಿಗೇ ಮನವಿ ಸಲ್ಲಿಸುವುದಾಗಿ ಹೇಳಿದಾಗ ಸ್ವತಃ ಅವರೇ ಎದ್ದು ಬಂದು ಮನವಿ ಸ್ವೀಕರಿಸಿದರು ಜೆಎನ್ ನರ್ಮ್ ಯೋಜನೆ ಕಾರ್ಯರೂಪಕ್ಕೆ ತರಲು ಕೇಂದ್ರ ಸರ್ಕಾರವು 2 ತಿಂಗಳ ಕಾಲಮಿತಿ ವಿಧಿಸಿ ಅನುದಾನ ನೀಡಿದೆ. ಈ ಯೋಜನೆಗೆ ಬಸ್ ಟರ್ಮಿನಲ್, ಡಿಪೋ ಮತ್ತು ವರ್ಕ್ ಶಾಪ್‌ಗೆ ಜಾಗ ಗುರುತಿಸುವುದು ಜಿಲ್ಲಾಡಳಿತದ ಹೊಣೆ. ಆದರೆ, ಜಿಲ್ಲಾಡಳಿತ ಮೌನ ತಾಳಿದೆ ಎಂಬುದು ಪ್ರತಿಭಟನಾಕಾರರ ಆಕ್ರೋಶವಾಗಿತ್ತು. ಮನವಿ ಸ್ವೀಕರಿಸಿದ ಟಿ.ಕೆ.ಅನಿಲ್ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಜಿ. ಮಾದಪ್ಪ, ಅಣ್ಣಾ ಹಜಾರೆ ಹೋರಾಟ ಸಮಿತಿಯ ಟಿ.ಎಂ. ಅಶೋಕ್ ಯಾದವ್, ಕಲ್ಲೂರು ಮೇಘರಾಜ್, ಮುಂಜುಳಾದೇವಿ, ಲಿಂಬೇಹಣ್ಣು ಮಂಜುನಾಥ್, ಬಿ. ಜನಮೇಜಿರಾವ್ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement