28ರಂದು ತಾಳಗುಂದ ಉತ್ಸವ
ಶಿರಾಳಕೊಪ್ಪ: ಮಯೂರವರ್ಮ ಹುಟ್ಟಿದ ಸ್ಥಳ, ಕನ್ನಡದ ಮೊದಲ ರಾಜವಂಶವೆಂದು ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿರುವ ತಾಳಗುಂದ ಉತ್ಸವ ಪ್ರಥಮ ಬಾರಿಗೆ ದಿ.28ರಂದು ತಾಳಗುಂದದ ಐತಿಹಾಸಿಕ ಸ್ಥಳ ಪ್ರಣವ ಲಿಂಗೇಶ್ವರನ ಸಾನ್ನಿಧ್ಯದಲ್ಲಿ ನಡೆಯಲಿದೆ.
ಕನ್ನಡಿಗರ ಸ್ವಾಭಿಮಾನಕ್ಕೆ ದಕ್ಕೆ ಉಂಟಾದಾಗ ಪಲ್ಲವರ ವಿರುದ್ಧ ಸಿಡಿದೆದ್ದು, ಅವರ ಸೊಲ್ಲಡಗಿಸಿದ ಮೊಟ್ಟಮೊದಲ ರಾಜ, ಹಾಗೆಯೇ ಹಲವಾರು ಮೊದಲುಗಳಿಗೆ ಹೆಸರು ಪಡೆದಿರುವ ಈ ಉತ್ಸವ ಶಿರಾಳಕೊಪ್ಪ ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಮತ್ತು ತಾಳಗುಂದ ಕದಂಬ ಸಾಂಸ್ಕೃತಿಕ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯಲಿದ್ದು, ಹಲವಾರು ಕಾರ್ಯಕ್ರಮ ನಡೆಯಲಿವೆ.
ಶ್ರೀಗಳಿಂದ ಉದ್ಘಾಟನೆ: ತಾಳಗುಂದದ ಮಯೂರ ಕ್ರೀಡಾಂಗಣದಲ್ಲಿ ದಿ.28ರಂದು ಬೆಳಗ್ಗೆ 7-30ಕ್ಕೆ ನಡೆಯುವ ಕಾರ್ಯಕ್ರಮಕ್ಕೆ ಶಿರಾಳಕೊಪ್ಪ ವೀರಕ್ತ ಮಠದ ಸಿದ್ದೇಶ್ವರ ದೇವರು ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕದಂಬ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೆ.ಎ. ಅಶೋಕ ವಹಿಸಲಿದ್ದಾರೆ. ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ತಾಳಗುಂದ ಮಹದೇವಪ್ಪ ಆಯ್ಕೆಯಾಗಿದ್ದಾರೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೆರವೇರಿಸುವ ಸಂಭವವಿದೆ. ಸಂಸದ ಬಿವೈ ರಾಘವೇಂದ್ರ, ಜಿಪಂ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ, ಜಿಪಂ ಸದಸ್ಯ ರುದ್ರಪ್ಪ, ನಿವೃತ್ತ ಕೆಎಎಸ್ ಅಧಿಕಾರಿ ಎಚ್. ಬಳಿಗಾರ್ ಸೇರಿದಂತೆ ಹಲವಾರು ಪ್ರಮುಖರು ಭಾಗವಹಿಸುವರು.