ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಕ್ಸಲರನ್ನು ಮುಖ್ಯವಾಹಿನಿಗೆ ತನ್ನಿ

Vishwanath S
Updated On : 27 Dec 2013, 12:43 pm

ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ  ಡಿ.26
ಸರ್ಕಾರ ಇನ್ನು ತಡ ಮಾಡದೆ ನಕ್ಸಲರು ಮುಖ್ಯವಾಹಿನಿಗೆ ಬರುವಂತೆ ಮಾಡಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದ್ದು, ಅವರು ಸಾಗುತ್ತಿರುವ ದಾರಿಯ ಬಗ್ಗೆ ನಮ್ಮ ಭಿನ್ನಾಭಿಪ್ರಾಯವಿತ್ತು. ಈಗ ಅವರೇ ಮುಖ್ಯವಾಹಿನಿಗೆ ಬರುತ್ತೇವೆಂದು ಹೇಳುತ್ತಿರುವುದರಿಂದ ಸರ್ಕಾರವೇ ಮುಂದಾಗಿ ಸಮಸ್ಯೆಯನ್ನು ಕೊನೆಗಾಣಿಸಬೇಕು ಎಂದು ಆಗ್ರಹಿಸಿದ್ದಾರೆ.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಪ್ರಜಾತಂತ್ರವಾದಿಗಳು, ಶಾಂತಿಗಾಗಿ ನಾಗರಿಕರ ವೇದಿಕೆ ಹಾಗೂ ಮಾನವ ಹಕ್ಕು ಸಂಘಟನೆಗಳ ಮನವಿ ಮೇರೆಗೆ ಕ್ರಾಂತಿಕಾರಿ ಕಮ್ಯುನಿಷ್ಟ್ ಪಕ್ಷದ ಮುಖಂಡರಾದ ಸಿರಿಮನೆ ನಾಗರಾಜ್ ಹಾಗೂ ನೂರ್ ಜುಲ್ಫೀಕರ್ ಅವರು ರಹಸ್ಯ ಸ್ಥಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.
ಸರ್ಕಾರವು ತಮ್ಮ ವಿರುದ್ಧ ಸುಳ್ಳು ಕೇಸು ಹಾಕಿದ್ದು, ಇವನ್ನು ವಾಪಸ್ ಪಡೆದರೆ ಮುಖ್ಯವಾಹಿನಿಗೆ ಬರುವುದಾಗಿ ಹೇಳಿದ್ದಾರೆ. ಸರ್ಕಾರ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು.
ಪೂರಕ ವಾತಾವರಣ: ಕರ್ನಾಟಕ ಜನಶಕ್ತಿ ರಾಜ್ಯ ಸಮಿತಿ ಸದಸ್ಯ ಕೆ.ಎಲ್. ಅಶೋಕ್ ಮಾತನಾಡಿ, ಇದು ಶರಣಾಗತಿ ಅಲ್ಲ. ಜನರಿಗೆ ನೆರವಾಗುವ ಆಶಯದಿಂದ ಅವರು ಭೂಗತರಾಗಿದ್ದರು. ಈಗ ಹೊರಗೆ ಬರುವ ನಿರ್ಧಾರ ಮಾಡಿದ್ದಾರೆ. ಸರ್ಕಾರ ಇದಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡಬೇಕು ಎಂದಿದ್ದಾರೆ.
ಸಿರಿಮನೆ ನಾಗರಾಜ್, ನೂರ್ ಜುಲ್ಫೀಕರ್ ಅವರು ಮಾಧ್ಯಮದೊಂದಿಗೆ ಮಾತನಾಡಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಹಾಗಾಗಿ ಇಬ್ಬರೂ ಮುಂದೆ ಹೆಜ್ಜೆ ಇಡಬೇಕು ಎಂದರು.
ಸ್ವಾಗತ: ಲೇಖಕ ಸರ್ಜಾಶಂಕರ್ ಹರಳೀಮಠ, ಅವರ ಆಶಯದ ಬಗ್ಗೆ ಭಿನ್ನಾಭಿಪ್ರಾಯವಿಲ್ಲದಿದ್ದರೂ ಮೊದಲಿನಿಂದಲೂ ನಾವು ಅವರು ಸಾಗುವ ಮಾರ್ಗದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದೆವು. ಪ್ರಜಾತಾಂತ್ರಿಕ ಹೋರಾಟದ ಬಗ್ಗೆ ಒಲವು ತೋರಿಸಿರುವ ಅವರು ಈಗ ಮುಖ್ಯವಾಹಿನಿಗೆ ಬರುವ ಮಾತನ್ನಾಡಿದ್ದಾರೆ.
ಸರ್ಕಾರ ಪ್ರಜಾಸತ್ತಾತ್ಮಕವಾಗಿ ನಡೆದುಕೊಂಡರೆ ರಹಸ್ಯ ಜೀವನ ತ್ಯಜಿಸಿ ಪ್ರಜಾತಾಂತ್ರಿಕ ಚಳವಳಿ ಕಟ್ಟುವುದಾಗಿ ಘೋಷಿಸಿದ್ದಾರೆ. ಇದನ್ನು ನಾವು ಸ್ವಾಗತಿಸುತ್ತೇವೆ ಎಂದರು.
ನಮ್ಮ ಹಕ್ಕು ವೇದಿಕೆಯ ಕೆ.ಪಿ. ಶ್ರೀಪಾಲ್, ನಕ್ಸಲರ ಶರಣಾಗತಿ ಪ್ಯಾಕೇಜ್ ದುರುಪಯೋಗವಾಗುತ್ತಿದೆ. ಆದ್ದರಿಂದ ನಕ್ಸಲರು ಮುಖ್ಯವಾಹಿನಿಗೆ ಬಂದರೆ ಈ ಹಣ ಸದ್ಬಳಕೆಯಾಗುತ್ತದೆ ಎಂದಿದ್ದು, ನಾವು ಯಾವತ್ತೂ ಬಂದೂಕಿನ ಹೋರಾಟ ಖಂಡಿಸಿದ್ದೇವೆ ಎಂದಿದ್ದಾರೆ.
ಮೊಕದ್ದಮೆ ವಾಪಸು ಪಡೆಯಲು ಅವಕಾಶವಿದೆ. ಐಪಿಸಿ ಕಲಂ 322ರ ಅನ್ವಯ ಈಗಾಗಲೇ ರಾಜ್ಯ ಸರ್ಕಾರವು ಪ್ರಮೋದ್ ಮುತಾಲಿಕ್, ಸಿ.ಟಿ. ರವಿ ಸೇರಿದಂತೆ ಹಲವರ ವಿರುದ್ಧದ ಮೊಕದ್ದಮೆ ವಾಪಸ್ ಪಡೆದಿದೆ. ಅದರಂತೆ ಸರ್ಕಾರ ಮುಂದಾಗಬೇಕು ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಆರ್. ಕುಮಾರ್, ರಾಜೇಂದ್ರ, ಜಿ. ರಾಜು ಸೇರಿದಂತೆ ಹಲವರು ಇದ್ದರು.
ಇದು ಶರಣಾಗತಿ ಅಲ್ಲ. ಜನರಿಗೆ ನೆರವಾಗುವ ಆಶಯದಿಂದ ಅವರು ಭೂಗತರಾಗಿದ್ದರು. ಈಗ ಹೊರಗೆ ಬರುವ ನಿರ್ಧಾರ ಮಾಡಿದ್ದಾರೆ. ಸರ್ಕಾರ ಇದಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡಬೇಕು
- ಕೆ.ಎಲ್. ಅಶೋಕ್, ಜನಶಕ್ತಿ ರಾಜ್ಯ ಸಮಿತಿ ಸದಸ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement