ಶಿವಪ್ಪ ನಾಯಕ ಸೇನೆ ಉದ್ಘಾಟನೆ
ಶಿವಮೊಗ್ಗ: ಪ್ರಾಂಜಲ ಶಿವಪ್ಪನಾಯಕ ಸೇನೆಯ ಉದ್ಘಾಟನೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಡಿ. 29ರಂದು ಬೆಳಗ್ಗೆ 10.30ಕ್ಕೆ ನಗರದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ನಡೆಯುವುದು. ನಿವೃತ್ತ ಸಹಾಯಕ ಸಬ್ ಇನ್ಸ್ಪೆಕ್ಟರ್ ಸಣ್ಣ ಮಲ್ಲಪ್ಪ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಶಾಸಕ ಪ್ರಸನ್ನಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ಕೆಜೆಪಿ ಜಿಲ್ಲಾಧ್ಯಕ್ಷ ಜ್ಯೋತಿಪ್ರಕಾಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬಿ.ದಯಾಳು, ಸಮಾಜ ಸೇವಕ ಕೆ.ಶಿವಪ್ರಸಾದ್ ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ಕಾವೇರಿ ಹನುಮಂತಪ್ಪ, ಮೈಕ್ ನಾಗರಾಜ್ ಅವರನ್ನು ಸನ್ಮಾನಿಸಲಾಗುತ್ತದೆ. ಸಂಜೆ 6 ಗಂಟೆಗೆ ರಾಜ್ಯೋತ್ಸವ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಪಾಲ್ಗೊಳ್ಳುವರು. ಸಂಜೆ 7.30ಕ್ಕೆ ಹೌದಾದರೆ ಹೌದೆನ್ನಿ ನಾಟಕ ಪ್ರದರ್ಶನವಿರುತ್ತದೆ ಎಂದು ಭದ್ರಾವತಿ ವಾಸು ತಿಳಿಸಿದ್ದಾರೆ.
ಜ.4ರಂದು ಸಹೃದಯ ಪ್ರಶಸ್ತಿ ವಿತರಣೆ
ಸಾಗರ: ಇಲ್ಲಿನ ಸಹೃದಯ ಬಳಗ ಪ್ರತಿವರ್ಷ ಕೊಡಮಾಡುವ ಸಹೃದಯ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಸಂಸ್ಥೆ ಬಿಡುಗಡೆ ಮಾಡಿದೆ.
2014ರ ರಾಜ್ಯಮಟ್ಟದ ಸಹೃದಯ ಪ್ರಶಸ್ತಿಗೆ ಧಾರ್ಮಿಕ ಕ್ಷೇತ್ರದಿಂದ ಸಿಗಂದೂರು ಕ್ಷೇತ್ರದ ಪ್ರಧಾನ ಅರ್ಚಕ ಎಸ್.ಪಿ. ಶೇಷಗಿರಿ ಭಟ್, ವೈಜ್ಞಾನಿಕ ಕ್ಷೇತ್ರದಿಂದ ನಟರಾಜ್ ಹುಲಿಕಲ್ ಬೆಂಗಳೂರು, ಸಾಂಸ್ಕೃತಿಕ ಕ್ಷೇತ್ರದಿಂದ ಪ್ರಹ್ಲಾದ್ ಆಚಾರ್ಯ ಉಡುಪಿ, ಸಾಮಾಜಿಕ ಕ್ಷೇತ್ರದಿಂದ ಲತಾ ನಾರಾಯಣ್ ಮಧುಗಿರಿ, ಶಿಕ್ಷಣ ಕ್ಷೇತ್ರದಿಂದ ಶಾರದಾ ಕೃಷ್ಣಮೂರ್ತಿ ಭಟ್ ಉತ್ತರ ಕನ್ನಡ, ಜನಪದ ಕ್ಷೇತ್ರದಿಂದ ಎಂ.ಆರ್. ಬಸಪ್ಪ ಚಿಕ್ಕಮಗಳೂರು,
ಕೃಷಿ ಕ್ಷೇತ್ರದಿಂದ ಬಿ.ಕೆ. ದೇವರಾಯ ದಕ್ಷಿಣ ಕನ್ನಡ, ಸಾಹಿತ್ಯ ಕ್ಷೇತ್ರದಿಂದ ಡಾ. ಹಂಪನಹಳ್ಳಿ ತಿಮ್ಮೇಗೌಡ ಹಾಸನ, ಸಾಂಘಿಕ ಕ್ಷೇತ್ರದಿಂದ ಡಿ. ಮಂಜುನಾಥ್ ಶಿವಮೊಗ್ಗ, ಯುವ ಪ್ರತಿಭೆ ಕ್ಷೇತ್ರದಿಂದ ರಚನಾ ಎಂ.ಎಸ್. ತುಮಕೂರು ಇವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಜ. 4ರಂದು ಸಂಜೆ 5ಕ್ಕೆ ನಗರಸಭೆ ಆವರಣದ ಗಾಂಧಿ ಮೈದಾನದಲ್ಲಿ ನಡೆಯಲಿದೆ.
ಇಂದು ಸಾಂಸ್ಕೃತಿಕ ಕಾರ್ಯಕ್ರಮ
ಶಿವಮೊಗ್ಗ: ನೆಹರು ಯುವ ಕೇಂದ್ರ ಹಾಗೂ ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ಸಂಯುಕ್ತಾಶ್ರಯದಲ್ಲಿ ಡಿ. 27ರಂದು ಬೆಳಗ್ಗೆ 10.30ಕ್ಕೆ ಶಿವಮೊಗ್ಗದ ಸರ್ಕಾರಿ ನೌಕರರ ಸಭಾ ಭವನದಲ್ಲಿ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸಂಸದ ಬಿ.ವೈ. ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸುವರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ, ಯುವ ಮುಖಂಡ ಡಿ.ಎಸ್. ಅರುಣ್, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹಿಮಂತರಾಜ್, ಯುವ ಮುಖಂಡ ಬಳ್ಳೇಕೆರೆ ಸಂತೋಷ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಕರ್ನಾಟಕ ಕಲಾಶ್ರೀ ಪುರಸ್ಕೃತ ಜಿ.ಆರ್. ಕೇಶವಮೂರ್ತಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ನಗರಸಭೆ ಅಧ್ಯಕ್ಷೆ ಖುರ್ಷಿದಾಬಾನು ಉಪಸ್ಥಿತರಿರುವರು.
ಜ್ಯೋತಿ ಬತ್ತ ಖರೀದಿಗೆ ಕ್ರಮ
ಶಿವಮೊಗ್ಗ: ಪ್ರಸಕ್ತ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಶಿವಮೊಗ್ಗ ಜಿಲ್ಲೆಯ ರೈತರಿಂದ 62,300 ಮೆಟ್ರಿಕ್ ಟನ್ ಜ್ಯೋತಿ ಬತ್ತಖರೀದಿಸಲು ಕ್ರಮ ಕೈಗೊಳ್ಳಲಾಗಿದ್ದು, ಜಿಲ್ಲೆಯ ಎಲ್ಲಾ ಖರೀದಿ ಕೇಂದ್ರಗಳ ಮುಖ್ಯಸ್ಥರಿಗೆ ಸರ್ಕಾರದ ನಿಯಮಾನುಸಾರ ಜ್ಯೋತಿ ಬತ್ತ ಖರೀದಿಸುವಂತೆ ಸೂಚಿಸಲಾಗಿದೆ.
ಜಿಲ್ಲೆಯ ರೈತರು ಈ ಸದಾವಕಾಶದ ಲಾಭ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಧನಸಹಾಯಕ್ಕೆ ಅರ್ಜಿ ಆಹ್ವಾನ
ಶಿವಮೊಗ್ಗ: ಕೊಲ್ಕತ್ತಾದ ರಾಜಾರಾಂ ಮೋಹನ್ರಾಯ್ ಗ್ರಂಥಾಲಯ ಪ್ರತಿಷ್ಠಾನವು 2013-14ನೇ ಸಾಲಿನಲ್ಲಿ ಸಾರ್ವಜನಿಕ ಗ್ರಂಥಾಲಯ ಸೇವೆ ಒದಗಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳಿಗೆ ಹೊಂದಾಣಿಕೇತರ ಧನಸಹಾಯ ನೀಡಲು ಉದ್ದೇಶಿಸಿದ್ದು, ಅರ್ಹ ಸ್ವಯಂಸೇವಾ ಸಂಸ್ಥೆಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಿದೆ.
ಸಾರ್ವಜನಿಕ ಗ್ರಂಥಾಲಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂಸೇವಾ ಸಂಘಟನೆಗಳಿಗೆ, ಸಂಸ್ಥೆಗಳಿಗೆ ಪುಸ್ತಕ, ಪೀಠೋಪಕರಣ ಹಾಗೂ ಸಲಕರಣೆ ಖರೀದಿಸಲು ಹಾಗೂ ಸದರಿ ಸಂಘಟನೆಯ ಸಲುವಾಗಿ ಗ್ರಂಥಾಲಯದ ಕಟ್ಟಡ ಅಭಿವೃದ್ಧಿಪಡಿಸಲು ಕೈಗೊಳ್ಳುವ ಹೆಚ್ಚುವರಿ ನಿರ್ಮಾಣಕ್ಕೆ ಸೇರಿದಂತೆ ಕಟ್ಟಡ ಕಾಮಗಾರಿಗಳಿಗೆ ಹಣ ಮಂಜೂರು ಮಾಡಲಾಗುವುದು.
ಅರ್ಹ ಸ್ವಯಂಸೇವಾ ಸಂಸ್ಥೆಗಳ ಮುಖ್ಯಸ್ಥರು ನಿಗದಿತ ನಮೂನೆಯ ಅರ್ಜಿಯನ್ನು ಜಿಲ್ಲಾ- ನಗರ ಕೇಂದ್ರ ಗ್ರಂಥಾಲಯ ಉಪ ನಿರ್ದೇಶಕರು- ಮುಖ್ಯ ಗ್ರಂಥಾಲಯಾಧಿಕಾರಿಗಳಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಜ. 15ರೊಳಗಾಗಿ ಸಲ್ಲಿಸುವಂತೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಎಂ.ಎಂ. ಬಡ್ನಿ ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯ
ಶಿವಮೊಗ್ಗ: ಮೆಸ್ಕಾಂನ ಘಟಕ- 4 ಶಾಖೆಯ ವ್ಯಾಪ್ತಿಯಲ್ಲಿ ಹೊಸ ಪರಿವರ್ತಕ ಅಳವಡಿಸಲು ಮತ್ತು ಹಳೆಯ ವಿದ್ಯುತ್ ಕಂಬ ಬದಲಾಯಿಸುವುದರಿಂದ ಈ ಕೆಳಕಂಡ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಡಿ. 28ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು- ಕೋಟೆ ಪೊಲೀಸ್ ಸ್ಟೇಷನ್, ಕೋಟೆ ರಸ್ತೆ, ಡಾ. ಸಿ.ಎಲ್. ರಾಮಣ್ಣ ರಸ್ತೆ, ಲಷ್ಕರ್ ಮೊಹಲ್ಲಾ, ಕೃಷ್ಣ ಕೆಫೆ ಹಿಂಭಾಗ, ಎಸ್.ಪಿ.ಎಂ. ರಸ್ತೆ, ಅಶೋಕ ರಸ್ತೆ, ಮಾರಿಗದ್ದುಗೆ ಸುತ್ತಮುತ್ತ, ಶಿವಾಜಿ ರಸ್ತೆ, ಕೊಲ್ಲೂರಯ್ಯನ ಬೀದಿ ಮತ್ತು ಸುತ್ತಮುತ್ತಲ ಪ್ರದೇಶಗಳು.
ಡಿ. 30ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು- ತಿಮ್ಮಪ್ಪನಕೊಪ್ಪಲು, ಸಿದ್ದಯ್ಯ ಸರ್ಕಲ್, ಚೋರ್ ಬಜಾರ್ ಸುತ್ತ- ಮುತ್ತ, ಗಾಂಧಿ ಬಜಾರ್ ಬಸವಣ್ಣನ ದೇವಸ್ಥಾನದ ಕಡೆ, ಬಿ.ಬಿ. ರಸ್ತೆ, ಕುಂಬಾರ ಗುಂಡಿ, ವಂದನಾ ಟಾಕೀಸ್ ಸುತ್ತ-ಮುತ್ತ, ರವಿವರ್ಮ ಬೀದಿ, ಟಿಎಸ್ಆರ್ ರಸ್ತೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಉಪವಿಭಾಗ- ಘಟಕ-4ರ ಸಹಾಯಕ ಎಂಜಿನಿಯರ್ ತಿಳಿಸಿದ್ದಾರೆ.
ಕಟ್ಟಡ ಉದ್ಘಾಟನೆ
ಶಿವಮೊಗ್ಗ: ಇಲ್ಲಿನ ಬಸವ ಕೇಂದ್ರದ ಹೆಚ್ಚುವರಿ ಕಟ್ಟಡದ ಉದ್ಘಾಟನೆ ಸಮಾರಂಭ ಹಾಗೂ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಡಿ. 29ರಂದು ನಡೆಯಲಿದೆ. ಅಂದು ಬೆಳಗ್ಗೆ 10.30ಕ್ಕೆ ಕಟ್ಟಡವನ್ನು ಶಿವಮೂರ್ತಿ ಮುರುಘಾ ಶರಣರು ಉದ್ಘಾಟಿಸಲಿದ್ದು, ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬಸವ ಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ ಅಧ್ಯಕ್ಷತೆ ವಹಿಸಲಿದ್ದು, ಸಂಸದ ಬಿ.ವೈ. ರಾಘವೇಂದ್ರ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಶಾಸಕ ಕೆ.ಬಿ. ಪ್ರಸನ್ನಕುಮಾರ್, ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಭಾರತಿ ಶೆಟ್ಟಿ, ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಎಂ.ವಿ. ವೇದಮೂರ್ತಿ ಮತ್ತಿತರರು ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು. ಸಂಜೆ ಸಾಂಸ್ಕೃತಿಕ ಸಂಭ್ರಮವನ್ನು ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬಿಕ್ಕೇರಿ ಉದ್ಘಾಟಿಸಲಿದ್ದು, ರುದ್ರಮುನಿ ಸಜ್ಜನ್ ಉಪಸ್ಥಿತರಿರುವರು.
ನಾಳೆ ಪರಿಚಯ ಸಭೆ
ಶಿವಮೊಗ್ಗ: ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘವು ಡಿ. 28ರಂದು ಸಂಜೆ 6 ಗಂಟೆಗೆ ಶ್ರೀ ಗಾಯತ್ರಿ ದೇವಸ್ಥಾನದಲ್ಲಿ ಉತ್ತರ ಪ್ರದೇಶದ ಕಲ್ಯಾ ಪೋಷಕರ ತಂಡದೊಂದಿಗೆ ಪರಿಚಯ ಸಭೆ ಏರ್ಪಡಿಸಿದೆ. ವಿಪ್ರ ವಿವಾಹದ ವೈವಾಹಿಕ ಸಮಸ್ಯೆಗೆ ಸಂಬಂಧಿಸಿದಂತೆ ಈಗಾಗಲೇ ವಿಪ್ರ ಮುಖಂಡರು ಉತ್ತರ ಪ್ರದೇಶದ ಪ್ರವಾಸ ಮಾಡಿಬಂದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಬ್ರಾಹ್ಮಣ ಸಮಾಜದ ಮುಖಂಡರು ಹಾಗೂ ಕನ್ಯೆಯರ ಪೋಷಕರು ಡಿ.27 ಮತ್ತು 28ರಂದು ಜಿಲ್ಲೆಯ ವಿವಿಧ ವರಗಳ ಮನೆಗಳಿಗೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ 28ರಂದು ಸಂಜೆ 6 ಗಂಟೆಗೆ ಪರಿಚಯ ಸಭೆಯನ್ನು ಆಯೋಜಿಸಲಾಗಿದೆ. ಎಲ್ಲಾ ವಿಪ್ರ ಸಂಘಟನೆಯ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳುವಂತೆ ವಿಪ್ರ ಮುಖಂಡರಾದ ಮ.ಸ.ನಂಜುಂಡಸ್ವಾಮಿ, ಆರ್.ಅಚ್ಯುತರಾವ್, ಜಿ.ಎಸ್.ಅನಂತ, ಎಚ್.ಎಸ್. ಛಾಯಾಪತಿ, ಯು.ಎಸ್.ಕೇಶಮೂರ್ತಿ ಕೋರಿದ್ದಾರೆ.
ಬಾಬಾ ವಿರುದ್ಧ ಪ್ರತಿಭಟನೆ
ಶಿವಮೊಗ್ಗ: ಯೋಗ ಗುರು ಬಾಬಾ ರಾಮದೇವ ಅವರು ಕಾಂಗ್ರೆಸ್ ಪಕ್ಷ, ಇಂಧಿರಾಗಾಂಧಿ ಕುಟುಂಬದ ಬಗ್ಗೆ ಇಲ್ಲದ ಸಲ್ಲದ ಅಪವಾದ ಮಾಡಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗವು ಡಿ.27ರಂದು ಬೆಳಿಗ್ಗೆ 11ಗಂಟೆಗೆ ಪ್ರತಿಭಟನೆ ಹಮ್ಮಿಕೊಂಡಿದೆ. ನಗರದ ಬಸ್ಸು ನಿಲ್ದಾಣದಿಂದ ಗೋಪಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಸಭೆಯಲ್ಲಿ ಪಾಲ್ಗೊಳ್ಳುವಂತೆ ಕಾರ್ಮಿಕ ವಿಭಾಗದ ನಗರಾಧ್ಯಕ್ಷ ಮಹಮ್ಮದ್ ಹುಸೇನ್ ಕೋರಿದ್ದಾರೆ.
ಸನ್ಸಿಟಿ ಉತ್ಸವ
ಶಿವಮೊಗ್ಗ: ಮಲೆನಾಡ ಸಿರಿ ಎಜ್ಯುಕೇಷನಲಲ್ಟ್ರಸ್ಟ್ನ ಸನ್ಸಿಟಿ ವಿದ್ಯಾಲಯವು ಸನನ್ಸಿಟಿ ಉತ್ಸವ ಹಮ್ಮಿಕೊಂಡಿದೆ. ಡಿ.27ರಂದು ಸಾಂಸ್ಕೃತಿಕ ಕಲಾ ವೈಭವ, 28ರಂದು ಭವ್ಯ ಭಾರತೋತ್ಸವ ನಡೆಯುವುದು.
27ರಂದು ಬೆಳಿಗ್ಗೆ 8 ಗಂಟೆಗೆ ಶಾಲಾ ಆವರಣದಲ್ಲಿ ಸತ್ಯನಾರಾಯಣ ಪೂಜೆ, ಮಾತಾಪಿತೃ ಗುರುವಂದನಾ ಕಾರ್ಯಕ್ರಮ, ನಡೆಯಲಿದ್ದು, ಮಧ್ಯಾಹ್ನ 3.30ರಿಂದ ಬಹುಮಾನ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ ಸಾಹಿತ್ಯ ಗ್ರಾಮದಲ್ಲಿ ಆಯೋಜಿಸಲಾಗಿದೆ. ಶಿಕ್ಷಣ ಸಂಸ್ಥೆಯ ಕಾರ್ಯದರ್ಸಿ ಕೆ.ಜಿ.ಕೇಶವಮೂರ್ತಿ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಕೆ.ಬಿ.ಪ್ರಸನ್ನಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು. ಎ.ವಿ.ಸುಧೀಶ, ಡಿ.ಮಂಜುನಾಥ, ಶಾಹಿಸ್ತಾ ನ್ಯೂಮನ್ ಉಪಸ್ಥಿತರಿರುವರು. 28ರಂದು ಸಂಜೆ 4ರಿಂದ 9ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದ್ದು, ವಿಧಾನ ಪರಿಷತ್ ಸದಸ್ಯ ಆರ್.ಕೆ.ಸಿದ್ದರಾಮಣ್ಣ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಜಿ.ಎಸ್.ನಟೇಶ್, ಹೊನ್ನಪ್ಪ ಪಾಲ್ಗೊಳ್ಳುವರು.
ಬಿಜೆಪಿ ಧರಣಿ
ಶಿವಮೊಗ್ಗ: ಶಿವಮೊಗ್ಗ ಆರ್ಟಿಓ ಕಚೇರಿಗೆ ತಕ್ಷಣವೇ ಆರ್ಟಿಓ ಹಾಗೂ ಎಆರ್ಟಿಓಗಳನ್ನು ನೇಮಿಸುವಂತೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಸದಸ್ಯರು ಧರಣಿ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಜಿಲ್ಲಾ ಪ್ರಧಾನ ಆರ್ಟಿಓ ಕಚೇರಿಯಲ್ಲಿ 6 ತಿಂಗಳಿಂದ ಆರ್ಟಿಓ ಮತ್ತು ಎಆರ್ಟಿಓ ಇಲ್ಲ. ಹೀಗಾಗಿ ಸಾರ್ವಜನಿಕರ ಕೆಲಸಗಳಿಗೆ ಹಿನ್ನೆಡೆಯಾಗುತ್ತಿದೆ, ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.
ಸಾಕಷ್ಟು ಸಂಘಸಂಸ್ಥೆಗಳು ಹಾಗೂ ಬಿಜೆಪಿ ಯುವ ಮೋರ್ಚಾ ಈ ಹಿಂದೆ ಅನೇಕ ಬಾರಿ ಪ್ರತಿಭಟನೆ ನಡೆಸಿ ಮನವಿ ಅರ್ಪಿಸಿದರೂ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ, ಸ್ಥಳೀಯ ಶಾಸಕರೂ ಸಹ ಈ ಬಗ್ಗೆ ಆರ್ಟಿಓ ನಿಯೋಜನೆಗೆ ಗಮನಹರಿಸುತ್ತಿಲ್ಲ ಎಂದು ಯುವ ಮೋರ್ಚಾ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಆರ್ಟಿಓ ಸಂಬಂಧಿ ಕೆಲಸಗಳು ಸಹ ಇಮ್ಮಡಿಸಿದೆ. ಬಹಳಷ್ಟು ಕೆಲಸಗಳು ನೆನೆಗುದಿಗೆ ಬಿದ್ದಿದ್ದು, ಇದರಿಂದ ಸಾರ್ವಜನಿಕರು ತೊಂದರೆಪಡುವಂತಾಗಿದೆ. ಹೀಗಾಗಿ ಸರ್ಕಾರ ಕೂಡಲೇ ಕಣ್ಣುತೆರೆದು ಸಮಸ್ಯೆಯನ್ನು ಅರಿತು ಆರ್ಟಿಓ, ಎಆರ್ಟಿಓಗಳನ್ನು ನೇಮಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಡಿ.ಎಸ್.ಅರುಣ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಭವಾನಿರಾವ್ ಮೋರೆ, ಯುವಮೋರ್ಚಾ ನಗರಾಧ್ಯಕ್ಷ ಹಿರಣ್ಣಯ್ಯ, ಕೃಷ್ಣಮೂರ್ತಿ, ವಿಶ್ವನಾಥ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಇಂದಿನಿಂದ ಖಾದಿ ಉತ್ಸವ ಪ್ರಾರಂಭ
ಶಿವಮೊಗ್ಗ: ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾಡಳಿತ, ಶಿವಮೊಗ್ಗ ಜಿಪಂ, ನಬಾರ್ಡ್ ಸಹಯೋಗದೊಂದಿಗೆ ಖಾದಿ ಮತ್ತು ಗ್ರಾಮೋದ್ಯೋಗ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಳ್ಳಲಾಗಿದೆ.
ಡಿ. 27ರಿಂದ ಜನವರಿ 5ರವರೆಗೆ ಒಟ್ಟು 10 ದಿನಗಳ ಕಾಲ ನಗರದ ಅಂಬೇಡ್ಕರ್ ಭವನದ ಆವರಣದಲ್ಲಿ ಉತ್ಸವ ಆಯೋಜಿಸಲಾಗಿದೆ ಎಂದು ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ತಿಳಿಸಿದ್ದಾರೆ.
27ರ ಸಂಜೆ 4 ಗಂಟೆಗೆ ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿಯವರ ಉಪಸ್ಥಿತಿಯಲ್ಲಿ ಪ್ರಾತ್ಯಕ್ಷಿಕೆಗಳ ಉದ್ಘಾಟನೆಯನ್ನು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ನೆರವೇರಿಸಲಿದ್ದು, ವಸ್ತು ಪ್ರದರ್ಶನದ ಉದ್ಘಾಟನೆಯನ್ನು ಸಚಿವ ಕಿಮ್ಮನೆ ರತ್ನಾಕರ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು ಮತ್ತು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಕಾಂಗ್ರೆಸ್ ಸಭೆ
ಶಿವಮೊಗ್ಗ: ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಭೆ ಡಿ. 27ರಂದು ಬೆಳಿಗ್ಗೆ 10.30ಕ್ಕೆ ಪಕ್ಷದ ಕಚೇರಿಯಲ್ಲಿ ನಡೆಯಲಿದೆ. ಸಮಿತಿಯ ಅಧ್ಯಕ್ಷ ಪಿ. ರುದ್ರೇಶ್ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾಧ್ಯಕ್ಷ ಆರ್. ಪ್ರಸನ್ನಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್, ಶಿವಮೊಗ್ಗ ನಗರ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ವೀಕ್ಷಕ ಯು. ಶಿವಾನಂದ, ಎಐಸಿಸಿಸ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಮಾಜಿ ಶಾಸಕ ಎಚ್.ಎಂ. ಚಂದ್ರಶೇಖರಪ್ಪ, ಉತ್ತರ ಬ್ಲಾಕ್ ನಗರಸಭಾ ಸದಸ್ಯರು, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ವಿವಿಧ ಘಟಕಗಳ ಅಧ್ಯಕ್ಷರು ಉಪಸ್ಥಿತರಿರುವರು ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಪಿ. ಮೂರ್ತಿ ತಿಳಿಸಿದ್ದಾರೆ.
ಡಿಕ್ಕಿ: ವ್ಯಕ್ತಿ ಸಾವು
ಸಾಗರ: ಪಟ್ಟಣದ ಬಿ.ಎಚ್. ರಸ್ತೆಯ ಡಿ.ವೈ.ಎಸ್.ಪಿ. ಕಚೇರಿ ಬಳಿ ಓಮಿನಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ಬುಧವಾರ ರಾತ್ರಿ ನಡೆದಿದೆ.ಅಣಲೆಕೊಪ್ಪ ವಾಸಿ ಸುಬ್ರಹ್ಮಣ್ಯ (45) ಎಂಬುವವರು ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಓಮಿನಿ ವಾಹನ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಸುಬ್ರಹ್ಮಣ್ಯ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ. ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.