ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮುಂದಿನ ಪೀಳಿಗೆ ನಿರೀಕ್ಷೆಗೆ ತಕ್ಕಂತೆ ಬದಲಾಗಿ

Lingaraj Badiger
Updated On : 28 Dec 2013, 10:52 am

ಕ.ಪ್ರ.ವಾರ್ತೆ, ಶಿವಮೊಗ್ಗ,  ಡಿ.27
ಬದಲಾಗುತ್ತಿರುವ ಸಮಾಜದ ವೇಗಕ್ಕೆ ತಕ್ಕಂತೆ ಗ್ರಂಥಪಾಲಕರೂ ಮೇಲ್ದರ್ಜೆಗೇರುವುದು ಅನಿವಾರ್ಯ. ಹೊಸತಾದ ಚಿಂತನೆ ಮತ್ತು ಕ್ರಿಯಾಶೀಲರಾಗುವ ಜೊತೆಗೆ ಬ್ಲಾಗ್, ವೆಬ್‌ಸೈಟ್ ರಚನೆ ಸೇರಿದಂತೆ ತಂತ್ರಜ್ಞಾನ ವಿಚಾರದಲ್ಲೂ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಇದು ಮುಂದಿನ ಪೀಳಿಗೆಯ ನಿರೀಕ್ಷೆ ಆಗಿರುತ್ತದೆ ಎಂದು ಡಾ. ಆರ್.ಬಿ. ಗದ್ದಿಗಿಮಠ ಹೇಳಿದರು.
ಇಲ್ಲಿನ ಸಹ್ಯಾದ್ರಿ ಕಲಾ ಕಾಲೇಜು, ಕುವೆಂಪು ವಿವಿ ಕಾಲೇಜು ಗ್ರಂಥಪಾಲಕರ ಸಂಘ ಹಾಗೂ ರಾಜ್ಯ ಕಾಲೇಜು ಗ್ರಂಥಪಾಲಕರ ಸಂಘದ ಸಹಯೋಗದೊಂದಿಗೆ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮ್ಮೇಳನದಲ್ಲಿ 'ಗ್ರಂಥಾಲಯ ಸೇವೆಗಳಲ್ಲಿ ಮಾಹಿತಿ ತಂತ್ರಜ್ಞಾನದ ಪರಿಣಾಮಗಳು' ವಿಷಯದ ಕುರಿತ ರಾಷ್ಟ್ರೀಯ ಸಮ್ಮೇಳನದ ದಿಕ್ಸೂಚಿ ಭಾಷಣ ಮಾಡಿ ಅವರು ಮಾತನಾಡಿದರು.
ಇಂದಿನ ವಿದ್ಯಾರ್ಥಿ ಅಥವಾ ಗ್ರಂಥಾಲಯಕ್ಕೆ ಬರುವವರ ನಿರೀಕ್ಷೆ ಹೆಚ್ಚಾಗುತ್ತಿದೆ. ಅವರ ಅಪೇಕ್ಷೆಯನ್ನು ಪೂರೈಸದೇ ಹೋದಲ್ಲಿ ನಾವು ಹಿಂದುಳಿಯುತ್ತೇವೆ. ಅವರಿಗೆ ಅತಿ ವೇಗದ ಸೇವೆ ನೀಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆಯನ್ನು ಹೆಚ್ಚು ಮಾಡಿಕೊಳ್ಳಬೇಕಾಗುತ್ತದೆ ಎಂದರು.
ಇಂದಿನ ಕಾಲಮಾನಕ್ಕೆ ತಕ್ಕಂತೆ ಗ್ರಂಥಾಲಯಗಳೂ ಬದಲಾಗುತ್ತಾ ಹೋಗಬೇಕಾಗುತ್ತದೆ. ಮಾಹಿತಿ ನಿರ್ವಹಣೆ, ತಂತ್ರಜ್ಞಾನ, ಡಿಜಿಟಲೈಸೇಶನ್ ಅತ್ಯವಶ್ಯಕ. ಅದಕ್ಕಿಂತ ಮುಖ್ಯ ಈ ವಿಚಾರದಲ್ಲಿ ಗ್ರಂಥಪಾಲಕರು ನಿರ್ವಹಣೆ ಮತ್ತು ಕಾರ್ಯಾಚರಣೆ ತಿಳಿದಿರಬೇಕಾಗುತ್ತದೆ. ಸಾಮಾಜಿಕ ತಾಣಗಳನ್ನು ಹೆಚ್ಚು ಹೆಚ್ಚು ಬಳಸುವ ಬಗ್ಗೆ ಕಲಿಯಬೇಕಾಗುತ್ತದೆ. ಫೇಸ್‌ಬುಕ್, ಟ್ವೀಟರ್, ಯೂಟ್ಯೂಬ್ ಸೇರಿದಂತೆ ವಿವಿಧ ತಾಣಗಳನ್ನು ಅಸ್ತ್ರವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕುವೆಂಪು ವಿಶ್ವವಿದ್ಯಾಲಯ ಕುಲಸಚಿವೆ ಮಲ್ಲಿಕಾ ಘಂಟಿ ಮಾತನಾಡಿ, ಇಡೀ ಜಗತ್ತಿಗೆ ನಾಗರಿಕತೆಯನ್ನು ಪಸರಿಸುವ ಹಿನ್ನೆಲೆಯಲ್ಲಿ ಪ್ರಾಚೀನ ಗ್ರಂಥಗಳನ್ನು ಕಾಯ್ದಿಟ್ಟ ಕೀರ್ತಿ ಭಾರತದ್ದು. ಪ್ರಾಚೀನ ಭಾರತ ವಿಜ್ಞಾನ ಹಾಗೂ ಜ್ಞಾನ ಸಹಿತ ಭಾರತವಾಗಿತ್ತು ಎಂದು ತಿಳಿಸಿದರು.
ಗ್ರಂಥಾಲಯ ಕಲ್ಪನೆ ನಮಗೆ ಹೊಸದೇನಲ್ಲ. ಪ್ರಾಚೀನ ಭಾರತದಲ್ಲಿ ನಳಂದ ಹಾಗೂ ತಕ್ಷಶಿಲಾ ವಿಶ್ವವಿದ್ಯಾಲಯಗಳಲ್ಲಿದ್ದ ಬೃಹತ್ ಗ್ರಂಥಾಲಯಗಳು ಇಡೀ ವಿಶ್ವಕ್ಕೆ ಜ್ಞಾನದ ಪ್ರಸಾರ ಮಾಡಿವೆ. ಶಿಲಾಶಾಸನಗಳು, ತಾಳೆ ಗರಿಗಳು ಹಾಗೂ ಇತ್ತೀಚಿನ ಇ-ಲೈಬ್ರರಿ ಪರಿಕಲ್ಪನೆಗಳು ನಮ್ಮ ಹಿಂದಿನ ಗ್ರಂಥಾಲಯದ ಮುಂದುವರಿದ ಸ್ವರೂಪವೇ ಆಗಿದೆ ಎಂದರು.
ಸಮಾರಂಭದಲ್ಲಿ ಸಮ್ಮೇಳನದ ನಿರ್ದೇಶಕ ಸಂಗಮ್, ಸಂಘಟನಾ ಕಾರ್ಯದರ್ಶಿ ಡಾ. ಬಿ.ಯು. ಕನ್ನಪ್ಪನವರ, ಕಾರ್ಯದರ್ಶಿ ಶ್ಯಾಮಸುಂದರ್, ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯದೇವಪ್ಪ, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಶಕುಂತಲಾ, ಗುಲ್ಬರ್ಗ ವಿವಿ ಗ್ರಂಥಪಾಲಕ ಡಾ.ರವಿ ಗದ್ದಿಗೆಮಠ ಇದ್ದರು.

2 ಗಂಟೆ ಕತ್ತಲಲ್ಲೇ ಕಳೆದರು...
ಇದು ರಾಷ್ಟ್ರೀಯ ಸಮ್ಮೇಳನ. ಹೀಗಾಗಿ ಬೇರೆ ಊರು, ರಾಜ್ಯದಿಂದಲೂ ಸಮ್ಮೇಳನಕ್ಕೆ ಪ್ರತಿನಿಧಿಗಳು ಆಗಮಿಸಿದ್ದರು. ಆದರೆ, ಗಣ್ಯರಾದಿಯಾಗಿ ಪ್ರತಿನಿಧಿಗಳೆಲ್ಲರೂ 2 ಗಂಟೆ ಕತ್ತಲೆ ಕೂಪದಲ್ಲಿ ಕಳೆದ ಪ್ರಸಂಗ ನಡೆಯಿತು.
ಸುವರ್ಣ ಸಂಸ್ಕೃತಿ ಭವನದಲ್ಲಿ ಬೆಳಗ್ಗೆಯಿಂದಲೇ ವಿದ್ಯುತ್ ಇರಲಿಲ್ಲ. ಈ ಪ್ರದೇಶದಲ್ಲಿ ದುರಸ್ತಿ ಕಾರಣದಿಂದ ವಿದ್ಯುತ್ ಕಡಿತ ಮಾಡಲಾಗಿತ್ತು. ನಗರದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡ ಸುವರ್ಣ ಸಾಂಸ್ಕೃತಿಕ ಸಭಾಂಗಣಕ್ಕೆ ಪರ್ಯಾಯ ವಿದ್ಯುತ್ ವ್ಯವಸ್ಥೆ ಇಲ್ಲ ಎಂಬ ಕೊರತೆ ಕಂಡಿದ್ದೇ ಆಗ. ಸಮ್ಮೇಳನವನ್ನು ಕಾಗೋಡು ತಿಮ್ಮಪ್ಪ ಉದ್ಘಾಟಿಸಬೇಕಿತ್ತು. ಅವರಿಗಾಗಿ ಸ್ವಲ್ಪ ಹೊತ್ತು ಕಾದ ಸಂಘಟಿಕರಿಗೆ ನಿರಾಸೆ ಕಾದಿತ್ತು. ಕಾಗೋಡು ಅನಾರೋಗ್ಯ ಸಮಸ್ಯೆಯಿಂದ ಕಾರ್ಯಕ್ರಮಕ್ಕೆ ಬರುತ್ತಿಲ್ಲ ಎಂಬುದು ಸಂಘಟಕರಿಗೆ ತಿಳಿಯಿತು. ಇನ್ನೇನು ಕಾರ್ಯಕ್ರಮ ಆರಂಭಿಸಬೇಕೆಂದು ಆಯೋಜಕರು ಸಭಾಂಗಣದೊಳಗೆ ತೆರಳಿದರೆ ಅಲ್ಲಿ ಕತ್ತಲು ಕವಿದಿತ್ತು. ವಿದ್ಯುತ್ ವ್ಯತ್ಯಯವಾದ ಕಾರಣ ಜನರೇಟರ್ ಚಾಲೂ ಮಾಡುವಂತೆ ಆಯೋಜಕರು ಕೇಳಿಕೊಂಡರೆ ಅಲ್ಲಿದ್ದ ಸಿಬ್ಬಂದಿ ಜನರೇಟರ್ ಇಲ್ಲ ಎಂದು ಉತ್ತರಿಸಿದರು. ತರಿಸಿಕೊಡುವುದಾಗಿಯೂ ಹೇಳಿದರು. ಗಂಟೆ ಉರುಳುತ್ತಾ ಹೋಯಿತು, ಪರ್ಯಾಯ ವ್ಯವಸ್ಥೆ ಆಗಲೇ ಇಲ್ಲ. ಅಂತೂ ಆಯೋಜಕರು ಬಾಡಿಗೆಗೆ ಜನರೇಟರ್ ತಂದು ಕಾರ್ಯಕ್ರಮ ಆರಂಭಿಸುವಾಗ ಎರಡು ತಾಸು ತಡವಾಯಿತು.

ಕನ್ನಡ ಕಡಗಣನೆಗೆ ಘಂಟಿ ಅಸಮಾಧಾನ
ಸಮ್ಮೇಳನದ ವೇದಿಕೆಯಲ್ಲಿ ಅಳವಡಿಸಿದ್ದ ಬ್ಯಾನರ್‌ನಲ್ಲಿ ಕನ್ನಡವನ್ನು ಕಡೆಗಣಿಸಿದ್ದರ ಬಗ್ಗೆ ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವೆ ಮಲ್ಲಿಕಾ ಘಂಟಿ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು. ಯುಜಿಸಿಯಿಂದ ಧನಸಹಾಯ ಪಡೆದು ಕಾರ್ಯಕ್ರಮ ಮಾಡುವಾಗ ಅನಿವಾರ್ಯವಾಗಿ ಆಂಗ್ಲ ಭಾಷೆಯ ಬ್ಯಾನರ್ ಹಾಕಿಕೊಳ್ಳಬೇಕು. ಆದರೆ, ಕನ್ನಡಕ್ಕೆ ಸ್ಥಾನವನ್ನೇ ನೀಡದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಕನ್ನಡಕ್ಕೆ ರಾಜ ಮರ್ಯಾದೆ ಸಿಗಲೇಬೇಕು. ರಾಜ್ಯದ ಯಾವ ಮೂಲೆಯಲ್ಲಿ ಕಾರ್ಯಕ್ರಮ ನಡೆದರೂ ಕನ್ನಡಕ್ಕೆ ಸೂಕ್ತ ಮನ್ನಣೆ ಸಿಗಬೇಕು. ಇಲ್ಲಿ ಕನ್ನಡ ಅವಗಣನೆ ಬಗ್ಗೆ ಸಣ್ಣ ಅಸಮಾಧಾನ ಮತ್ತು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂಬ ದೊಡ್ಡ ವಿನಂತಿ ನನ್ನದು ಎಂದು ಮಾತು ಮುಗಿಸಿದರು.

ಗ್ರಂಥಪಾಲಕರಿಗೆ ಸನ್ಮಾನ
ಶಿವಮೊಗ್ಗ: ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಗ್ರಂಥಾಲಯಗಳ ಅಭಿವೃದ್ಧಿಗೆ ಕಾರಣೀಭೂತರಾದ ಗ್ರಂಥಪಾಲಕರನ್ನು ಗ್ರಂಥಾಲಯ ಸೇವೆಗಳಲ್ಲಿ ಮಾಹಿತಿ ತಂತ್ರಜ್ಞಾನದ ಪರಿಣಾಮಗಳು ಎಂಬ ವಿಷಯದ ಕುರಿತಾದ ರಾಷ್ಟ್ರೀಯ ಸಮ್ಮೇಳನದಲ್ಲಿ ಆತ್ಮೀಯವಾಗಿ ಗೌರವಿಸಲಾಯಿತು.
ಧಾರವಾಡ, ಬೆಂಗಳೂರು, ಬೆಳಗಾವಿ ವಿವಿಗಳಲ್ಲಿ ಕಾರ್ಯನಿರ್ವಹಿಸಿದ ಅದರಲ್ಲೂ, ಬೆಂಗಳೂರು ವಿವಿಯ ಗ್ರಂಥಾಲಯದಲ್ಲಿ ಆಮೂಲಾಗ್ರ ಬದಲಾವಣೆಗೆ ಕಾರಣರಾದ ಪ್ರೊ. ಪಿ.ವಿ. ಕೊಣ್ಣೂರ್ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಧಾರವಾಡ ವಿವಿಯಲ್ಲಿ ಕಾರ್ಯನಿರ್ವಹಿಸಿದ್ದ ಎಚ್.ಎಲ್. ಸಂಗಮ, ಕಾರಜೋಳ ಮಠದ ಅವರನ್ನು ಗೌರವಿಸಲಾಯಿತು.
ಬಿರಾದಾರ್ ಅವರು ಸನ್ಮಾನ ಪತ್ರ ಓದಿದರೆ, ಕುವೆಂಪು ವಿವಿ ಕುಲಸಚಿವ ಮಲ್ಲಿಕಾ ಘಂಟಿ, ಎಚ್. ಸಂಗಮ, ಶ್ಯಾಮಸುಂದರ್, ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲರಾದ ಶಕುಂತಲಾ, ರವಿ ಗದ್ದಿಗಿಮಠ ಮತ್ತಿತರರು ಸನ್ಮಾನ ಕಾರ್ಯಕ್ರಮ ನೆರವೇರಿಸಿಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement