ಮೀನಾಕ್ಷಮ್ಮ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಭೆ
ಸೊರಬ: ಆರ್‌ಎಸ್‌ಎಸ್ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಇವರ ತಾಯಿ ಮೀನಾಕ್ಷಮ್ಮ ಈಗ್ಗೆ 14 ದಿನಗಳ ಹಿಂದೆ ಮೃತರಾಗಿದ್ದು, ಅವರ ವೈಕುಂಠಸಮಾರಾಧನೆ ನಿಮಿತ್ತ ಶ್ರದ್ಧಾಂಜಲಿ ಸಭೆ ಬುಧವಾರ ಪಟ್ಟಣದ ಗುರುಭವನದಲ್ಲಿ ನಡೆಯಿತು.
ಕುಟುಂಬದ ಹಿರಿಯ ಹೆಚ್.ಎಸ್. ಮಂಜಪ್ಪ ಇವರ ಉಪಸ್ಥಿತಿಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಕೇರಳ, ದೆಹಲಿ, ಹರಿಯಾಣ, ಆಂಧ್ರ ಪ್ರದೇಶ, ಪಂಜಾಬ್, ತಮಿಳುನಾಡು, ಮಹಾರಾಷ್ಟ್ರ ಮುಂತಾದ ಕಡೆಗಳಿಂದ ಅನೇಕ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಪ್ರಮುಖರು, ಜಿಲ್ಲಾ, ತಾಲೂಕು ಗಣ್ಯರು, ಜನಪ್ರತಿನಿಧಿಗಳು, ಕುಟುಂಬ, ಬಂಧು ಬಳಗ, ಆಪ್ತೇಷ್ಟರು ಪಾಲ್ಗೊಂಡಿದ್ದರು.
ಎಂಎಲ್ಸಿ ಟಿ.ವಿ. ಕೃಷ್ಣಭಟ್, ಪಾಟ್ನದ ಸ್ವಾಂತರಂಜನಜೀ, ಅಂಜುಮಾಮ್ ಮಿಶ್ರಾ, ಕೆ.ಎಸ್. ಈಶ್ವರಪ್ಪ, ಅನಂತ ಹೆಗಡೆ ಆಶಿಸರ, ಮೊದಲಾದವರು ಆಗಮಿಸಿದ್ದರು. ರಾಷ್ಟ್ರೀಯ ನಾಯಕರುಗಳಾದ ನರೇಂದ್ರ ಮೋದಿ, ಅರುಣ ಜೇಟ್ಲಿ, ಸುಷ್ಮಾ ಸ್ವರಾಜ್, ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್, ರಾಜಸ್ಥಾನ ಮುಖ್ಯಮಂತ್ರಿ ವಸುಂಧರ ರಾಜೆ, ಆರ್‌ಎಸ್‌ಎಸ್‌ನ ಪ್ರಮುಖರು ಹಾಗೂ ಡಾ.ಚಂದ್ರಪ್ರಕಾಶ್ ದ್ವಿವೇದಿ, ಟಿ.ಎನ್. ಸೀತಾರಾಂ, ಲಯನ್ಸ್ ಜಿಲ್ಲಾ ಗವರ್ನರ್ ಎಚ್.ಎನ್. ಶಿವಕುಮಾರ್, ಕ್ಲಬ್‌ನ ಅನೇಕ ಗಣ್ಯರು, ಶಿರಸಿ ತೋಟಗಾರ್ಸ್ ಸಹಕಾರಿ ಸಂಘದ ಅಧ್ಯಕ್ಷ ಶಾಂತಾರಾಂ ಹೆಗಡೆ, ಮುಂತಾದವರು ಶೋಕ ಸಂದೇಶ ಕಳುಹಿಸಿದ್ದರು.