29ರಂದು ಡಾ. ಡಿಸೋಜಗೆ ಸನ್ಮಾನ
ಸಾಗರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ನಗರಸಭೆ ಹಾಗೂ ವಿವಿಧ ಸಂಘಟನೆಗಳು ಡಿ. 29ರಂದು ಸಂಜೆ 4ಕ್ಕೆ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿಯೋಜಿತರಾಗಿರುವ ಡಾ. ನಾ.ಡಿಸೋಜ ಅವರಿಗೆ ಪೌರ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಸನ್ಮಾನ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಡಿಸೋಜ ಅವರ ಕುರಿತು ಹಿರಿಯ ಪತ್ರಕರ್ತ ಅ.ರಾ. ಶ್ರೀನಿವಾಸ್ ಮಾತನಾಡಲಿದ್ದಾರೆ. ಉಪವಿಭಾಗಾಧಿಕಾರಿ ಡಾ. ಉದಯಕುಮಾರ ಶೆಟ್ಟಿ, ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ತಾಲೂಕು ಅಧ್ಯಕ್ಷ ವಿ.ಟಿ.ಸ್ವಾಮಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಕಳೆದ ಡಿ. 23ರಂದು ಆಯೋಜನೆಗೊಂಡಿದ್ದ ಪೌರಸನ್ಮಾನ ಕಾರ್ಯಕ್ರಮ ಜಿ.ಎಸ್. ಶಿವರುದ್ರಪ್ಪ ಅವರ ನಿಧನದ ಹಿನ್ನೆಲೆಯಲ್ಲಿ ರದ್ದುಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು
ಸಕ್ಕರೆ ಕಾಯಿಲೆಗೆ ಉಚಿತ ಔಷಧ
ಸೊರಬ: ಆನವಟ್ಟಿಯ ಖ್ಯಾತ ನಾಟಿವೈದ್ಯ ನಾಗರಾಜ ಕೆ. ಮಿರಜಕರ್ ಡಿ. 29ರಂದು ಉಚಿತವಾಗಿ ಸಕ್ಕರೆ ಕಾಯಿಲೆಗೆ ಔಷಧ ನೀಡಲಿದ್ದಾರೆ. ಅಂದು ಬೆಳಿಗ್ಗೆ 11ರಿಂದ ಸಂಜೆ 7 ರವರೆಗೆ ಗ್ರಾಮದ ಸೊರಬ ರಸ್ತೆಯ ನೆಹರೂ ನಗರ ಮೊದಲನೇ ತಿರುವಿನಲ್ಲಿರುವ ಅವರ ಮನೆಯಲ್ಲಿ ಔಷಧ ವಿತರಣೆ ನಡೆಯಲಿದ್ದು, ಹೆಚ್ಚಿನ ಮಾಹಿತಿಗೆ ಮೊ.9538338471 ಸಂಪಕಿಸಬಹುದು.
ಕ್ರೀಡೋತ್ಸವ
ಚಿತ್ರದುರ್ಗ: ಇಲ್ಲಿನ ಪ್ರಗತಿ ವಿದ್ಯಾನಿಕೇತನ ವೆಲ್ಫೇರ್ ಸೊಸೈಟಿಯ ಲಿಟ್ಲ್ ಫೇರೀಸ್ ಅಂತಾರಾಷ್ಟ್ರೀಯ ವಸತಿ ಶಾಲೆ ಮತ್ತು ಕಾಲೇಜಿನ ಕ್ರೀಡೋತ್ಸವ ಕಾರ್ಯಕ್ರಮವನ್ನು ಡಿ. 26ರ ಗುರುವಾರ ಬೆಳಗ್ಗೆ 9 ಗಂಟೆಗೆ ಗಾಂಧಿ ವೃತ್ತದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಚ್. ಮಂಜುನಾಥ್ ಉದ್ಘಾಟಿಸಲಿದ್ದಾರೆ.
ಎಸ್‌ಐ, ಪೇದೆ ಅಮಾನತು
ದಾವಣಗೆರೆ: ಕರ್ತವ್ಯಲೋಪದಡಿ ಚನ್ನಗಿರಿ ಪೊಲೀಸ್ ಠಾಣೆ ಸಬ್ ಇನ್ಸಪೆಕ್ಟರ್ ಸತೀಶಕುಮಾರ, ಪೇದೆ ವೆಂಕಟೇಶ್‌ರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಪ್ರಕಾಶ ಆದೇಶ ಹೊರಡಿಸಿದ್ದಾರೆ. ಶನಿವಾರ ಎಸ್ಪಿ ಡಿ. ಪ್ರಕಾಶ ನೇತೃತ್ವದಲ್ಲಿ ಮಟ್ಕಾ ದಂಧೆಯ ಅಡ್ಡೆ ಮೇಲೆ ದಾಳಿ ನಡೆಸಿದಾಗ ಸಬ್ ಇನ್ಸಪೆಕ್ಟರ್ ಸತೀಶಕುಮಾರ, ಪೇದೆ ವೆಂಕಟೇಶ್‌ಗೆ ಮಟ್ಕಾ ದಂಧೆಯ ಬಗ್ಗೆ ಮಾಹಿತಿ ಇದ್ದರೂ ಗೊತ್ತಿಲ್ಲದವರಂತೆ ವರ್ತಿಸಿದ ಹಿನ್ನೆಲೆಯಲ್ಲಿ, ಕರ್ತವ್ಯಲೋಪದಡಿ ಇಬ್ಬರನ್ನೂ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಪ್ರಕಾಶ ಆದೇಶ ಹೊರಡಿಸಿದ್ದಾರೆ.