ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಆರೋಗ್ಯ ಸಹಾಯಕಿಯರ ನೇಮಕಾತಿ ನಿರ್ಲಕ್ಷ್ಯ

Lingaraj Badiger
Updated On : 23 Dec 2013, 11:54 am

ಕ.ಪ್ರ.ವಾರ್ತೆ, ಶಿವಮೊಗ್ಗ,  ಡಿ.22
ಗ್ರಾಮೀಣ ಭಾಗದಲ್ಲಿ ಮನೆ ಮನೆ ಬಾಗಿಲಿಗೆ ಆರೋಗ್ಯ ಸೇವೆ ನೀಡುವ ಕಿರಿಯ ಆರೋಗ್ಯ ಸಹಾಯಕಿಯರ ನೇಮಕಾತಿಗೆ ಉದಾಸೀನ ಮಾಡುತ್ತಿರುವ ಸರ್ಕಾರದ ವಿರುದ್ಧ ಹೋರಾಟಕ್ಕಿಳಿಯಲು ತರಬೇತಿ ಹೊಂದಿ ನಿರುದ್ಯೋಗಿಗಳಾಗಿರುವ ಮಹಿಳಾ ಕಿರಿಯ ಆರೋಗ್ಯ ಸಹಾಯಕಿಯರು ಮುಂದಾಗಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿ ಗೌರವಾಧ್ಯಕ್ಷ ಬಿ. ಏಸುದಾಸ, ಗೌರವ ಕಾರ್ಯದರ್ಶಿ ಪ್ರೇಮ ಶಿವಪ್ರಕಾಶ್, ಸರ್ಕಾರ ಕಳೆದ 3 ವರ್ಷದಿಂದ ಕಿರಿಯ ಆರೋಗ್ಯ ಸಹಾಯಕರನ್ನು ನೇಮಿಸಿಕೊಂಡಿಲ್ಲ. ಹೀಗಾಗಿ ಸರ್ಕಾರದಿಂದಲೇ ತರಬೇತಿ ಪಡೆದುಕೊಂಡವರು ಅತಂತ್ರರಾಗಿದ್ದಾರೆ. ಉದ್ಯೋಗ ಎದುರು ನೋಡುತ್ತಾ ದಿನ ದೂಡುತ್ತಿದ್ದಾರೆ. ಈ ಕೂಡಲೇ ಆರೋಗ್ಯ ಸಚಿವರು ಇತ್ತ ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನೇಮಕಾಯಿ ಇಲ್ಲ: ಕಿರಿಯ ಆರೋಗ್ಯ ಸಹಾಯಕಿಯರಾಗಲು ಇಚ್ಚಿಸಿದವರಿಗೆ ಪ್ರತಿ ಜಿಲ್ಲೆಯಲ್ಲಿ ಸರ್ಕಾರವೇ ಶಿಷ್ಯ ವೇತನ ನೀಡಿ ತರಬೇತಿ ನೀಡಿದೆ. ಆದರೆ, ನೇಮಕಾತಿ ಮಾಡಿಕೊಳ್ಳುತ್ತಿಲ್ಲ. ಈ ಮುಂಚೆ ಇಲಾಖೆ ನೇರ ನೇಮಕ ಮಾಡಿಕೊಳ್ಳುತ್ತಿತ್ತು. ಆದರೆ, ಈಗ ನೇಮಕಾತಿ ಮಾಡಿಕೊಳ್ಳುವುದನ್ನೇ ನಿಲ್ಲಿಸಿದೆ.
ಅದೇ ರೀತಿ ಈಗಾಗಲೇ ಇಲಾಖೆಯಿಂದ ತರಬೇತಿ ಹೊಂದಿದ ಕೆಲವರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡಿದ್ದು, ಹೆಚ್ಚು ಕೆಲಸ ಕಡಿಮೆ ಸಂಬಳದಿಂದ ಶೋಷಣೆಗೊಳಗಾಗುತ್ತಿದ್ದಾರೆ. ಹೀಗಾಗಿ ಅವರ ಸೇವೆಯನ್ನು ಖಾಯಂಗೊಳಿಸುವಂತೆಯೂ ಆಗ್ರಹಿಸಿದರು.
ಸಂದಿಗ್ಧ ಪರಿಸ್ಥಿತಿ: ಬಹಳಷ್ಟು ಅಭ್ಯರ್ಥಿಗಳು ತರಬೇತಿ ಹೊಂದಿ ಬೇರೆ ಕೆಲಸಕ್ಕೆ ಹೋಗಲಾರದೆ ನಿರುದ್ಯೋಗಿಗಳಾಗಿ ನೇಮಕಾತಿ ವಯೋವುತಿ ಮೀರಿ ಹೋಗುವ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ. ಹೀಗಾಗಿ ಸರ್ಕಾರ ತುರ್ತಾಗಿ ಈ ವಿಚಾರದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಏಸುದಾಸ್ ಒತ್ತಾಯಿಸಿದರು.
ಗ್ರಾಮೀಣ ಭಾಗದಲ್ಲಿ ತಾಯಿ-ಮಗು ಆರೈಕೆ, ಚುಚ್ಚುಮದ್ದು ನೀಡಿಕೆ ಕಾರ್ಯಕ್ರಮ, ಪೌಷ್ಟಿಕ ಆಹಾರ ಯೋಜನೆ ಸೇರಿದಂತೆ ರಾಷ್ಟ್ರೀಯ ಆರೋಗ್ಯ ಯೋಜನೆ ಅನುಷ್ಠಾನದಲ್ಲಿ ಕಿರಿಯ ಆರೋಗ್ಯ ಸಹಾಯಕಿಯರೇ ಪ್ರಧಾನ ಪಾತ್ರ ವಹಿಸುತ್ತಾರೆ. ಗ್ರಾಮೀಣ ಭಾಗದಲ್ಲಿ ನೀರಿನ ಪರೀಕ್ಷೆ ಸೇರಿದಂತೆ ಸಾಂಕ್ರಾಮಿಕ ರೋಗ ನಿಯಂತ್ರಣದಲ್ಲಿ ಇವರ ಪಾತ್ರ ಪ್ರಮುಖ. ಆದರೆ, ಇವರ ನೇಮಕ ಮಾಡದೇ ಉದಾಸೀನ ಮಾಡುವುದು ಸರಿಯಲ್ಲ ಎಂದರು.
ಕಿರಿಯ ಆರೋಗ್ಯ ಸಹಾಯಕಿಯರ ನೇಮಕ ಸೇರಿದಂತೆ ನಮ್ಮ ಬೇಡಿಕೆಯನ್ನು ಶೀಘ್ರ ಈಡೇರಿಸುವಂತೆ ಆರೋಗ್ಯ ಸಚಿವರು, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ನಿರ್ದೇಶಕರಿಗೆ ಮನವಿ ಸಲ್ಲಿಸುತ್ತಿದ್ದೇವೆ. ನಿಯೋಗ ಹೋಗಿ ಮನವರಿಕೆ ಮಾಡಿಕೊಡಲು ಉದ್ದೇಶಿಸಿದ್ದೇವೆ. ಸ್ಪಂದನೆ ಸಿಗದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ ಎಂದು ಪ್ರೇಮ ತಿಳಿಸಿದರು.
ಶೃತಿ, ಉಬೇದುಲ್ಲಾ, ವತ್ಸಲಾ ಮೊದವಲಾದವರು ಸುದ್ದಿಗೋಷ್ಠಿಯಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement