ಅಡಕೆ ನಿಷೇಧ ವದಂತಿಗೆ ಕಿವಿಗೊಡಬೇಡಿ
ಶಿಕಾರಿಪುರ: ಕೊಳೆರೋಗದಿಂದ ಹಾನಿಗೀಡಾದ ಅಡಿಕೆ ಬೆಳೆಗೆ ಅತೀ ಹೆಚ್ಚಿನ ಪರಿಹಾರವನ್ನು ನೀಡುತ್ತಿರುವ ರಾಜ್ಯ ಸರ್ಕಾರ ಅಡಿಕೆ ನಿಷೇಧಿಸುವ ಉದ್ದೇಶ ಹೊಂದಿಲ್ಲ. ಚುನಾವಣೆಯ ಹಿನ್ನೆಲೆಯಲ್ಲಿ ಬೆಳೆಗಾರರನ್ನು ದಿಕ್ಕು ತಪ್ಪಿಸುವ ರಾಜಕೀಯ ದುರುದ್ದೇಶಕ್ಕೆ ರೈತರು ಕಿವಿಗೊಡಬಾರದು ಎಂದು ಜಿಲ್ಲಾ ಕಾಂಗ್ರೆಸ್ ಕಿಸಾನ್ ಸೆಲ್ ಅಧ್ಯಕ್ಷ ನಗರದ ಮಹಾದೇವಪ್ಪ ತಿಳಿಸಿದರು.
ಕೇಂದ್ರ ಹೊರದೇಶದ ಅಡಿಕೆಗೆ ಹೆಚ್ಚಿನ ತೆರಿಗೆ ವಿಧಿಸುವ ಮೂಲಕ ರಾಜ್ಯದಲ್ಲಿ ಅಡಿಕೆ ಬೆಳೆಗಾರರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದೆ. ಇದನ್ನು ಸಹಿಸಲಾಗದ ಸಿಗರೇಟ್, ಗುಟ್ಕಾ ಪರ ಲಾಭಿಗಳು ವಿರೋಧ ಪಕ್ಷದ ಜತೆ ಕೈಜೋಡಿಸಿ ಸರ್ಕಾರ ಅಡಿಕೆ ನಿಷೇಧಿಸುತ್ತಿದೆ ಎಂಬ ಹುನ್ನಾರ ರೂಪಿಸಿ ರೈತರನ್ನು ದಿಕ್ಕುತಪ್ಪಿಸುತ್ತಿವೆ ಎಂದರು.
ಅಡಕೆ ನಿಷೇಧ ಇಲ್ಲ: ಎಪಿಎಂಸಿ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅರುಣ್ ಮಾತನಾಡಿ, ಶುಭ ಕಾರ್ಯಕ್ಕೆ ಅಡಿಕೆ ಅನಿವಾರ್ಯವಾಗಿದ್ದು, ಸೀಮಿತವಾಗಿ ಎಲೆ ಅಡಿಕೆ ಉಪಯೋಗಿಸುವುದು ಆರೋಗ್ಯಕರ. ಅಡಿಕೆ ಹಾನಿಕಾರಕ ವಸ್ತು ಅಲ್ಲ ಎಂದು ಸಾಬೀತಾಗಿದೆ. ಆದ್ದರಿಂದ ಅಡಿಕೆಯನ್ನು ನಿಷೇಧಿಸುವ ಉದ್ದೇಶ ಸರ್ಕಾರ ಹೊಂದಿಲ್ಲ ಎಂದರು.
ಶಿಕಾರಿಪುರ ಕಾಂಗ್ರೆಸ್ ಕಿಸಾನ್ ಸೆಲ್ ಅಧ್ಯಕ್ಷ ಕೃಷ್ಣೋಜಿರಾವ್, ಶಿರಾಳಕೊಪ್ಪ ಅಧ್ಯಕ್ಷ ಉಮೇಶ್, ಹಿರಿಯ ಸದಸ್ಯ ಪಚ್ಚಿ ಗಿಡ್ಡಪ್ಪ ಇದ್ದರು.