ರಾಜ್ಯಕ್ಕೆ ಬಂಗಾರಪ್ಪ ಕೊಡುಗೆ ಅಪಾರ
ಕ.ಪ್ರ.ವಾರ್ತೆ ಟಿ ಸೊರಬ ಟಿ ಡಿ.26
ರಾಜ್ಯಕ್ಕೆ ವಿಶಿಷ್ಟ ವ್ಯಕ್ತಿತ್ವವುಳ್ಳ ಬಂಗಾರಪ್ಪ ಅವರ ಕೊಡುಗೆ ಅಪಾರ, ಅವರ ಜನಪರ ಚಿಂತನೆಗಳನ್ನು ಜೀವಂತಗೊಳಿಸುವ ಕೆಲಸವಾದಲ್ಲಿ ಮಾತ್ರ ಅವರ ಸ್ಮರಣೆಗೆ ಮಾನ್ಯತೆ ದೊರಕುತ್ತದೆ ಎಂದು ಮಾಜಿ ಶಾಸಕ ಬಿ. ಸ್ವಾಮಿರಾವ್ ತಿಳಿಸಿದರು.
ಪಟ್ಟಣದ ಬಂಗಾರ ಧಾಮದಲ್ಲಿ ಗುರುವಾರ ಏರ್ಪಡಿಸಿದ್ದ ಎಸ್. ಬಂಗಾರಪ್ಪ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ತಮ್ಮ ಅಂದಿನ ರಾಜಕೀಯ ದಿನಗಳನ್ನು ನೆನಪಿಸಿಕೊಂಡ ಅವರು ಮಾತನಾಡಿದರು.
ಶಾಸಕಿ ಶಾರದ ಪೂರ್ಯಾನಾಯ್ಕ್ ಮಾತನಾಡಿ, ಬಂಗಾರಪ್ಪ ಅವರ ನಡೆ, ನುಡಿ, ಆಕರ್ಷಣೀಯ ಶೈಲಿಯೊಂದಿಗೆ ಚಿಂತನೆಗಳನ್ನು ಸಹಾ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.
ಮಧು ಬಂಗಾರಪ್ಪರನ್ನು ಬೆಳೆಸಿ: ಶಾಸಕ ಎಂ.ಪಿ. ರವೀಂದ್ರ ಮಾತನಾಡಿ, ರಾಜಕೀಯ ರಂಗದಲ್ಲಿ ನನ್ನ ಮತ್ತು ಮಧುವಿನ ಪಕ್ಷಗಳು ಬೇರೆಯದಾದರೂ ನಾವು ಒಂದೆ ಕುಟುಂಬದವರಂತಿರುವಲ್ಲಿ ಬಂಗಾರಪ್ಪ ಅವರ ಪ್ರೀತಿ, ವಿಶ್ವಾಸಗಳು ಕಾರಣ.
ಇಲ್ಲಿನ ಜನತೆ ಅನೇಕ ವರ್ಷಗಳ ಕಾಲ ಹೇಗೆ ಬಂಗಾರಪ್ಪ ಅವರನ್ನು ಬೆಳೆಸಿ ಉಳಿಸಿದರೋ ಅದೇ ರೀತಿ ಮಧು ಬಂಗಾರಪ್ಪ ಅವರನ್ನು ಉಳಿಸಿ, ಬೆಳೆಸಿಕೊಳ್ಳಬೇಕು ಎಂದರು.
ಮಾಜಿ ಶಾಸಕ ದಿನಕರಶೆಟ್ಟಿ, ನಟ ಶಿವರಾಜಕುಮಾರ್, ಗೀತಾ ಶಿವರಾಜಕುಮಾರ್, ನಟ ಚಂದ್ರಶೇಖರ್, ಮಾತನಾಡಿದರು. ಗೇರುಕೊಪ್ಪ ಮಠದ ಶಿವಾಚಾರ್ಯ ಶ್ರೀಗಳು ಆಶೀರ್ವಚನ ನೀಡಿದರು.
ಮಧು ಬಂಗಾರಪ್ಪ ಪ್ರಾಸ್ತಾವಿಕ ಮಾತನಾಡಿ, ಸ್ಮರಣ ಮಂದಿರದ ನಿರ್ಮಾಣದ ಕುರಿತು ವಿವರಿಸಿದರು. ಬಂಗಾರಪ್ಪ ಅವರ ಚಿಂತನೆ ನಿರಂತರ, ಸಾರ್ವಜನಿಕವಾಗಿ ಉಳಿಯುವಂತಾಗಲು ಜನತೆಯ ಆಶೀರ್ವಾದವಿರಲಿ ಎಂದರು.
ಕಲ್ಪವೃಕ್ಷ ಕಾರ್ಯಕ್ರಮದಡಿ 50 ಸಾವಿರಕ್ಕೂ ಹೆಚ್ಚು ತೆಂಗಿನ ಗಿಡದ ವಿತರಣೆ, ಸ್ಮರಣ ಮಂದಿರಕ್ಕೆ ಶಂಕುಸ್ಥಾಪನೆ, ರಕ್ತದಾನ ಶಿಬಿರ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಜಡೆ ಸಂಸ್ಥಾನ ಮಠದ ಡಾ.ಮಹಾಂತಶ್ರೀಗಳು, ಶಾಂತಾಪುರದ ಶ್ರೀಗಳು, ಹಿರೆಮಾಗಡಿ ಶ್ರೀಗಳ ಉಪಸ್ಥಿತಿಯಲ್ಲಿ ಬಂಗಾರಪ್ಪ ಅವರ ಪತ್ನಿ ಶಕುಂತಲ ಬಂಗಾರಪ್ಪ, ಮಕ್ಕಳಾದ ಸುಜಾತ ತಿಲಕ ಕುಮಾರ್, ಗೀತಾ ಶಿವರಾಜಕುಮಾರ್, ಅನಿತಾ ಪವನಕುಮಾರ್, ಅಳಿಯಂದಿರಾದ ತಿಲಕ್ ಕುಮಾರ್, ಪವನ್ ಕುಮಾರ್, ಪಿ. ಗೋವಿಂದರಾಜ್, ಚಿನ್ನೆಗೌಡ, ಶಿಕಾರಿಪುರ ವಿ.ಪಿ. ಬಳಿಗಾರ್, ವೇಣುಗೋಪಾಲ್, ಬಸವಲಿಂಗಪ್ಪ, ಕೆಳವೆ ಅನಂತ್, ಹೆಚ್. ಗಣಪತಿ, ಕೆ.ಪಿ.ರುದ್ರಗೌಡ, ಎಂ.ಡಿ.ಶೇಖರ್, ಶ್ರೀಪಾದರಾವ್ ನಿಸರಾಣಿ, ಶೇಖರಮ್ಮ, ತಾಪಂ, ಗ್ರಾಪಂ, ಬೂತ್ ಮಟ್ಟದ ಪದಾಧಿಕಾರಿ, ಸದಸ್ಯರು, ಅಭಿಮಾನಿಗಳು ಇದ್ದರು.
ಎಂಪಿಗೆ ಸ್ಪರ್ಧೆ: ಗೀತಾ ಶಿವರಾಜ ಕುಮಾರ್ ಎರಡೆ ಮಾತನಾಡಿ ನಿರ್ಗಮಿಸಿದ ಬಳಿಕ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ನಾನು ಕೂಡ ಮೊದಲು ಇದೆ ರೀತಿ ಮಾತನಾಡಿದ್ದೆ, ಗೀತಕ್ಕ ಕೂಡ ಹಾಗೆ ಮುಂದೆ ಸುಧಾರಿಸುತ್ತಾರೆ, ಏಕೆ ಗೊತ್ತಾಯಿತಲ್ಲ ಎಂದು ಪ್ರಶ್ನಿಸಿ ನಗುವ ಮೂಲಕ ಎಂಪಿ ಸ್ಥಾನಕ್ಕೆ ಗೀತಾಶಿವರಾಜಕುಮಾರ್ ಸ್ಪರ್ಧಿಸುವ ಕುರಿತು ಅಪರೋಕ್ಷವಾಗಿ ಸುಳಿವು ನೀಡಿದರು.
ರಕ್ತದಾನ ಶಿಬಿರ
ಸೊರಬ: ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪನವರ ಎರಡನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಎಸ್. ಬಂಗಾರಪ್ಪ ಅಭಿಮಾನಿ ಬಳಗ ಮತ್ತು ಸೊರಬ ಲೈಫ್ ಲೈನ್ ಸೊರಬ, ರೆಡ್ಕ್ರಾಸ್ ಸಂಜೀವಿನಿ ರಕ್ತನಿಧಿ ಶಿವಮೊಗ್ಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ಚಿತ್ರನಟ ಶಿವರಾಜಕುಮಾರ್ ಸೇರಿದಂತೆ ಅನೇಕ ಯುವಕರು ರಕ್ತದಾನ ಮಾಡಿದರು. ರಕ್ತದಾನ ಮಾಡಿದವರಿಗೆ ವೇದಿಕೆ ಕಾರ್ಯಕ್ರಮದ ವೇಳೆ ಅಬಿನಂದನಾ ಪತ್ರ ನೀಡಲಾಯಿತು.
ಸೊರಬ ಲೈಫ್ಲೈನ್ ಅಧ್ಯಕ್ಷರಾದ ನಾಗರಾಜ ಜೈನ್, ರೆಡ್ಕ್ರಾಸ್ ಸಂಜೀವಿನಿ ರಕ್ತನಿಧಿಯ ಪ್ರಮುಖರು, ಸಿಬ್ಬಂದಿ ಇದ್ದರು.