ಒಂದೇ ದೂರ ಎರಡು ದರ ಯಾಕೆ ಈ ಥರಾ?
ಶಿವಮೊಗ್ಗ: ಒಂದೇ ದೂರ, ಎರಡು ದರ ಏಕೆ- ಇಂಥದ್ದೊಂದು ಪ್ರಶ್ನೆಯನ್ನಿಟ್ಟುಕೊಂಡು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯವನ್ನು ಕೇಳಿದರೆ ಸುಮ್ಮನೆ ನಗುತ್ತಾರೆ. ಆದರೆ ಪ್ರಯಾಣಿಕರು ಮಾತ್ರ ಗೊಂದಲದಲ್ಲಿದ್ದಾರೆ.
ಪ್ರಯಾಣಿಕರೊಬ್ಬರು ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ಸರ್ಕಾರಿ ಸಾರಿಗೆ ಬಸ್ಸಿನಲ್ಲಿ ಪಯಣಿಸಿದರು. ಆಗ ಅವರಿಗೆ 60 ಟಿಕೆಟ್ ನೀಡಲಾಯಿತು. ಇವೆರಡು ಊರಿನ ನಡುವಿನ ಅಂತರ 105 ಕಿಮೀಗಳು. ಕೆಲಸ ಮುಗಿಸಿ ವಾಪಸಾದ ಅವರು ಮರುದಿನ ಅರಸೀಕೆರೆಗೆ ಹೋಗಬೇಕಾಗಿ ಬಂತು. ಸರ್ಕಾರಿ ಸಾರಿಗೆಯನ್ನು ಆಶ್ರಯಿಸುವ ಅವರು ಅದೇ ಬಸ್ಸಿನಲ್ಲಿ ತೆರಳಿದರು. ಅವರಿಗೆ 90 ಟಿಕೆಟ್ ನೀಡಲಾಯಿತು. ಈ ಊರುಗಳ ನಡುವಿನ ಅಂತರ ಸಹ 102 ಕಿಮೀ. ಇದರಿಂದ ಗೊಂದಲಗೊಂಡ ಅವರು ಬಹುತೇಕ ಒಂದೇ ಅಂತರವಿರುವ ಊರುಗಳಿಗೆ ಪ್ರತ್ಯೇಕ ದರ ಏಕೆ ಎಂದು ಪ್ರಶ್ನಿಸಿದರು.
ಮಾತಿನ ಚಕಮಕಿ: ಈ ಸಂದರ್ಭದಲ್ಲಿ ಕಂಡಕ್ಟರ್ ಹಾಗೂ ಪ್ರಯಾಣಿಕರ ನಡುವೆ ಮಾತಿನ ಚಕಮಕಿಯೇ ನಡೆಯಿತು. ಅಷ್ಟರಲ್ಲಾಗಲೇ ಟಿಕೆಟ್ ಹರಿದಿದ್ದರಿಂದ ದುಡ್ಡು ಕೊಡಲೇಬೇಕಾಗಿ ಬಂತು. ಇದರ ಪರಿಣಾಮ ಮರುದಿನದಿಂದ ಶಿವಮೊಗ್ಗ- ಅರಸೀಕೆರೆ ಪ್ರಯಾಣಿಕರಿಗೆ ನೀಡುವ ಟಿಕೆಟಿನಲ್ಲಿ ದೂರ ನಮೂದಿಸುವುದನ್ನು ನಿಲ್ಲಿಸಲಾಯಿತು.
ಇದಿಷ್ಟೇ ಅಲ್ಲ, ಈ ರೀತಿಯ ಹಲವು ಅನುಭವಗಳು ಸರ್ಕಾರಿ ಸಾರಿಗೆ ಪ್ರಯಾಣಿಕರಿಗೆ ಆಗಿವೆ. ಶಿವಮೊಗ್ಗ- ಹೊನ್ನಾಳಿ ನಡುವಿನ ದೂರ 38 ಕಿಮೀ, ಪಯಣ ದರ 40. ಆದರೆ, ಶಿವಮೊಗ್ಗ- ಚನ್ನಗಿರಿ ನಡುವಿನ ದೂರ 48 ಕಿಮೀ ಆದರೂ ಪ್ರಯಾಣ ದರ ಶಿವಮೊಗ್ಗ ಘಟಕದ ವಾಹನಗಳಲ್ಲಿ 30 ಚಿತ್ರದುರ್ಗ ಘಟಕದ ವಾಹನಗಳಲ್ಲಿ 28
ಇನ್ನೊಂದೆಡೆ ಶಿವಮೊಗ್ಗ- ಸಾಗರ (70 ಕಿಮೀ) ನಡುವೆ ಟಿಕೆಟ್ ದರ 50. ಇದರಿಂದ ಪ್ರಯಾಣಿಕರು ಗೊಂದಲಕ್ಕೀಡಾಗಿದ್ದಾರೆ.
ಏಕೆ ಹೀಗೆ?: ಖಾಸಗಿ ಬಸ್ಸುಗಳೊಂದಿಗೆ ನಡೆಸುತ್ತಿರುವ ಪೈಪೋಟಿಯಿಂದಾಗಿ ಈ ತಾರತಮ್ಯ ನಡೆಯುತ್ತಿದೆ. ರಾಷ್ಟ್ರೀಕೃತ ಮಾರ್ಗದಲ್ಲಿ ಸಾಗುವ ಬಸ್ ಗಳಲ್ಲಿ ಪ್ರಯಾಣ ದರ ಹೆಚ್ಚಾಗಿದೆ. ಆದರೆ, ಖಾಸಗಿ ಬಸ್ಗಳು ಓಡಾಡುವ ಮಾರ್ಗದಲ್ಲಿ ಕಡಿಮೆ ಇದೆ. ಇದರಿಂದ ನಷ್ಟ ಅನುಭವಿಸುತ್ತಿರುವುದು ಪ್ರಯಾಣಿಕರೇ.
ಪ್ರೋತ್ಸಾಹಕ ದರ: ಶಿವಮೊಗ್ಗ- ಅರಸೀಕರೆ ರಾಷ್ಟ್ರೀಕೃತ ಮಾರ್ಗ. ಇಲ್ಲಿ ಖಾಸಗಿ ಬಸ್ಗಳು ಓಡಾಡುವುದಿಲ್ಲ. ಹಾಗಾಗಿ 102 ಕಿಮೀಗೆ 105 ಪಡೆಯುತ್ತಾರೆ. ಆದರೆ, ಶಿವಮೊಗ್ಗ- ಚಿತ್ರದುರ್ಗ ಮಾರ್ಗದಲ್ಲಿ ಖಾಸಗಿ ಬಸ್ಗಳು ಓಡಾಡುತ್ತವೆ. ಹಾಗಾಗಿ ಪ್ರಮೋಷನಲ್ ಫೇರ್ (ಪ್ರೋತ್ಸಾಹಕ ದರ) ಹೆಸರಿನಲ್ಲಿ ಕಡಿಮೆ ದರದಲ್ಲಿ ಟಿಕೆಟ್ ನೀಡಲಾಗುತ್ತಿದೆ.
ಪ್ರೋತ್ಸಾಹಕ ದರ ನೀಡಿಯೂ ಸರ್ಕಾರಿ ಸಾರಿಗೆ ಸಂಸ್ಥೆಯು ಈ ಮಾರ್ಗಗಳಲ್ಲಿ ಲಾಭ ಮಾಡುವುದೇ ಆದರೆ, ಖಾಸಗಿ ಬಸ್ಸುಗಳು ಓಡಾಡುವುದಕ್ಕೆ ಅವಕಾಶವೇ ಇರದ ರಾಷ್ಟ್ರೀಕೃತ ಮಾರ್ಗದಲ್ಲಿ ಪ್ರೋತ್ಸಾಹಕ ದರ ಪಡೆಯುವುದರಲ್ಲಿ ಇರುವ ತೊಂದರೆಯಾದರೂ ಏನು ಎಂಬುದು ಈ ಪ್ರಯಾಣಿಕರ ಪ್ರಶ್ನೆಯಾಗಿದೆ.
ಕಾಲೆಳೆಯುವ ವ್ಯವಸ್ಥೆ: ಈ ಬಗ್ಗೆ ಪ್ರತಿಕ್ರಿಯಿಸಿರುವ ಖಾಸಗಿ ಬಸ್ ಮಾಲೀಕರೊಬ್ಬರು, ಬೇರೆ ದೇಶಗಳಲ್ಲಿ ಯಾರಾದರೂ ಸ್ವಂತ ಉದ್ದಿಮೆ ನಡೆಸುತ್ತಾರೆ ಎಂದರೆ ಸರ್ಕಾರವೇ ಅವರ ಬಳಿ ಬಂದು ಬೇಕಾದ ಸಹಾಯ ಮಾಡುತ್ತದೆ. ಆದರೆ, ನಮ್ಮಲ್ಲಿ ಅವರ ಕಾಲೆಳೆಯುವ ಸರ್ಕಾರಿ ವ್ಯವಸ್ಥೆಯೇ ಮುಂದುವರಿದಿದೆ ಎಂದು ವಿಷಾದಿಸುತ್ತಾರೆ.
ಎಲ್ಲಾ ಮಾರ್ಗಗಳಲ್ಲೂ ಸ್ಪರ್ಧಾತ್ಮಕ ದರದಲ್ಲಿಯೇ ಬಸ್ ಓಡಿಸಿ ಲಾಭ ಮಾಡಬಹುದು. ಇದಕ್ಕೆ ಇಲಾಖೆಯೊಳಗಿನ ಸೋರಿಕೆ ಮೊದಲು ತಡೆಗಟ್ಟಲಿ. ಪ್ರಯಾಣಿಕರೆ ಇಲ್ಲದೇ ಖಾಲಿ ಬಸ್ಸು ಓಡಿಸುವುದನ್ನು ನಿಲ್ಲಿಸಲಿ ಎನ್ನುತ್ತಾರೆ ಅವರು.
ಕೆಎಸ್ಸಾರ್ಟಿಸಿ ಅಧಿಕಾರಿಯೊಬ್ಬರು, ಸ್ಪರ್ಧಾತ್ಮಕ ದರ ವಿಧಿಸುವುದಕ್ಕೆ ನಮಗೆ ಸರ್ಕಾರಿ ಆದೇಶವೇ ಇದೆ. ಇದೇನು ತಪ್ಪಲ್ಲ ಎನ್ನುತ್ತಾರೆ.
ಆದರೆ ಖಾಸಗಿ ಬಸ್ಸುಗಳೊಂದಿಗಿನ ಪೈಪೋಟಿಯಲ್ಲಿ ಪ್ರಯಾಣಿಕರಿಗೆ ನಷ್ಟವನ್ನುಂಟು ಮಾಡುವುದು ಎಷ್ಟು ಸರಿ- ಈ ಪ್ರಶ್ನೆಗೆ ಉತ್ತರ ಕೊಡುವವರು ಇಲ್ಲ.
- ಹೊನ್ನಾಳಿ ಚಂದ್ರಶೇಖರ್