ಹಾಲು ಒಕ್ಕೂಟದಲ್ಲಿ ಅಕ್ರಮ: ಪ್ರತಿಭಟನೆ
ಕ.ಪ್ರ.ವಾರ್ತೆ ಶಿವಮೊಗ್ಗ ಡಿ.21
ವಿವಿಧ ಹುದ್ದೆಗಳ ನೇಮಕಾತಿ ವೇಳೆ ಶಿವಮೊಗ್ಗ ಹಾಲು ಒಕ್ಕೂಟದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಎನ್ಎಸ್ಯುಐ ಕಾರ್ಯಕರ್ತರು ಶನಿವಾರ ತನಿಖೆ ನಡೆಸುವಂತೆ ಒತ್ತಾಯಿಸಿ ಲೋಕಾಯುಕ್ತ ಡಿವೈಎಸ್ಪಿ ಅವರಿಗೆ ಮನವಿ ಸಲ್ಲಿಸಿದರು.
ಖಾಲಿ ಇರುವ ಹುದ್ದೆಗಳಿಗೆ ಅರ್ಹರನ್ನು ನೇಮಕ ಮಾಡಿಕೊಳ್ಳದೇ ಪ್ರತಿ ಹುದ್ದೆಗೆ ಲಕ್ಷಾಂತರ ಹಣ ಪಡೆಯಲಾಗುತ್ತಿದೆ. ಆದ್ದರಿಂದ ತಕ್ಷಣ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ನೇಮಕಾತಿ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದರೂ ಸಹ ನೇಮಕಾತಿ ಮುಂದುವರಿಸಲಾಗಿದೆ. ಈ ಹುದ್ದೆಗಳ ನೇಮಕಾತಿಯಿಂದ ಕೆಲ ಜನಪ್ರತಿನಿಧಿಗಳಿಗೆ ಕೋಟ್ಯಂತರ ರು. ಲಾಭವಾಗಿರುವುದರಿಂದ ಯಾರೊಬ್ಬರೂ ಚಕಾರವೆತ್ತುತ್ತಿಲ್ಲ. ಮಂಡ್ಯ ಹಾಲು ಒಕ್ಕೂಟದಲ್ಲಿ ವಿವಿಧ ಹುದ್ದೆಗಳ ನೇಮಕಾತಿ ವೇಳೆ ಅಕ್ರಮ ನಡೆದಿದ್ದರಿಂದ ಡಿ.18ರಂದು ಸರ್ಕಾರ ಎಲ್ಲಾ ನೇಮಕಾತಿಗಳನ್ನು ರದ್ದುಗೊಳಿಸಿದೆ. ಇದೇ ರೀತಿ ಶಿವಮೊಗ್ಗ ಹಾಲು ಒಕ್ಕೂಟದ ನೇಮಕಾತಿ ಬಗ್ಗೆಯೂ ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಎನ್ಎಸ್ ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಜಿ. ಮಧುಸೂದನ್, ಜಿಲ್ಲಾಧ್ಯಕ್ಷ ಕೆ. ಚೇತನ್, ಕಾಂಗ್ರೆಸ್ ಮುಖಂಡರಾದ ಕೆ. ದೇವೇಂದ್ರಪ್ಪ ಸೇರಿದಂತೆ ಹಲವರು ಇದ್ದರು.