ರಕ್ತದಾನದಿಂದ ಆರೋಗ್ಯದಲ್ಲಿ ಏರುಪೇರಾಗಲ್ಲ
ಜೋಗ್ಫಾಲ್ಸ್: ದಾನಗಳಲ್ಲಿ ರಕ್ತದಾನವೂ ಶ್ರೇಷ್ಠವಾಗಿದ್ದು, ಸದೃಢ ಯುವಕ, ಯುವತಿಯರು ರಕ್ತದಾನಕ್ಕೆ ಮುಂದಾಗಬೇಕು. ಇದರಿಂದ ಜೀವನ್ಮರಣ ಹೋರಾಟದಲ್ಲಿರುವ ರೋಗಿಗಳಿಗೆ ಸಹಾಯವಾಗುತ್ತದೆ ಎಂದು ಮುಖ್ಯ ಅಭಿಯಂತರ ಜಿ. ಹನುಮಂತಪ್ಪ ತಿಳಿಸಿದರು.
ಇಲ್ಲಿನ ಎಸ್.ವಿ.ಪಿ ಶಟಲ್ ಕೋರ್ಟ್ನಲ್ಲಿ ಸ್ನೇಹ ಟ್ರಸ್ಟ್, ಕೆಪಿಸಿಎಲ್ ಎಂಪ್ಲಾಯಿಸ್ ಯೂನಿಯನ್ ಜೋಗ್, ಪ.ಜಾತಿ ಪ.ಪಂಗಡ ಅಸೋಸಿಯೇಷನ್, ಕೆಪಿಸಿ ಎಂಜಿನಿಯರ್ಸ್ ಅಸೋಸಿಯೇಷನ್ ಜೋಗ್ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಡಾ. ಎಸ್. ಜಗದೀಶ್ ಮಾತನಾಡಿ, ಇಂದು ಅನೇಕರಿಗೆ ರಕ್ತದಾನದ ಮಹತ್ವ ತಿಳಿದಿಲ್ಲ. ಅಲ್ಲದೆ, ರಕ್ತದಾನ ಮಾಡಿದರೆ ಆರೋಗ್ಯದಲ್ಲಿ ತೊಂದರೆಯುಂಟಾಗುತ್ತದೆ ಎಂಬ ಮೂಢನಂಬಿಕೆಗಳಿಂದ ರಕ್ತದಾನ ಶಿಬಿರಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಆರೋಗ್ಯವಂತ ವ್ಯಕ್ತಿ ಪ್ರತಿ 6 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದು ತಿಳಿಸಿದರು.
ಕೈ ಜೋಡಿಸಿ: ಕೆಪಿಸಿಎಲ್ ಎಂಪ್ಲಾಯಿಸ್ ಯೂನಿಯನ್ ಕೇಂದ್ರೀಯ ಅಧ್ಯಕ್ಷ ಕೆ.ಟಿ. ಮಂಜುನಾಥ್, ರಕ್ತದಾನ ಪವಿತ್ರವಾದದ್ದು, ಇದರ ಬಗೆಗಿನ ಮೂಢನಂಬಿಕೆ ತೊರೆದು ಜನತೆ ರಕ್ತದಾನಕ್ಕೆ ಮುಂದಾಗಬೇಕು ಎಂದರು.
ಅಧೀಕ್ಷಕ ಅಭಿಯಂತರ ಕೆ.ಆರ್. ಶಿವಾಜಿ, ಸಹಾಯಕ ಉಪ ಪ್ರಧಾನ ಪ್ರಬಂಧಕ ಬಿ. ನಿಜೇಂದ್ರ (ಹಣಕಾಸು ವಿಭಾಗ), ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಎನ್. ಮೋಹನ್ಮೂರ್ತಿ, ಸ್ನೇಹ ಟ್ರಸ್ಟ್ ಅಧ್ಯಕ್ಷ ಸಿದ್ದರಾಜು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿದ್ದರಾಜು ಸ್ವಾಗತಿಸಿದರು. ಆರ್. ನಿಂಗರಾಜು ವಂದಿಸಿದರು. ಎಚ್.ಎಸ್. ಹರೀಶ್ ನಿರೂಪಿಸಿದರು. ಶಿಬಿರದಲ್ಲಿ 62 ಜನರು ರಕ್ತದಾನ ಮಾಡಿದರು.