ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

30ರಂದು ಅಡಕೆ ಬೆಳೆಗಾರರ ಜಾಗೃತಿ ಸಮಾವೇಶ

Vishwanath S
Updated On : 25 Dec 2013, 12:29 pm

ಕ.ಪ್ರ.ವಾರ್ತೆ ಟಿ ಶಿವಮೊಗ್ಗ/ಸಾಗರ ಟಿ  ಡಿ.24
ಅಡಕೆ ನಿಷೇಧ ಭೀತಿಯಲ್ಲಿರುವ ಬೆಳೆಗಾರರು ಹೋರಾಟಕ್ಕೆ ಅಣಿಯಾಗಿದ್ದು, ರಾಜ್ಯ ಅಡಕೆ ಬೆಳೆಗಾರರ ಒಕ್ಕೂಟ ಹೋರಾಟದ ನೇತೃತ್ವ ವಹಿಸಿಕೊಂಡಿದೆ.  ಇದಕ್ಕೆ ಕ್ಯಾಂಪ್ಕೋ, ಮ್ಯಾಮ್‌ಕೋಸ್ ಕೈಜೋಡಿಸಿವೆ.
ಇದೇ ಡಿ. 30ರಂದು ನಗರದಲ್ಲಿ ಅಡಕೆ ಬೆಳೆಗಾರರ ಬೃಹತ್ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ ಎಂದು ಒಕ್ಕೂಟದ ಕಾರ್ಯಾಧ್ಯಕ್ಷ ಹಾಗೂ ಮ್ಯಾಮ್ಕೋಸ್ ಉಪಾಧ್ಯಕ್ಷ ಕೆ. ನರಸಿಂಹನಾಯಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗೊಂದಲ ನಿವಾರಿಸಿ: ಇತ್ತೀಚೆಗೆ ಸುಪ್ರೀಂಕೋರ್ಟ್‌ನಲ್ಲಿರುವ ಪ್ರಕರಣ ಹಾಗೂ ಕೇಂದ್ರ ಸರ್ಕಾರದ ಹಂತದಲ್ಲಿ ಅಡಕೆ ನಿಷೇಧಿಸಲಾಗುತ್ತಿದೆ ಎನ್ನುವ ಸುದ್ದಿಗಳಿಂದಾಗಿ ಅಡಕೆ ಬೆಳೆಗಾರರಿಗೆ ಸಿಡಿಲು ಬಡಿದಂತಾಗಿದೆ. ಈ ಬಗ್ಗೆ ಇರುವ ಗೊಂದಲಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ತಕ್ಷಣವೇ ಪರಿಹರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಅಡಕೆ ಬೆಳೆಗಾರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಸಮಾವೇಶ ಆಯೋಜಿಸಲಾಗಿದೆ ಎಂದರು.
ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಾವಣಗೆರೆ ಜಿಲ್ಲೆಗಳ ಅಡಕೆ ಬೆಳೆಗಾರರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಂದು ಬೆಳಗ್ಗೆ 11.30ಕ್ಕೆ  ನಗರದ ಎನ್‌ಡಿವಿ ಹಾಸ್ಟೆಲ್ ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಅದಕ್ಕೂ ಮುನ್ನ ಎಪಿಎಂಸಿಯ ಮ್ಯಾಮ್ಕೋಸ್ ಆವರಣದಿಂದ ಮೆರವಣಿಗೆ ಪ್ರಾರಂಭವಾಗುವುದು ಎಂದು ವಿವರಿಸಿದರು.
ಪಕ್ಷಾತೀತ ಸಮಾವೇಶ: ಸಮಾವೇಶ ಪಕ್ಷಾತೀತವಾಗಿ ನಡೆಯಲಿದೆ. ವಿವಿಧ ಪಕ್ಷದ ಜನಪ್ರತಿನಿಧಿಗಳು, ರಾಜಕೀಯ ನಾಯಕರು ಪಾಲ್ಗೊಳ್ಳುತ್ತಿದ್ದಾರೆ.  ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸಭಾಧ್ಯಕ್ಷರಿಗೂ ಆಹ್ವಾನ ನೀಡಲಾಗಿದೆ ಎಂದರು.
ರಾಜ್ಯದ ಅಡಕೆ ಬೆಳೆಗಾರರು ಮತ್ತು ಸಹಕಾರ ಸಂಘಗಳು ಸೇರಿ ಒಕ್ಕೂಟ ರಚಿಸಿಕೊಂಡು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶಿವಮೊಗ್ಗ ಅರೆಕಾ ಚೇಂಬರ್ಸ್ ಮತ್ತು ಮಂಡಿ ವರ್ತಕರ ಸಂಘಗಳೂ ಸಹ ಈ ಸಮಾವೇಶಕ್ಕೆ ಸಹಕಾರ ನೀಡುತ್ತಿವೆ. ಸುಮಾರು 10 ಸಾವಿರಕ್ಕೂ ಮಿಕ್ಕಿದ ಅಡಕೆ ಬೆಳೆಗಾರರು ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಆಶ್ವಾಸನೆ ಇಲ್ಲ: ಅಡಕೆ ನಿಷೇಧದ ಚರ್ಚೆ ನಡೆಯುತ್ತಿದ್ದರೂ, ಕೇಂದ್ರ ಸರ್ಕಾರದ ಕಡೆಯಿಂದ ಯಾವುದೇ ಆಶ್ವಾಸನೆ ದೊರೆತಿಲ್ಲ. ಅದರ ನಡುವೆ ಸಾಲಿಸಿಟರ್ ಜನರಲ್ ಅವರು ಗುಟ್ಕಾ ಜಗಿಯುವುದರಿಂದ ಕ್ಯಾನ್ಸರ್ ಮತ್ತಿತರ ಕಾಯಿಲೆ ಬರುತ್ತಿರುವುದರಿಂದ ಈ ಉತ್ಪನ್ನದ ಮೂಲವಾಗಿರುವ ಅಡಕೆಯನ್ನೇ ನಿಷೇಧಿಸಬೇಕೆಂದು ಪ್ರಮಾಣಪತ್ರ ಸಲ್ಲಿಸಿದ್ದಾರೆ. ಇದೇ ಆತಂಕಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ಜೊತೆಗೆ ರಾಜ್ಯದ ಅಡಕೆ ಬೆಳೆಗಾರರ ಪರವಾಗಿ ಸುಪ್ರೀಂಕೋರ್ಟ್‌ನಲ್ಲಿ ವಾದ ಮಾಡಲು ನೇಮಕವಾಗಿದ್ದ ವಕೀಲರನ್ನು ರಾಜ್ಯ ಸರ್ಕಾರ ವಾಪಾಸ್ ಕರೆಸಿಕೊಂಡಿದೆ. ಈ ಬೆಳವಣಿಗೆ ಬೇಸರ ತರಿಸಿದೆ. ಆದರೆ, ಮ್ಯಾಮ್ಕೋಸ್ ಸೇರಿದಂತೆ ವಿವಿಧ ಸಹಕಾರ ಸಂಘಗಳ ಕಡೆಯಿಂದ ಸೋಲಿ ಸೊರಾಬ್ಜಿ, ರಾಮ ಜೇಠ್ಮಲಾನಿ ಅವರಂತಹ ವಕೀಲರನ್ನು ರು. 20 ಲಕ್ಷ ಖರ್ಚು ಮಾಡಿ ನೇಮಿಸಿಕೊಳ್ಳಲಾಗಿದೆ. ರಾಜ್ಯ ಸರ್ಕಾರ ವಕೀಲರ ನೇಮಕ ಮಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಸಮಾವೇಶಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಜೆಡಿಎಸ್ ಶಾಸಕ ಮಧು ಬಂಗಾರಪ್ಪ, ಚಿಕ್ಕಮಗಳೂರು ಕ್ಷೇತ್ರದ ಸಂಸದ ಜಯಪ್ರಕಾಶ್ ಹೆಗ್ಡೆ, ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ನೆರೆ ಜಿಲ್ಲೆಯ ಸಂಸದರು, ರಾಜ್ಯಸಭಾ ಸದಸ್ಯರು, ಶಾಸಕರಿಗೂ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಲಾಗಿದೆ ಎಂದರು.
ಮ್ಯಾಮ್‌ಕೋಸ್ ನಿರ್ದೇಶಕ ಬಿ.ಎಚ್.ರಾಘವೇಂದ್ರ, ದೇವಾನಂದ್, ಅಡಕೆ ವರ್ತಕರ ಸಂಘದ ಅಧ್ಯಕ್ಷ ಕಡಿದಾಳ್ ಗೋಪಾಲ್, ವಿರೂಪಾಕ್ಷಪ್ಪ, ಎಚ್.ಆರ್. ಅಶೋಕ್ ನಾಯಕ್ ಮೊದಲಾದವರು ಸುದ್ದಿಗೋಷ್ಠಿಯಲಿದ್ದರು.
ಪಕ್ಷಾತೀತ ಸಮಾವೇಶ
ಸಾಗರ: ಅಡಕೆ ನಿಷೇಧ ಪ್ರಸ್ತಾವನೆಯನ್ನು ವಿರೋಧಿಸಿ ಮಾರ್ಕೆಟಿಂಗ್ ಸೊಸೈಟಿಗಳ ಒಕ್ಕೂಟದ ವತಿಯಿಂದ ಡಿ.30ರಂದು ಶಿವಮೊಗ್ಗದ ಎನ್.ಡಿ.ವಿ. ಹಾಸ್ಟೆಲ್ ಮೈದಾನದಲ್ಲಿ ಅಡಕೆ ಬೆಳೆಗಾರರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಆಪ್‌ಕೋಸ್ ಅಧ್ಯಕ್ಷ ಆರ್.ಎಸ್. ಗಿರಿ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಇದೊಂದು ಪಕ್ಷಾತೀತವಾದ ಸಮಾವೇಶವಾಗಿದ್ದು, ಎಲ್ಲ ಸಂಘ ಸಂಸ್ಥೆಗಳ, ಬೆಳೆಗಾರ ಸಂಘಟನೆಗಳ, ರಾಜಕೀಯ ಪಕ್ಷಗಳ ಬೆಂಬಲ ಕೋರಲಾಗಿದೆ.
ಸಮಾವೇಶದಲ್ಲಿ ಜಿಲ್ಲೆಯ ಸಾವಿರಾರು ಅಡಕೆ ಬೆಳೆಗಾರರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಈ ನಿಟ್ಟಿನಲ್ಲಿ ಪ್ರತಿ ಪಂಚಾಯ್ತಿ ಮಟ್ಟದಲ್ಲಿ ಪ್ರಚಾರ ಮಾಡಲಾಗಿದೆ ಎಂದರು.
ಪ್ರಮುಖರಾದ ಕೆ.ಸಿ. ದೇವಪ್ಪ, ಬಿ.ಎ. ಇಂದೂಧರಗೌಡ, ಕಟ್ಟಿನಕೆರೆ ಸೀತಾರಾಮಯ್ಯ, ಕೆ.ಎಂ. ಸೂರ್ಯನಾರಾಯಣ, ರಾಘವೇಂದ್ರ ಹೊಡಬಟ್ಟೆ, ಕೆ.ಆರ್. ಗಣಪತಿ ಭಟ್, ವೀರೇಶ್ ಗೌಡ, ಎಂ.ಸಿ. ರತ್ನಾಕರ ಗೌಡ, ಎಲ್.ಟಿ. ತಿಮ್ಮಪ್ಪ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement