ಸಾರಸ್ವತ ಲೋಕದಲ್ಲಿ ಜಿಎಸ್ಎಸ್ ಚಿರಸ್ಥಾಯಿ
ಕ.ಪ್ರ.ವಾರ್ತೆ , ಸೊರಬ , ಡಿ.24
ಮಲೆನಾಡಿನ ಶುದ್ಧ ಪರಿಸರದಲ್ಲಿ ಹುಟ್ಟಿದ ಜಿ.ಎಸ್. ಶಿವರುದ್ರಪ್ಪಅವರ ಕಾವ್ಯ ಕಲೆ ಎಂದಿಗೂ ಮರೆಯುವಂತಿಲ್ಲ. ನಂಬಿದ ಸಿದ್ಧಾಂತಗಳಿಗೆ ಬದ್ಧರಾಗಿ ವಿವಾದಗಳಿಗೆ ಎಡೆಮಾಡಿಕೊಡದೆ ಬದುಕಿದ್ದರಿಂದಲೇ ರಾಷ್ಟ್ರಕವಿಯಾಗಿ ಕನ್ನಡ ನಾಡನ್ನು ಬೆಳಗಿದ್ದಾರೆ ಎಂದು ಚಿಂತಕ ಟಿ. ರಾಜಪ್ಪ ಮಾಸ್ತರ್ ಹೇಳಿದರು.
ಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ತಾಲೂಕು ಕಸಾಪ ಹಾಗೂ ವಿವಿಧ ಸಂಘ- ಸಂಸ್ಥೆಗಳ ಆಶ್ರಯದಲ್ಲಿ ಅಗಲಿದ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡದ ಮೈಸೂರು ಅನಂತಸ್ವಾಮಿ, ಸಿ. ಅಶ್ವಥ್ರಂತಹ ಮಹಾನ್ ನಾಯಕರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪನ್ನು ಮೂಡಿಸಲು ಡಾ. ಜಿ.ಎಸ್. ಶಿವರುದ್ರಪ್ಪ ಅವರ ಕವಿತೆಗಳೂ ಕಾರಣವಾಗಿದೆ ಎಂದ ಅವರು, ಭೌತಿಕವಾಗಿ ಜಿಎಸ್ಎಸ್ ನಮ್ಮನ್ನಗಲಿದ್ದಾರೆ. ಆದರೆ, ಈ ನೆಲದ ಸೊಗಡನ್ನು ಸಾಹಿತ್ಯದ ಮೂಲಕ ಚಿರಸ್ಥಾಯಿಯಾಗಿದ್ದಾರೆ ಎಂದರು.
ತಾಲೂಕು ಕಸಾಪ ಅಧ್ಯಕ್ಷ ಮಧುರಾಯ ಜಿ. ಶೇಟ್ ಮಾತನಾಡಿ, ಬದುಕಿನ ಮೌಲ್ಯಗಳನ್ನು ತಮ್ಮ ಸಾಹಿತ್ಯ ರಚನೆಯ ಮೂಲಕ ಎತ್ತಿ ಹಿಡಿದ ಜಿ.ಎಸ್. ಶಿವರುದ್ರಪ್ಪ ಎಂದೂ ಆರದ ನಂದಾದೀಪ. ಅವರ ಆದರ್ಶ, ಜೀವನಶೈಲಿ ಇಂದಿನ ಯುವ ಬರಹಗಾರರಿಗೆ ಮಾದರಿಯಾಗಿದ್ದಾರೆ. ಆದರೆ ಅವರಿಗೆ ಜ್ಞಾನಪೀಠ ಪ್ರಶಸ್ತಿ ನೀಡದಿರುವುದೇ ಒಂದು ಕೊರತೆಯಾಗಿದೆ ಎಂದರು.
ಸಾಹಿತ್ಯ ಪರಿಷತ್ತಿನ ಷಣ್ಮುಖಾಚಾರ್, ಎಂ.ಕೆ.ಭಟ್, ಸಾಹಿತಿ ರಾಜಶೇಖರ ಪಾಟೀಲ್ ನೆಗವಾಡಿ, ಹಾಲೇಶ್ ನವುಲೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಮಂಜುನಾಥ, ಕೆಜೆಪಿ ಅಧ್ಯಕ್ಷ ಎಂ.ಆರ್. ಪಾಟೀಲ್, ಬಿಜೆಪಿ ತಾಲೂಕು ಅಧ್ಯಕ್ಷ ಹುಣವಳ್ಳಿ ಗಂಗಾಧರಪ್ಪ, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಎಚ್. ಗಣಪತಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಅಣ್ಣಾಜಿಗೌಡ, ಜಿಪಂ ಮಾಜಿ ಉಪಾಧ್ಯಕ್ಷ ಪಾಣಿ ರಾಜಪ್ಪ, ನಾಗರಾಜಗೌಡ, ವಕೀಲರಾದ ಕೆ. ನಾಗಪ್ಪ, ಇಂದೂಧರ ಒಡೆಯರ್, ಎಂ.ಡಿ. ಶೇಖರ್ ಸುರಭಿ ಮೋಹನ್, ಎಸ್.ಆರ್. ಕುಮಾರಸ್ವಾಮಿ, ಸಾಹಿತಿ ರೇವಣಪ್ಪ ಬಿದರಗೆರೆ, ಚಾಮರಾಜ ನವಿಲೆ, ಚಂದ್ರಪ್ಪ ಅತ್ತಿಕಟ್ಟೆ, ಶಿವಯೋಗಿ, ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ಪಾಣಿ, ನೌಕರರ ಸಂಘದ ಅಧ್ಯಕ್ಷ ಹೊಳೆಲಿಂಗಪ್ಪ ಇತರರು ಇದ್ದರು.
ಚಂದ್ರಗುತ್ತಿಯಲ್ಲಿ: ಇಲ್ಲಿನ ಕರವೆ ಘಟಕ ಮತ್ತು ಗ್ರಾಪಂ ವತಿಯಿಂದ ಜಿಎಸ್ಎಸ್ಗೆ ಶ್ರದ್ಧಾಂಜಲಿ ಸಲ್ಲಿಸಿದರು. ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಪ್ಪ ಅಂಗಡಿ, ಸದಸ್ಯರಾದ ರತ್ನಾಕರ್, ಹಿರಿಯರಾದ ಭಾಷಾಸಾಬ್, ಎನ್.ಜಿ. ನಾಗರಾಜ್, ಗುರು, ಲೋಕೇಶ್, ಈರಪ್ಪ ಮಾಸ್ತರ್, ಗಣಪತಿ, ಪ್ರಜ್ವಲ್, ಪ್ರಕಾಶ್, ರಾಜು, ಗೋಪಿ, ರವಿ ಹಾಗೂ ಕರವೆ ಘಟಕದವರು ಇದ್ದರು.