ಲೋಕಾ ಬಲೆಗೆ ಗ್ರಾಮ ಲೆಕ್ಕಾಧಿಕಾರಿ
ಸೊರಬ: ತಾಲೂಕಿನ ಹಳೇಸೊರಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಓಟೂರು ವೃತ್ತದಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಜಿ.ಬಿ. ಮೂರ್ತಿ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ.
ಬೆಳೆ ಪರಿಹಾರದ 2400 ಚೆಕ್ ನೀಡಲು 1200 ಲಂಚ ಕೇಳಿದ್ದರು ಎಂದು ತಾಲೂಕಿನ ಕುದುರೆಗಣಿ ಗ್ರಾಮದ ಹೇಮಂತ್ಕುಮಾರ್ ಎಂಬ ರೈತ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ರೈತ ನೀಡಿದ ದೂರಿನನ್ವಯ ಪಟ್ಟಣದ ನಾಮದೇವಗಲ್ಲಿಯಲ್ಲಿರುವ ಗ್ರಾಮ ಲೆಕ್ಕಾಧಿಕಾರಿ ಜಿ.ಬಿ. ಮೂರ್ತಿ ಅವರ ಖಾಸಗಿ ಕಚೇರಿಗೆ ಶುಕ್ರವಾರ ಬೆಳಿಗ್ಗೆ 11.30ರ ಸುಮಾರಿಗೆ ಬಂದ ಶಿವಮೊಗ್ಗ ಲೋಕಾಯುಕ್ತ ಇನ್ಸ್ಪೆಕ್ಟರ್ ಕೆ.ಸಿ. ಪುರಷೋತ್ತಮ ತಂಡ ರೈತನಿಂದ ಗ್ರಾಮ ಲೆಕ್ಕಿಗ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿ, ಶಿವಮೊಗ್ಗ ನ್ಯಾಯಾಲಯದ ವಶಕ್ಕೆ ಒಪ್ಪಿಸಿದ್ದಾರೆ.
ದಾಳಿ ವೇಳೆ ಸಿಬ್ಬಂದಿ ರಮೇಶ್, ಸಂಜೀವ್, ಮಹಾಂತೇಶ್, ಸುರೇಶ್ ಮತ್ತಿತರರು ಇದ್ದರು.