ಶಿವಮೊಗ್ಗದಲ್ಲಿ ಯುವ ಸಂವಹನ ಶಿಬಿರ...
ಕ.ಪ್ರ.ವಾರ್ತೆ , ಶಿವಮೊಗ್ಗ , ಡಿ.24
ಯುವ ಸಬಲೀಕರಣ ಮತ್ತು ಕ್ರೀಡಾ ನಿರ್ದೇಶನಾಲಯ, ರಾಜ್ಯ ಯುವ ಕೇಂದ್ರ ಪ್ರತಿ ವರ್ಷ ಗ್ರಾಮಾಂತರ ಯುವಕ, ಯುವತಿಯರಿಗಾಗಿ ಬೆಂಗಳೂರಿನಲ್ಲಿ ನಡೆಸುತ್ತಿದ್ದ ಯುವ ಸಂವಹನ, ಯುವ ಪ್ರೇರಣ, ಯುವ ಚೇತನ ಮತ್ತು ಪ್ರಶಿಕ್ಷಕರ ತರಬೇತಿ ಶಿಬಿರವನ್ನು ಜಿಲ್ಲಾ ಕ್ರೀಡಾ ಇಲಾಖೆ ಜಿಲ್ಲೆಯಲ್ಲಿ ನಡೆಸುವ ಸಾಧ್ಯತೆ ಇದೆ.
ಇದು ಶಿವಮೊಗ್ಗ ಜಿಲ್ಲೆಗೆ ಸಿಗಲಿರುವ ವಿಶೇಷ ಅವಕಾಶ. ಪ್ರತಿವರ್ಷ ಬೆಂಗಳೂರಲ್ಲೇ ಶಿಬಿರ ನಡೆಯುತ್ತಿದ್ದು, ಜಿಲ್ಲೆಯ ಐವರಿಗೆ ಮಾತ್ರ ಅವಕಾಶ ಸಿಗುತ್ತಿತ್ತು. ಈ ಬಾರಿ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ನಗರದಲ್ಲಿರುವ ನೆಹರು ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ ಹಾಗೂ ವಸತಿ ನಿಲಯಗಳು ಸೇರಿದಂತೆ ಇತರೆ ಸೌಲಭ್ಯಗಳ ಚಿತ್ರಗಳನ್ನೊಳಗೊಂಡ ದಾಖಲೆಗಳನ್ನು ರಾಜ್ಯ ಯುವ ಕೇಂದ್ರಕ್ಕೆ ರವಾನಿಸಿದೆ.
7 ತಾಲೂಕು: ಒಂದು ವೇಳೆ ಸರ್ಕಾರದಿಂದ ಒಪ್ಪಿಗೆ ಸಿಕ್ಕಲ್ಲಿ ಜಿಲ್ಲೆಯ 7 ತಾಲೂಕುಗಳಲ್ಲಿರುವ 15ರಿಂದ 35 ವರ್ಷದೊಳಗಿನ ಯುವಕ, ಯುವತಿಯರು ಈ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಬಹುದು.
ಕುವೆಂಪು ಬಡಾವಣೆಯಲ್ಲಿರುವ ಕ್ರೀಡಾ ವಸತಿ ಶಾಲೆಯಲ್ಲಿ ಶಿಬಿರ ಹಮ್ಮಿಕೊಳ್ಳುವ ಯೋಜನೆಯನ್ನು ಜಿಲ್ಲಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಸ್ಪಷ್ಟಪಡಿಸಿದ್ದು, ತಿಂಗಳಲ್ಲಿ 3 ಶಿಬಿರಗಳಿದ್ದು, ಯುವಕ ಹಾಗೂ ಯವತಿಯರಿಗೆ ಪ್ರತ್ಯೇಕ ಶಿಬಿರಗಳು ನಡೆಯಲಿವೆ. ಯೂತ್ ಅವಾರ್ಡ್ ಪಡೆದವರು, ವಿಷಯ ತಜ್ಞರು ಹಾಗೂ ಪ್ರಶಿಕ್ಷಕರಿಂದ ತರಬೇತಿ ನೀಡಲಾಗುತ್ತದೆ.
ಶಿಬಿರದಲ್ಲಿ ಏನೇನು?: ವ್ಯಕ್ತಿತ್ವ, ಆತ್ಮಸ್ಥೈರ್ಯ, ಸಾಮಾಜಿಕ ಬದ್ಧತೆ, ವಿಷಯ ಪ್ರಸಾರ, ಭಾಷಣ ಕೌಶಲ್ಯ, ಮಾನವೀಯ ಸಂಬಂಧಗಳು, ಪರಿಣಾಮಕಾರಿ ಮತ್ತು ಸಂವಹನದ ಅಡೆತಡೆಗಳು, ಯಶಸ್ವಿ ಕಾರ್ಯಗಳು, ಧಾರ್ಮಿಕತೆ, ಯೋಗ, ರಾಜಕೀಯ ಕಲೆ, ಸ್ವ-ಉದ್ಯೋಗ, ಸರ್ಕಾರಿ ಉದ್ಯೋಗ ಸೇರಿದಂತೆ ಇತರೆ ವಿಷಯಗಳ ಕುರಿತು ಮಾಹಿತಿ ಹಾಗೂ ಶಿಬಿರದ ಕೊನೆಯ ದಿನ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳ ವೀಕ್ಷಣೆ ಮಾಡುವುದು.
ಈ ಬಗ್ಗೆ ಕನ್ನಡಪ್ರಭ ಜಿಲ್ಲಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ್ ಅವರನ್ನು ಸಂಪರ್ಕಿಸಿದಾಗ, ಬೆಂಗಳೂರಿನಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ ಜಿಲ್ಲೆಯ ಹಲವು ಪ್ರತಿಭೆಗಳು ಅವಕಾಶ ವಂಚಿತರಾಗುತ್ತಿದ್ದರು. ಅಲ್ಲದೇ ಅಲ್ಲಿಗೆ ಅರ್ಹರನ್ನು ಕಳುಹಿಸಿಕೊಡುವ ಹೊಣೆಯನ್ನು ಜಿಲ್ಲಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರೇ ವಹಿಸಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಇದರ ಬಗ್ಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಇಲ್ಲಿಯೇ ಹಮ್ಮಿಕೊಳ್ಳುವ ಬಗ್ಗೆ ರಾಜ್ಯ ಯುವ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿರುವ ಎಲ್ಲಾ ಸೌಲಭ್ಯವನ್ನು ಬಳಸಿಕೊಂಡು ಅಭ್ಯರ್ಥಿಗಳನ್ನು ಇಲಾಖೆಯ ನಿಯಮಾನುಸಾರ ಆಯ್ಕೆ ಮಾಡಿಕೊಂಡು 15-35 ವರ್ಷದೊಳಗಿನ ಸುಮಾರು 100 ಜನರಿಗೆ ತರಬೇತಿ ನೀಡುವ ಯೋಜನೆ ಸಿದ್ಧಪಡಿಸಲಾಗಿದೆ. ಆಯ್ಕೆಯಾದವರಿಗೆ ಪ್ರಯಾಣ ಭತ್ಯೆ, ವಸತಿ, ಊಟದ ವ್ಯವಸ್ಥೆ ಇರುತ್ತದೆ ಎಂದು ತಿಳಿಸಿದರು.
ಬದಲಾವಣೆ ಗುರಿ: ತರಬೇತಿ ನೀಡಲು ವಿಷಯ ತಜ್ಞರನ್ನು ಇಲಾಖೆ ಸೂಚನೆಯಂತೆ ನೇಮಕ ಮಾಡಲಾಗುತ್ತದೆ. ಒಟ್ಟಾರೆ ಯುವ ಜನತೆಯಲ್ಲಿ ಬದಲಾವಣೆ ತರುವುದು ತಮ್ಮ ಗುರಿಯಾಗಿದ್ದು, ಸರ್ಕಾರದಿಂದ ಒಪ್ಪಿಗೆ ಬಂದಲ್ಲಿ ಎಲ್ಲಾ ಇಲಾಖೆಗೂ ಇದರ ಬಗ್ಗೆ ಮಾಹಿತಿ ನೀಡಲಾಗುವುದು.
ಪ್ರಮುಖವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಪರಿಗಣಿಸಲಾಗುವುದು. ಇಲಾಖೆಯ ಸಾಂತ್ವನ ಕೇಂದ್ರದ ಮಕ್ಕಳಿಗೆ ಹಾಗೂ ಗ್ರಾಮೀಣ ಪ್ರದೇಶದ ಯುವಕ, ಯುವತಿಯರಿಗೆ ಆದ್ಯತೆ ಇದ್ದು, ನಂತರ ಸಂಘ, ಸಂಸ್ಥೆಗಳಿಗೆ ಎಂದರು.
ಜಿಲ್ಲೆಯಲ್ಲಿರುವ ಎಲ್ಲಾ ಸೌಲಭ್ಯವನ್ನು ಬಳಸಿಕೊಂಡು ಅಭ್ಯರ್ಥಿಗಳನ್ನು ಇಲಾಖೆಯ ನಿಯಮಾನುಸಾರ ಆಯ್ಕೆ ಮಾಡಿಕೊಂಡು 15-35 ವರ್ಷದೊಳಗಿನ ಸುಮಾರು 100 ಜನರಿಗೆ ತರಬೇತಿ ನೀಡುವ ಯೋಜನೆ ಸಿದ್ಧಪಡಿಸಲಾಗಿದೆ.
- ಚಂದ್ರಶೇಖರ್, ಸಹಾಯಕ ನಿರ್ದೇಶಕ, ಕ್ರೀಡಾ ಇಲಾಖೆ
ವಿಶೇಷ ವರದಿ