29ರಿಂದ ಸಂಸ್ಕೃತಿ ಸಪ್ತಾಹ
ಕ.ಪ್ರ.ವಾರ್ತೆ, ಸಾಗರ, ಡಿ.25
ಇಲ್ಲಿನ ನಾಟ್ಯತರಂಗ ಸಂಸ್ಥೆಯು ಡಿ. 29ರಿಂದ ಪಟ್ಟಣದ ಶ್ರೀನಗರ ಬಡಾವಣೆಯ ನೃತ್ಯ ಭಾಸ್ಕರ ಸಭಾಂಗಣದಲ್ಲಿ ಸಂಸ್ಕೃತಿ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡಿದೆ.
ಡಿ. 29ರ ಸಂಜೆ 5ಕ್ಕೆ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಸಂಸ್ಕೃತಿ ಸಪ್ತಾಹ ಉದ್ಘಾಟಿಸಲಿದ್ದಾರೆ. ಅಪರ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಪಾಲ್ಗೊಳ್ಳುವರು. ನಂತರ ಬೆಂಗಳೂರಿನ ರಮ್ಯ ಸಾರಿಕಾ ಸುಭಾಷಿಣಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯುತ್ತದೆ.
ಡಿ. 30ರ ಸಂಜೆ 6ಕ್ಕೆ ನಾಟ್ಯತರಂಗ ಸಂಸ್ಥೆಯವರಿಂದ ದಶಾವತಾರ ನೃತ್ಯರೂಪಕ. 7 ರಿಂದ ಬೆಂಗಳೂರಿನ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಿದ್ಯಾರ್ಥಿಗಳಿಂದ ತಬಲ ತರಂಗ ಕಾರ್ಯಕ್ರಮ ನಡೆಯಲಿದೆ. ಡಿ.31ರ ಸಂಜೆ 6ರಿಂದ ಗಮಕ ಕಾರ್ಯಕ್ರಮ ನಡೆಯಲಿದ್ದು, ರುಕ್ಮಿಣಿ ರಂಗನಾಥ್ ವಾಚನ ಮಾಡಲಿದ್ದಾರೆ. ಬೆಂಗಳೂರಿನ ರತ್ನಾವತಿ ವ್ಯಾಖ್ಯಾನಿಸಲಿದ್ದಾರೆ. ನಂತರ ನಾಟ್ಯತರಂಗದ ಕಲಾವಿದರು ಶಿವಲೀಲಾಮೃತ ನೃತ್ಯರೂಪಕ ಪ್ರಸ್ತುತಪಡಿಸಲಿದ್ದಾರೆ.
ಜ.1ರ ಸಂಜೆ 6ರಿಂದ ಸೀತಾ ಬಾಪಟ್ ಮತ್ತು ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ನಂತರ ಮೈಸೂರಿನ ವಿದ್ವಾನ್ ಚಿನ್ಮಯ ಎಂ.ಹೆಗಡೆ ಅವರಿಂದ ಭರತನಾಟ್ಯವಿರುತ್ತದೆ. ಜ. 2ರಂದು ನಾಟ್ಯತರಂಗ ವಿದ್ಯಾರ್ಥಿಗಳಿಂದ ಭರತನಾಟ್ಯ, ನಂತರ ಭಾರತಿ ಹೆಗಡೆ ಹಾಗೂ ಓಂಕಾರ ಹೆಗಡೆ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಹಾಗೂ ಸಿತಾರ್ ನಾದನ ನಡೆಯಲಿದೆ.
ಜ.3ರಂದು ನಾಟ್ಯತರಂಗದವರಿಂದ ಭರತನಾಟ್ಯ, ನಂತರ ಯಕ್ಷಶ್ರೀ ಸಂಸ್ಥೆ ವತಿಯಿಂದ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಜ. 4ರ ಸಂಜೆ 5ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ರಂಗಕರ್ಮಿ ಕೆ.ವಿ.ಅಕ್ಷರ, ಬೆಂಗಳೂರಿನ ಅನನ್ಯ ಸಂಸ್ಥೆಯ ಡಾ. ರಾಘವೇಂದ್ರ ರಾವ್, ತಾ. ಬಗರ್ಹುಕುಂ ಸಮಿತಿ ಅಧ್ಯಕ್ಷ ಕಾಗೋಡು ಅಣ್ಣಪ್ಪ ಭಾಗವಹಿಸಲಿದ್ದಾರೆ. 6 ಗಂಟೆಗೆ ಬೆಂಗಳೂರಿನ ದಿವ್ಯ ರವಿ ಅವರಿಂದ ಭರತನಾಟ್ಯ, ನಂತರ ಬೆಂಗಳೂರಿನ ಅನನ್ಯ ಸಂಯೋಜನೆಯಲ್ಲಿ ರೇಖಾರಾಜು ಅವರಿಂದ ಮೋಹಿನಿ ಅಟ್ಟಂ ಪ್ರದರ್ಶನಗೊಳ್ಳಲಿದೆ.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಮಾಹಿತಿ ನೀಡಿದ ನಾಟ್ಯತರಂಗದ ಮುಖ್ಯಸ್ಥ ಜಿ.ಬಿ. ಜನಾರ್ದನ್ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು. ಸಂಸ್ಥೆಯ ಐ.ವಿ.ಹೆಗಡೆ, ಅಂದಗಾರು ಜನಾರ್ದನ್, ವರದಾ ಜನಾರ್ದನ್ ಹಾಜರಿದ್ದರು.