ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವಿಐಎಸ್‌ಎಲ್ ಕಾರ್ಮಿಕರ ಧರಣಿ ವಾಪಸ್

Lingaraj Badiger
Updated On : 26 Dec 2013, 11:36 am

ಕ.ಪ್ರ.ವಾರ್ತೆ  ಭದ್ರಾವತಿ  ಡಿ.25
ವಿಐಎಸ್‌ಎಲ್ ಕಾರ್ಖಾನೆಯನ್ನು ಉಕ್ಕು ಪ್ರಾಧಿಕಾರ ಖಾಸಗಿ ಸಹಭಾಗಿತ್ವಕ್ಕೆ ವಹಿಸಬಾರದು, ಕಾರ್ಖಾನೆಗೆ ಸ್ವಂತ ಕಬ್ಬಿಣದ ಅದಿರಿನ ಗಣಿ ನೀಡಬೇಕೆಂದು ಆಗ್ರಹಿಸಿ ಕಾರ್ಖಾನೆಯ ಕಾರ್ಮಿಕ ಸಂಘ ಹಾಗೂ ಗುತ್ತಿಗೆ ಕಾರ್ಮಿಕರ ಸಂಘ ಸೆಪ್ಟೆಂಬರ್‌ನಿಂದ ಕಾರ್ಖಾನೆಯ ಪ್ರವೇಶ ದ್ವಾರದ ಮುಂದೆ ನಡೆಸುತ್ತಿದ್ದ ಧರಣಿಯನ್ನು ಮಂಗಳವಾರ ಮುಕ್ತಾಯಗೊಳಿಸಲಾಯಿತು.
ಬೆಳಿಗ್ಗೆ 7ರಿಂದ 9ರವರೆಗೆ ಕಾರ್ಖಾನೆಯ ಪ್ರವೇಶ ದ್ವಾರದ ಮುಂದೆ ನಡೆದ ಸಭೆಯಲ್ಲಿ ಕಾರ್ಖಾನೆಯ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಕಾರ್ಮಿಕರ ಬೇಡಿಕೆ ಕುರಿತು ಜಿಲ್ಲೆಯ ರಾಜಕಾರಣಿಗಳು ಸಂಸದರು, ಪಕ್ಷಭೇದ ಮರೆತು ಜಿಲ್ಲೆಯ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪನವರ ನೇತೃತ್ವದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದಲ್ಲಿನ ರಾಜ್ಯದ ಕೇಂದ್ರ ಮಂತ್ರಿಗಳೊಂದಿಗೆ ನಡೆಸಿದ ಮಾತುಕತೆ ಬಹುತೇಕ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರು 72 ದಿನಗಳಿಂದ ನಡೆಸುತ್ತಿರುವ ಈ ಹೋರಾಟವನ್ನು ಕೈಬಿಡಲಾಗಿದೆ ಎಂದರು.
ಖಾಸಗಿ ಸಹಭಾಗಿತ್ವ ಇಲ್ಲ: ಕಾರ್ಮಿಕ ಮುಖಂಡರು, ರಾಜಕಾರಣಿಗಳ, ರಾಜ್ಯದ ಸಂಸದರ ಎಲ್ಲರ ಒಗ್ಗಟ್ಟಿನ ಪ್ರಯತ್ನದ ಫಲವಾಗಿ ಸೈಲ್ ಉಕ್ಕು ಪ್ರಾಧಿಕಾರವು ಬಹುತೇಕ ಕಾರ್ಖಾನೆಯನ್ನು ಖಾಸಗಿ ಸಹಭಾಗಿತ್ವಕ್ಕೆ ವಹಿಸಲು ಮಾಡಿದ್ದ ನಿರ್ಧಾರದಿಂದ ಹಿಂದೆ ಸರಿದಿದೆ. ಕಾರ್ಖಾನೆಯ ಉತ್ಪಾದನೆಗೆ ಅಗತ್ಯವಾದ ಅದಿರಿನ ಗಣಿ ನೀಡಿದರೆ ಕಾರ್ಖಾನೆಗೆ ಅಗತ್ಯವಾದ ಬಂಡವಾಳ ಹೂಡಿ ಕಾರ್ಖಾನೆಯನ್ನು ಮುನ್ನಡೆಸಿಕೊಂಡು ಹೋಗಲು ಅದು ಸಮ್ಮತಿಸಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಕಬ್ಬಿಣದ ಅದಿರಿನ ಗಣಿಯನ್ನು ಒದಗಿಸುವ ಸಲುವಾಗಿ ಬೆಂಗಳೂರಿಗೆ ದೆಹಲಿಯಿಂದ ಸೈಲ್ ಆಡಳಿತವರ್ಗದ ಅಧಿಕಾರಿಗಳನ್ನು ಕರೆಸಿ ಮಾತುಕತೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಸಹಭಾಗಿತ್ವಕ್ಕೆ ವಿರೋಧ: ಆದರೆ ಈ ಕಾರ್ಖಾನೆಯನ್ನು ಸೈಲ್ ಜಾಯಿಂಟ್ ವೆಂಚರ್‌ಗೆ ಒಳಪಡಿಸಲು ಮುಂದಾದರೆ ಆಗ ನಾವು, ನೀವು ಅವರ ಮುಖದ ಮೇಲೆ 1 ರುಪಾಯಿ ಎಸೆದು ಕಾರ್ಖಾನೆಯನ್ನು ಮರಳಿ ಪಡೆದುಕೊಳ್ಳೋಣ. ಈ ನಿಟ್ಟಿನಲ್ಲಿ ಅನಿವಾರ್ಯವಾದರೆ ಮತ್ತೊಮ್ಮೆ ಹೋರಾಟ ಮಾಡಲಾಗುವುದು. ಈಗ ಸದ್ಯಕ್ಕೆ ಧರಣಿಯನ್ನು ಕೈ ಬಿಡಿ ಎಂದು ಅವರು ಕಾರ್ಮಿಕರಿಗೆ ಮನವಿ ಮಾಡಿದರು. ಶಾಸಕ ಎಂ.ಜೆ.ಅಪ್ಪಾಜಿ, ವಿಐಎಸ್‌ಎಲ್ ಕಾರ್ರ್ಖಾನೆಯಲ್ಲಿ 17 ವರ್ಷಗಳ ಕಾಲ ಕಾರ್ಮಿಕನಾಗಿ ಸೇವೆ ಸಲ್ಲಿಸಿರುವ ನಾನು ಕಾರ್ಖಾನೆಯ ಋಣದಲ್ಲಿದ್ದೇನೆ. ಈ ಕಾರ್ಖಾನೆಯನ್ನು ಉಳಿಸಲೇ ಬೇಕೆಂಬ ರಾಜಕೀಯ ಇಚ್ಚಾಶಕ್ತಿಯಿಂದ ಈ ಜಿಲ್ಲೆಯ ಹಾಗೂ ರಾಜ್ಯದ ರಾಜಕಾರಣಿಗಳು ಪಕ್ಷಾತೀತವಾಗಿ, ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇವೆ ಎಂದರು.
ಮಾಜಿ ಶಾಸಕ ಸಂಗಮೇಶ್ವರ್, ಕಾರ್ಮಿಕ ಸಂಘದ ಅಧ್ಯಕ್ಷ ಚಂದ್ರಹಾಸ ಮಾತನಾಡಿದರು.
ವೇದಿಕೆಯಲ್ಲಿ ನಿವೃತ್ತ ಕಾರ್ಮಿಕ ಮುಖಂಡ ಅಸ್ಮತ್ ಪಾಷ, ಬೈರೇಗೌಡ, ರಂಗೇಗೌಡ, ಬಿಜೆಪಿ ಮುಖಂಡ ಬಿ.ಕೆ.ಶ್ರೀನಾಥ್, ಮಂಜುನಾಥ್, ಸುನಿತ, ಕಾರ್ಮಿಕ ಸಂಘದ ಪದಾಧಿಕಾರಿ ಶ್ರೀನಿವಾಸ್, ಹೊನ್ನಪ್ಪ, ರೇವಣ್ಣ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement