ಮಲತಾಯಿ ತಮ್ಮ, ಮಕ್ಕಳಿಂದಲೇ ಅತ್ಯಾಚಾರ
ಶಿವಮೊಗ್ಗ: ಮೊದಲ ಹೆಂಡತಿಯ ಅಪ್ರಾಪ್ತೆ ಮಗಳ ಮೇಲೆ 2ನೇ ಹೆಂಡತಿಯ ತಮ್ಮ ಹಾಗೂ ಮಕ್ಕಳು ನಿರಂತರ ಅತ್ಯಾಚಾರ ನಡೆಸಿದ ಘಟನೆ ನಗರದ ಗಾಡಿಕೊಪ್ಪದಲ್ಲಿ ನಡೆದಿದ್ದು, ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಬಾಲಕಿಯ ತಂದೆ ನಾಗರಾಜ್ ಎಂಬವರು ದೂರು ನೀಡಿದ್ದಾರೆ. ಇವರ ಮೊದಲ ಪತ್ನಿ 4 ವರ್ಷದ ಹಿಂದೆ ಮೃತ ಪಟ್ಟಿದ್ದರು. ನಂತರ 2 ವರ್ಷಗಳ ಹಿಂದೆ ಇವರು ಇಬ್ಬರು ಮಕ್ಕಳಿರುವ ಗೀತಾ ಎಂಬ ವಿಧವೆಯನ್ನು ಮದುವೆಯಾಗಿದ್ದರು.
ಮೊದಲ ಪತ್ನಿಯ ಮಗಳು 14 ವರ್ಷ ವಯಸ್ಸಿನವರಾಗಿದ್ದು, ಇವರೊಬ್ಬರೇ ಮನೆಯಲ್ಲಿರುತ್ತಿದ್ದರು. ಈ ಬಾಲಕಿಯ ಮೇಲೆ ಕಳೆದ 6 ತಿಂಗಳಿಂದ 2ನೇ ಪತ್ನಿಯ ತಮ್ಮ ಸತೀಶ್ (45), ಮಕ್ಕಳಾದ ರಾಹುಲ್ (18) ಹಾಗೂ ಪ್ರಕಾಶ್ (15) ನಿರಂತರ ಅತ್ಯಾಚಾರ ನಡೆಸಿದ್ದಾರೆ. ನಾಗರಾಜ್ ಕೆಲಸ ನಿಮಿತ್ತ ಹಲವು ದಿನಗಳ ಕಾಲ ಮನೆಯಿಂದ ಹೊರಗಿರುತ್ತಿದ್ದರು. ಈ ಸಂದರ್ಭದ ದುರ್ಬಳಕೆ ಮಾಡಿಕೊಂಡ ಮೂವರು ಪರಸ್ಪರ ಗೊತ್ತಾಗದಂತೆ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ದೂರಲಾಗಿದೆ.
ಕೆಲ ದಿನಗಳ ಹಿಂದೆ ಅನುಮಾನಗೊಂಡು ಬಾಲಕಿಯನ್ನು ವೈದ್ಯರ ಬಳಿ ಕರೆದೊಯ್ದಾಗ ಗರ್ಭಿಣಿ ಆಗಿರುವುದು ಬೆಳಕಿಗೆ ಬಂದಿದೆ. ತಂದೆ ನಾಗರಾಜ್ ಅವರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ಮೂವರು ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಶೋಧ ನಡೆಸಿದ್ದಾರೆ.