ಬಳಕೆಯಾಗದ ಪರಿಶಿಷ್ಟರ ನಿಧಿ: ಆಕ್ರೋಶ
ಕ.ಪ್ರ.ವಾರ್ತೆ ಶಿವಮೊಗ್ಗ ಡಿ.21
ನಾಚಿಕೆ ಆಗೋಲ್ಲ ನಿಮಗೆ. ಯು ವಿಲ್ ಬಿ ಅರೆಸ್ಟೆಡ್ ಫಾರ್ ಇಟ್. ಯು ವಿಲ್ ಬಿ ಸಸ್ಪೆಂಡೆಂಡ್...
ಹಲವು ವರ್ಷಗಳ ಕಾಲ ಶಿವಮೊಗ್ಗ ಜಿಲ್ಲಾಧಿಕಾರಿಯಾಗಿದ್ದು, ಅಖಿಲ ಭಾರತದ ಕನ್ನಡ ಸಾಹಿತ್ಯ ಸಮ್ಮೇಳನ- ಸಹ್ಯಾದ್ರಿ ಉತ್ಸವದಂತಹ ಬೃಹತ್ ಕಾರ್ಯಕ್ರಮಗಳನ್ನು ಆಯೋಜಿಸಿ ಜಿಲ್ಲೆಯ ಮಟ್ಟಿಗೆ ಸಾಂಸ್ಕೃತಿಕ ಕ್ಷೇತ್ರದ ಮೈಲುಗಲ್ಲುಗಳನ್ನು ನಿರ್ಮಿಸಿರುವ ಟಿ.ಕೆ. ಅನಿಲ್ ಕುಮಾರ್ ಅವರು ಈ ರೀತಿ ಹರಿಹಾಯ್ದಿದ್ದನ್ನು ನೋಡಿದವರಿಲ್ಲ. ಅವರೇ ಈಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆಗಿದ್ದು, ಶನಿವಾರ ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಯೊಬ್ಬರನ್ನು ಹೀಗೆ ತರಾಟೆಗೆ ತೆಗೆದುಕೊಂಡರು.
ಪರಿಶಿಷ್ಟರಿಗೆ ಮೀಸಲಾಗಿರುವ ಶೇ.22.75 ಅನುದಾನ ಬಳಕೆ ಸಮರ್ಪಕವಾಗಿ ಆಗದಿರುವುದೇ ಅವರ ಸಿಟ್ಟಿಗೆ ಕಾರಣವಾಗಿತ್ತು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನುದಾನ ಬಳಕೆ ಪರಿಶೀಲಿಸುವಾಗ ಭದ್ರಾವತಿ ನಗರಸಭೆಯು ಇದೂವರೆಗೆ ಕೇವಲ ಶೇ.13.36ರಷ್ಟು ಮಾತ್ರ ಪರಿಶಿಷ್ಟರ ಅನುದಾನ ಬಳಸಿದೆ ಎಂದು ಅಲ್ಲಿನ ಪೌರಾಯುಕ್ತರು ಹೇಳಿದಾಗ ಅನಿಲ್ ಕುಮಾರ್, ನಾಚಿಕೆ ಆಗೋಲ್ವೇ ಎಂದು ಚಾಟಿ ಬೀಸಿದರು.
ಸ್ವತಃ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಯೂ ಆಗಿರುವ ಇವರಿಗೆ ಅತ್ಯಲ್ಪ ಸಾಧನೆ ಸಿಟ್ಟು ತರಿಸಿತ್ತು. ಆಯುಕ್ತರು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದಾಗ ಮತ್ತಷ್ಟು ಆಕ್ರೋಶಗೊಂಡ ಅವರು, ಕಳೆದ ವರ್ಷವೇ ಬಳಸಬೇಕಾದ ಅನುದಾನಕ್ಕೆ ಈಗ ಟೆಂಡರ್ ಕರೆಯುತ್ತೀರಾ ಹಿಂದಿನ ವರ್ಷವೇ ಏಕೆ ಟೆಂಡರ್ ಕರೆಯಲಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಸಂಪೂರ್ಣ ಬಳಕೆಯಾಗಲಿ: ಂತರ ಶಿವಮೊಗ್ಗ ನಗರಸಭೆಯೂ ಸಹ ಪರಿಶಿಷ್ಟರ ಅನುದಾನ ಬಳಸಿರುವುದು ಶೇ.19ರಷ್ಟು ಮಾತ್ರ ಎಂದಾಗ ಸಹನೆ ಕಳೆದುಕೊಂಡರು. ಈ ಹಣ ಏಕೆ ಬಳಕೆಯಾಗಿಲ್ಲ ಎಂದು ನಮಗೆ ಸರ್ಕಾರದವರು ಕೇಳುತ್ತಾರೆ. ಇನ್ನೊಂದು ತಿಂಗಳೊಳಗೆ ಸಂಪೂರ್ಣ ಅನುದಾನ ಬಳಕೆಯಾಗಬೇಕು ಎಂದು ತಾಕೀತು ಮಾಡಿದರು.
ಸಾಗರ ನಗರಸಭೆ ಶೇ.35.28, ಶಿಕಾರಿಪುರ ಪುರಸಭೆ ಶೇ.61, ಸೊರಬ ಶೇ.68, ಹೊಸನಗರ ಶೇ.79.26, ತೀರ್ಥಹಳ್ಳಿ ಶೇ.38.73ರಷ್ಟು ಬಳಸಿರುವ ಮಾಹಿತಿ ಪಡೆದ ಅವರು, ನಾನು ಮುಂದಿನ ತಿಂಗಳು ಮತ್ತೆ ಸಭೆ ಕರೆಯುವ ವೇಳೆಗೆ ಸಂಪೂರ್ಣ ಬಳಕೆಯಾಗಿರಬೇಕು ಎಂದು ಎಚ್ಚರಿಕೆ ನೀಡಿ, ಈ ಅನುದಾನ ಬಳಕೆಗೆ ಬೇಡಿಕೆ ಇಲ್ಲವೇ ಎಂದು ಪ್ರಶ್ನಿಸಿದರು.
ಇದೇ ವೇಳೆ ಅವರು ಅಲ್ಪಸಂಖ್ಯಾತರಿಗೆ ಹಾಗೂ ಅಂಗವಿಕಲರಿಗೆ ನಿಗದಿಯಾಗಿರುವ ಅನುದಾನ ಬಳಕೆಯಲ್ಲಿಯೂ ನಗರ ಸ್ಥಳೀಯ ಸಂಸ್ಥೆಗಳು ಹಿಂದುಳಿದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿ ವೇತನ ವಿಳಂಬ: ಸಮಾಜ ಕಲ್ಯಾಣ ಇಲಾಖೆಯು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ವಿತರಣೆಯಲ್ಲಿ ಕೇವಲ ಶೇ.24ರಷ್ಟು ಸಾಧನೆ ಮಾಡಿರುವುದು ಅವರ ಕಣ್ಣು ಕೆಂಪಾಗಿಸಿತ್ತು. ಸರ್ಕಾರ ಆನ್ ಲೈನ್ ವ್ಯವಸ್ಥೆ ಮಾಡಿರುವುದರಿಂದ ನಿಧಾನವಾಗುತ್ತಿದೆ ಎಂದು ಅಧಿಕಾರಿಗಳು ನೀಡಿದ ಸಮಜಾಯಿಷಿ ಒಪ್ಪದೇ, ತ್ವರಿತ ಕೆಲಸ ಆಗಲಿ ಎಂದೇ ಆನ್ ಲೈನ್ ವ್ಯವಸ್ಥೆ ಮಾಡಲಾಗಿದೆ. ಸರಿಯಾಗಿ ಮಾಹಿತಿ ನೀಡಿ ಎಂದು ಕಿಡಿಕಾರಿದರು.