ನಾಳೆ ತೀರ್ಥಹಳ್ಳಿಯಲ್ಲಿ ಪ್ರತಿಭಟನೆ
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಡಿ.26
ಅಡಕೆ ನಿಷೇಧ ಹುನ್ನಾರದ ವಿರುದ್ಧ ಮಲೆನಾಡ ಜಿಲ್ಲೆಯಲ್ಲಿ ಪ್ರತಿಭಟನೆಗಳು ಬಿರುಸು ಪಡೆಯುತ್ತಿದ್ದು, ಡಿ.28ರಂದು ತೀರ್ಥಹಳ್ಳಿಯಲ್ಲಿ ಸಹಕಾರಿ ವೇದಿಕೆ, ರೈತ ಸಂಘಟನೆಗಳು ಬೃಹತ್ ಪ್ರತಿಭಟನೆ ಆಯೋಜಿಸಿವೆ.
ಈ ಬಗ್ಗೆ ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದ ವಕೀಲ ಕೆ.ಪಿ. ಶ್ರೀಪಾಲ್, ಅಡಕೆ ನಿಷೇಧದ ಹೆಸರಿನಲ್ಲಿ ಸರ್ಕಾರಗಳು ರೈತರೊಂದಿಗೆ ಚಲ್ಲಾಟ ಆಡುತ್ತಿವೆ. ರೈತರ ಆತಂಕವನ್ನು ಬಗೆಹರಿಸುವ ಯಾವ ಕೆಲಸವನ್ನೂ ಸರ್ಕಾರಗಳು ಮಾಡುತ್ತಿಲ್ಲ ಎಂದ ಆಕ್ರೋಶ ವ್ಯಕ್ತಪಡಿಸಿದರು.
ಪ್ರಮಾಣಪತ್ರ ಸಲ್ಲಿಸಿಲ್ಲ: ವಾಸ್ತವವಾಗಿ ಕೇಂದ್ರ ಸರ್ಕಾರವು ಅಡಕೆ ನಿಷೇಧಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಯಾವುದೇ ಪ್ರಮಾಣಪತ್ರ ಸಲ್ಲಿಸಿಲ್ಲ. ಹೆಚ್ಚುವರಿ ಸಾಲಿಸಿಟರ್ ಅವರು ಪ್ರಕರಣವೊಂದರಲ್ಲಿ ವಾದ ಮಂಡಿಸುವ ಸಂದರ್ಭದಲ್ಲಿ ನ್ಯಾಯಾಧೀಶರು ಅಡಕೆ ಹಾನಿಕರವೇ ಎಂದು ಕೇಳಿದಾಗ ಇರಬಹುದು ಎಂದಿದ್ದಾರೆ. ಇವರ ಮಾತುಗಳು ಕೇಂದ್ರ ಸರ್ಕಾರದ ಅಭಿಪ್ರಾಯ ಆಗಿರುವುದರಿಂದ ರೈತರಲ್ಲಿ ಆತಂಕ ಮನೆ ಮಾಡಿದೆ ಎಂದಿದ್ದಾರೆ.
ಅಡಕೆಯಲ್ಲಿ ಹಾನಿಕರ ವಸ್ತುವಿಲ್ಲ ಎನ್ನುವ ಹಲವು ವರದಿಗಳು ಇದ್ದರೂ ಸಹ ಕೇಂದ್ರ ಸರ್ಕಾರವು ವಿಶ್ವ ಆರೋಗ್ಯ ಸಂಸ್ಥೆ ನೀಡಿದ ವರದಿಯನ್ನೇ ನೆಚ್ಚಿಕೊಂಡಿದೆ. ಜವಾಹರಲಾಲ್ ನೆಹರೂ ವಿವಿಯ ವಿಜ್ಞಾನಿಗಳು ಅಡಕೆಯನ್ನು ಪರೀಕ್ಷಿಸಿ ಅಡಕೆ ಹಾನಿಕರ ಅಲ್ಲ ಎಂದು ನೀಡಿದ ವರದಿಯನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಆಕ್ಷೇಪಿಸಿದ್ದಾರೆ.
ವಕೀಲರನ್ನು ನೇಮಿಸಿ: ಅಡಕೆ ಬೆಳೆಗಾರರನ್ನು ಪ್ರತಿನಿಧಿಸಲು ಕೂಡಲೇ ಅಡಕೆ ಬಗ್ಗೆ ವೈಜ್ಞಾನಿಕ ದೃಷ್ಟಿಕೋನ ಹೊಂದಿರುವ ವಕೀಲರನ್ನು ನೇಮಿಸಬೇಕು ಎಂದರು.
ಪ್ರತಿಭಟನೆಯಲ್ಲಿ ಅಡಕೆ ಬೆಳೆಗಾರರ ಒಕ್ಕೂಟದ ರಾಜ್ಯಾಧ್ಯಕ್ಷ ಆರ್.ಎಂ. ಮಂಜುನಾಥಗೌಡ, ರೈತ ಮುಖಂಡರಾದ ಕಡಿದಾಳು ಶಾಮಣ್ಣ, ಎಚ್.ಆರ್. ಬಸವರಾಜಪ್ಪ, ಕೆ.ಟಿ. ಗಂಗಾಧರ್, ಬಿ.ಆರ್. ಜಯಂತ್, ನಾಕುಂಜಿ ಸುಧಾಕರ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸೋಮಣ್ಣ, ದುಗ್ಗಪ್ಪಗೌಡರು, ಜಿ.ಎನ್. ಸುಧೀಂದ್ರ, ನಾನ್ಯಾನಾಯ್ಕ್ ಇದ್ದರು.
ರಾಜಕೀಯಕ್ಕೆ ಬಳಕೆ...
ಕ್ಯಾಂಪ್ಕೋ, ಮ್ಯಾಮ್ಕೋಸ್ ಸೇರಿದಂತೆ ಹಲವು ಅಡಕೆ ಸಹಕಾರಿ ಸಂಸ್ಥೆಗಳು ರಾಜಕೀಕರಣಗೊಳ್ಳುತ್ತಿವೆ. ಗುಟ್ಕಾ ನಿಷೇಧ, ಅಡಕೆ ನಿಷೇಧ ಎಂದು ಸುದ್ದಿ ಮೇಲೆದ್ದಾಗ ಎಚ್ಚರವಾಗುವ ಇವರು ಅಡಕೆ ಬೆಳೆಗಾರರ ಹಿತರಕ್ಷಣೆಯನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಕೆ.ಪಿ. ಶ್ರೀಪಾಲ್ ಆರೋಪಿಸಿದರು.
2002ರಲ್ಲಿ ನಡೆದ ಮ್ಯಾಮ್ಕೋಸ್ ಸಭೆಯಲ್ಲಿ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರುವ ಅಡಕೆ ಸಂಬಂಧಿ ಪ್ರಕರಣದಲ್ಲಿ ವಕೀಲರನ್ನು ನೇಮಿಸಲು ಲಾಭಾಂಶದ 22 ಲಕ್ಷ ರು.ಗಳನ್ನು ತೆಗೆದಿರಿಸಲಾಗಿತ್ತು. ಆದರೆ ವಕೀಲರನ್ನು ನೇಮಿಸಲೇ ಇಲ್ಲ. ಈ ಬಗ್ಗೆ ಮ್ಯಾಮ್ಕೋಸ್ ವಿವರಣೆ ನೀಡಬೇಕು ಎಂದು ಆಗ್ರಹಿಸಿದ ಅವರು, ಈ ಹಣ ದುರುಪಯೋಗವಾಗಿರುವ ಶಂಕೆ ಇದ್ದು ಈ ಬಗ್ಗೆ ಕೂಡಲೇ ತನಿಖೆ ನಡೆಯಬೇಕು ಎಂದರು.
ಸುಪ್ರೀಂಕೋರ್ಟ್‌ನಲ್ಲಿ ಬೆಳೆಗಾರರ ಪರ ವಕೀಲರಾದ ರಾಮ್ ಜೇಠ್ಮಲಾನಿ, ವಿಶ್ವನಾಥ ಸಿಂಗ್ ಅವರು ಪ್ರತಿನಿಧಿಸಿದ್ದಾರೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಪದ್ಮನಾಭ ಕಂಕೋಡಿ ತಪ್ಪು ಮಾಹಿತಿ ನೀಡಿದ್ದಾರೆ. ಈ ಹಿರಿಯ ವಕೀಲರು ಅಡಕೆ ಬೆಳೆಗಾರರ ಪರ ವಕಾಲತ್ ಹಾಕಿಯೇ ಇಲ್ಲ ಎಂದರು.