ರೈತಸಂಘದ ಹೋರಾಟ ಶಕ್ತಿ ಇಳಿಮುಖ
ಕ.ಪ್ರ.ವಾರ್ತೆ ಶಿವಮೊಗ್ಗ ಡಿ.21
ಹಿಂದೆ ರೈತ ಸಂಘದಲ್ಲಿ ಇದ್ದ ಹೋರಾಟದ ಮನೋಭಾವ, ಶಕ್ತಿ ಇಂದು ಇಲ್ಲದಾಗಿದೆ ಎಂದು ರೈತ ಮುಖಂಡ ಕಡಿದಾಳ್ ಶಾಮಣ್ಣ ವಿಷಾದಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶನಿವಾರ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ರೈತ ಮುಖಂಡ ದಿ. ಎನ್.ಡಿ. ಸುಂದರೇಶ್ ನೆನಪಿನ ಸಭೆ ಮತ್ತು ಬೆಳಗಾವಿ ಸುವರ್ಣ ಸೌಧ ಎದುರು ಮರಣ ಹೊಂದಿದ ವಿಠಲ್ ಅರಬಾವಿ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತ ಸಂಘಟನೆ ಈ ಹಿಂದೆ ಪ್ರಬಲವಾಗಿತ್ತು. ಆದರೆ, ಇಂದಿನ ಕೆಲ ವರ್ಷಗಳಿಂದ ರೈತ ಸಂಘಟನೆ ಇನ್ನಷ್ಟು ಪ್ರಬಲವಾಗುವುದರ ಬದಲು ಕೆಳಹಂತಕ್ಕೆ ಹೋಗುತ್ತಿರುವುದು ದೊಡ್ಡ ದುರಂತ. ಬೆಳಗಾವಿಯ ಅಧಿವೇಶನದ ವೇಳೆ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆಯಿಂದ ಪ್ರತಿಯೊಬ್ಬ ರೈತರು ಪಾಠ ಕಲಿಯಬೇಕು ಎಂದರು.
ವಿಷಾದನೀಯ: ರೈತ ಸಂಘದ ಕಾರ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ, ವೈಚಾರಿಕ ತಳಹದಿಯ ಮೇಲೆ ರೈತ ಸಂಘವನ್ನು ಎನ್.ಡಿ. ಸುಂದರೇಶ್, ಎಂ.ಡಿ. ನಂಜುಂಡಸ್ವಾಮಿ ಕಟ್ಟಿದ್ದಾರೆ. ಅದನ್ನು ಮೆಲುಕು ಹಾಕಬೇಕಿದೆ. ಆದರೆ, ಇವರ ತತ್ವ, ಆದರ್ಶಗಳು ಹಾಗೂ ಆಶೋತ್ತರಗಳಿಗೆ ವಿರುದ್ಧವಾಗಿ ನಗರದಲ್ಲಿ ಮತ್ತೊಂದು ಸಭೆ ನಡೆಯುತ್ತಿರುವುದು ವಿಷಾದನೀಯ ಎಂದು ಹೇಳಿದರು.
ರಾಜ್ಯದಲ್ಲಿ ಪ್ರತಿ ಡಿ. 21ರಂದು ಈ ರೀತಿಯ ಸಭೆ ಹಮ್ಮಿಕೊಂಡು ಬರುತ್ತಿದ್ದೇವೆ. ಅದೇ ರೀತಿ ಅವರೂ ಕಾರ್ಯಕ್ರಮ ಆಯೋಜನೆ ಮಾಡುತ್ತಾರೆ. ಒಳ್ಳೆಯದು. ರೈತ ಸಂಘದ ತತ್ವ, ಸಿದ್ಧಾಂತ ಗಾಳಿಗೆ ತೂರಿ ಕಾರ್ಯಕ್ರಮ ಏರ್ಪಡಿಸುತ್ತಾರೆ. ಇದನ್ನು ಜನ ವಿಮರ್ಶೆ ಮಾಡಬೇಕು. ಯಾರು ನಿಜವಾದ ಹೋರಾಟಗಾರರು, ಹಿಂದಿನಿಂದ ಹೋರಾಟ ಮಾಡಿಕೊಂಡು ಬಂದವರು ಯಾರು ಎಂದು ತಿಳಿಯಬೇಕು ಎಂದು ತಿಳಿಸಿದರು.
ತತ್ವ ತಿಳಿಯದವರು: ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ರೈತ ಸಂಘಟನೆಯ ಇತಿಹಾಸ ತಿಳಿಯದವರು, ಮತ್ತೊಂದು ರೈತ ಸಂಘಟನೆ ಕಟ್ಟಿ ಬೆಳೆಸುವುದಕ್ಕೆ ಸಾಧ್ಯವಿಲ್ಲ. ಸುಂದರೇಶ್ ಅವರ ತತ್ವ ತಿಳಿಯದ ಕೆಲವರು ರೈತ ಸಂಘಗಳ ಹುಟ್ಟಿಗೆ ಕಾರಣರಾಗುತ್ತಿದ್ದು, ರಾಜಕೀಯ ಮುಖಂಡರೊಂದಿಗೆ ಗುರುತಿಸಿಕೊಳ್ಳುತ್ತಿದ್ದಾರೆ. ಅಂತಹ ರೈತ ಸಂಘಗಳು ರೈತರ ಪರವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದರು.
ಎಂ.ಡಿ. ನಂಜಂಡಸ್ವಾಮಿ ಮತ್ತು ಎನ್.ಡಿ. ಸುಂದರೇಶ್ ರೈತರಿಗಾಗಿ ಶ್ರಮಿಸಿದ್ದರು. ಅವರ ಕಾಲದಲ್ಲಿ ಸಂಘಟನೆ ಪ್ರಬಲವಾಗಿತ್ತು. ಆದರೆ, ಇಂದು ಸಂಘಟನೆ ತನ್ನ ಅಸ್ಥಿತ್ವ ಕಳೆದುಕೊಳ್ಳುತ್ತಿದೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ವಿಷಾದಿಸಿದರು. ಇಂತಹ ಪ್ರಬಲವಾದ ಸಂಘಟನೆ ಅಳಿಯಲು ಬಿಡಬಾರದು. ಸಂಘಟನೆ ಹೋರಾಟದ ಮೂಲಕ ರೈತರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು. ನಾಯಕರು ಬರುತ್ತಾರೆ ಹೋಗುತ್ತಾರೆ ಆದರೆ, ರೈತರ ಸಮಸ್ಯೆಗೆ ಮಿಡಿಯಬೇಕು. ನಿರ್ದಿಷ್ಟ ಗುರಿಯೊಂದಿಗೆ ಸಾಗಬೇಕು ಎಂದು ಕರೆ ನೀಡಿದರು.
ರೈತರೇ ದರ ನಿಗದಿ ಮಾಡಲಿ: ಉತ್ಪಾದಿಸುವವವನಿಗೆ ಮಾತ್ರ ದರ ನಿಗದಿ ಮಾಡುವ ಹಕ್ಕಿದೆ. ರೈತ ಬೆಳೆದ ಬೆಳೆಗೆ ದರ ನಿಗದಿ ಮಾಡುವ ಹಾಗೂ ಕೈಗಾರಿಕೋದ್ಯಮಿಯ ಮನೋಭಾವವನ್ನು ಬೆಳೆಸಿಕೊಂಡು ತನ್ನ ಬೆಳೆಗೆ ತಾನೇ ಬೆಲೆಯನ್ನು ನಿಗದಿಗೊಳಿಸಿದರೆ ಮಾತ್ರ ರೈತ ಆರ್ಥಿಕವಾಗಿ ಸಬಲರಾಗುತ್ತಾರೆ ಎಂದು ಸಲಹೆ ನೀಡಿದರು.
ದೇಶದ ಆಸ್ತಿ ಮತ್ತು ಶಕ್ತಿ ರೈತನಾಗಿದ್ದು, ಅವನು ತನ್ನ ಭೂಮಿಯನ್ನು ಕಳೆದುಕೊಂಡು ಉತ್ಪಾದನೆಯನ್ನು ನಿಲ್ಲಿಸಿದರೆ ಆಹಾರ ಸರಪಳಿಯಲ್ಲಿ ಭಾರೀ ಏರುಪೇರಾಗಲಿದೆ. ಇದರಿಂದ ಉಂಟಾಗುವ ಅನಾಹುತವನ್ನು ಸರ್ಕಾರ ಮತ್ತು ಜನಸಾಮಾನ್ಯರು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಾಮ ಮಾರ್ಗ: ರಾಜ್ಯದ ಸುಮಾರು 5 ಲಕ್ಷ ಎಕರೆ ಪ್ರದೇಶದಲ್ಲಿ ಬಿಟಿ ವಿಫಲವಾಗಿದೆ. ಇದನ್ನು ವಿತರಿಸಿದ ಕಂಪನಿಯ ಮೇಲೆ ಕ್ರಮ ಕೈಗೊಳ್ಳಿ, ಕಪ್ಪು ಪಟ್ಟಿಗೆ ಸೇರಿಸಿ ಎಂದು ಸರ್ಕಾರಕ್ಕೆ ಮನವಿ ಮಾಡಿದರೆ, ಕೃಷಿ ಸಚಿವರು ರೈತರ ಮೇಲೆ ಹರಿಹಾಯುತ್ತಾರೆ. ಬಿಟಿ ತಂತ್ರಜ್ಞಾನ ಒಂದು ರೀತಿಯ ವಾಮ ಮಾರ್ಗವಿದ್ದಂತೆ ಎಂದು ತಿಳಿಸಿದರು.
ಡಾ. ಬಿ.ಎಂ. ಚಿಕ್ಕಸ್ವಾಮಿ, ಖಾಜಾ ಹುಸೇನ್ ನಿಯಾಜಿ, ಕುರುವ ಗಣೇಶ್, ಜಡಿಯಪ್ಪ ದೇಸಾಯಿ, ಎಂ.ಮಹೇಶ್, ಮುನಿಯಪ್ಪ, ಮಂಜುನಾಥ, ಸಿದ್ದವೀರಪ್ಪ, ಹಿಟ್ಟೂರು ರಾಜು, ರಾಘವೇಂದ್ರ ಮತ್ತಿತರರು ಇದ್ದರು. ಚಾಮರಸಮಾಲೀ ಪಾಟೀಲ್, ಮುಖಂಡ ಕೆ.ಟಿ. ಗಂಗಾಧರ್, ನಂದಿನಿ ಜಯರಾಮ್, ಚುಕ್ಕಿ ನಂಜುಂಡಸ್ವಾಮಿ, ಕೆ.ಎಸ್. ನಂಜುಂಡೇಗೌಡ, ಜಿ.ಟಿ. ರಾಮಸ್ವಾಮಿ ಇದ್ದರು.