ಕಳಪೆ ಬೀಜ ವಿತರಿಸಿದ ಕಂಪನಿ ವಿರುದ್ಧ ಹೋರಾಟ
ಶಿರಾಳಕೊಪ್ಪ: ಅನ್ನದಾತನಾದ ರೈತನಿಗೆ ಕೆಲವು ಕಂಪನಿಗಳು ಕಳಪೆ ಬೀಜ ವಿತರಿಸಿ ರೈತರ ಜೀವನದ ಜೊತೆಗೆ ಚೆಲ್ಲಾಟ ವಾಡುತ್ತಿವೆ. ಅಮ್ಮಾನ್ ಸೋನಾ ಎಂದು ಕಳಪೆ ಬೀಜ ವಿತರಿಸಿರುವ ಕಂಪನಿ ಪ್ರಮುಖರು ಸಮಸ್ಯೆಯನ್ನು ಖುದ್ದು ಬಗೆಹರಿಸುತ್ತೇವೆ ಎಂದು ಹೇಳಿ ರೈತರನ್ನು ಸತಾಯಿಸಿದರೆ ಉಗ್ರ ಹೋರಾಟ ಮಾಡಬೇಕಾದೀತು ಎಂದು ರೈತಹೋರಾಟ ಸಮಿತಿ ಅಧ್ಯಕ್ಷ ರಾಜಣ್ಣ ಎಚ್ಚರಿಸಿದ್ದಾರೆ.
ಶಿರಾಳಕೊಪ್ಪ ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಪದಾಧಿಕಾರಿಗಳು ಈಗಾಗಲೇ ಶಿರಾಳಕೊಪ್ಪ ಪಟ್ಟಣದ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಎಸ್ಐ ಸಮ್ಮುಖದಲ್ಲಿ ಕಳೆದ ಗುರುವಾರ ಶಿರಾಳಕೊಪ್ಪಕ್ಕೆ ಖುದ್ದು ಆಗಮಿಸಿ, ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ರೈತರು ಸುಮ್ಮನಿದ್ದರು. ಒಂದು ವಾರವಾದರೂ ಕಂಪನಿಯ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ. ಆದರೆ ಇದನ್ನು ರೈತರ ದೌರ್ಬಲ್ಯ ಎಂದು ತಿಳಿದರೆ ಈ ಬಗ್ಗೆ ಸೋಮವಾರ ಹೋರಾಟ ಕೈಗೆತ್ತಿಕೊಳ್ಳುವುದಾಗಿ ಸಂಘ ನೇರಲಗಿ ಭರ್ಮಣ್ಣ,ಮುಗಳಿಕೊಪ್ಪದ ಹಂಪೇಶಪ್ಪ, ತಾಳ ಗುಂದ ಸತೀಶ್,ಉಡಗಣಿ ನಯೀಂಬಾಷಾ ಹಾಗು ಇತರರು ಎಚ್ಚರಿಸಿದ್ದಾರೆ.
--