ಇಂದು ಜಿಲ್ಲಾ ಮಟ್ಟದ ಆಂದೋಲನ
ಕ.ಪ್ರ.ವಾರ್ತೆ ಶಿವಮೊಗ್ಗ ಡಿ.25
ಎನ್ಆರ್ಇಜಿ ಯೋಜನೆಯಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಸಮರ್ಪಕ ಅನುಷ್ಠಾನಗೊಳಿಸುವ ಉದ್ದೇಶದಿಂದ ಡಿ. 26ರಂದು ಜಿಲ್ಲಾ ಮಟ್ಟದ ಆಂದೋಲನವನ್ನು ಜಿಪಂ ಹಮ್ಮಿಕೊಂಡಿದ್ದು, ಅಂದು ಜಿಲ್ಲೆಯಲ್ಲಿರುವ 260 ಗ್ರಾಪಂಗಳಲ್ಲಿ ತಲಾ 50 ವೈಯಕ್ತಿಕ ಕಾಮಗಾರಿಗೆ ಕಾರ್ಯಾದೇಶ ನೀಡಲಾಗುವುದು. ಅಂದರೆ, ಒಟ್ಟು 13,000 ವೈಯಕ್ತಿಕ ಕಾಮಗಾರಿ ಆರಂಭವಾಗುವವು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಜಿಪಂ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಈ ವಿಷಯ ತಿಳಿಸಿ, ಸರ್ಕಾರದ ಆದೇಶದಂತೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ವೈಯಕ್ತಿಕ ಕಾಮಗಾರಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಪ್ರತಿ ತಾಲೂಕಿನಲ್ಲಿಯೂ ತಾಲೂಕು ಮಟ್ಟದ ಅಧಿಕಾರಿಗಳನ್ನೊಳಗೊಂಡ 6 ರಿಂದ 8 ತಂಡಗಳ ರಚನೆ ಮಾಡಿದ್ದು, ಡಿ. 26ರಂದು ಬೆಳಗ್ಗೆ 8 ಗಂಟೆಯಿಂದ ಗ್ರಾಪಂಗೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು.
ಪ್ರತಿ ತಂಡ ಕನಿಷ್ಠ 4ರಿಂದ 5 ಪಂಚಾಯಿತಿಗಳಿಗೆ ಭೇಟಿ ನೀಡಲಿದೆ. ಅಲ್ಲದೆ, 2 ವಾರದ ನಂತರ ಪುನಃ ಪಂಚಾಯಿತಿಗಳಿಗೆ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಲಿದೆ. ಡಿ.26ರಂದು 13 ಸಾವಿರ ಕಾರ್ಯಾದೇಶ ಏಕಕಾಲದಲ್ಲಿ ಕೊಡುವ ಪ್ರಯತ್ನ ಮಾಡಲಾಗಿದೆ ಎಂದರು.
ಪ್ರತಿಯೊಂದು ಕುಟುಂಬಕ್ಕೂ ಉದ್ಯೋಗ ಚೀಟಿಯನ್ನು ಉಚಿತವಾಗಿ ಗ್ರಾಮ ಪಂಚಾಯಿತಿಯಿಂದ ನೀಡಲಾಗುವುದು. ಮಧ್ಯವರ್ತಿಗಳಿಲ್ಲದೆ ನೇರವಾಗಿ ಗ್ರಾಪಂ ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು. ಉದ್ಯೋಗ ಚೀಟಿ ಪಡೆದ 15 ದಿನದೊಳಗೆ ಗ್ರಾಪಂನವರು ಕೆಲಸ ನೀಡುವರು. ಪ್ರತಿ ಕುಟುಂಬಕ್ಕೆ ನೂರು ದಿನಗಳ ಉದ್ಯೋಗ ಖಾತ್ರಿಯನ್ನು ನೀಡಲಾಗುವುದು. ಪ್ರತಿ ದಿನಕ್ಕೆ 174 ಕೂಲಿ ನಿಗದಿ ಮಾಡಲಾಗಿದೆ. ಕುಟುಂಬದ ಎಲ್ಲಾ ಸದಸ್ಯರ ಬ್ಯಾಂಕಿನ ವೈಯಕ್ತಿಕ ಖಾತೆಗೆ ಕೂಲಿ ಪಾವತಿಯನ್ನು ಉದ್ಯೋಗ ನಿರ್ವಹಿಸಿದ 15 ದಿನಗಳೊಗಾಗಿ ಪಾವತಿಸಲಾಗುವುದು ಎಂದರು.
ಯೋಜನೆಯಡಿ ಕೃಷಿ ಬಾವಿ, ಕೃಷಿ ಹೊಂಡ, ಬದುಗಳ ನಿರ್ಮಾಣ, ಜಮೀನು ಸಮತಟ್ಟು, ಬಸಿ ಕಾಲುವೆಗಳು, ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ತೋಟ ನಿರ್ಮಾಣ, ಅರಣ್ಯ ಸಸಿ ಬೆಳೆಸುವುದು, ರೇಷ್ಮೆ ಚಟುವಟಿಕೆ, ಎರೇಹುಳು ತೊಟ್ಟಿ ನಿರ್ಮಾಣ, ಕಾಂಪೋಸ್ಟ್ ತೊಟ್ಟಿ ನಿರ್ಮಾಣ, ದನಗಳ ಕೊಟ್ಟಿಗೆ ನೆಲ ಹಾಸು, ಕುರಿ- ಮೇಕೆ ಶೆಡ್ ನಿರ್ಮಾಣ, ಕೋಳಿ ಶೆಡ್ ನಿರ್ಮಾಣ ಕಾಮಗಾರಿ ತೆಗೆದುಕೊಳ್ಳಬಹುದು ಎಂದರು.
ಎನ್ಆರ್ಇಜಿ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 32 ಕೋಟಿ ನಷ್ಟ ಕಾಮಗಾರಿ ನಡೆದಿದೆ. 250 ಕೋಟಿ ಕಾಮಗಾರಿಗಳ ಕ್ರಿಯಾಯೋಜನೆ ಸಿದ್ಧವಾಗಿದೆ ಎಂದು ಪ್ರರ್ತಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.