ಸಮಾರೋಪಕ್ಕೆ ಸಿಎಂ ಕರೆಸಬೇಕು
ಸಾಗರ: ಮುಖ್ಯಮಂತ್ರಿಗಳನ್ನು ಸಾಹಿತ್ಯ ಸಮ್ಮೇಳನದ ಉದ್ಘಾಟನೆಗೆ ಕರೆಸುವ ಬದಲು ಸಮಾರೋಪಕ್ಕೆ ಕರೆಯುವಂತಾಗಬೇಕು ಎಂದು ಜ್ಞಾನಕನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಹೇಳಿದರು.
80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಧ್ಯಕ್ಷರಾಗಿ ನಿಯೋಜಿತರಾಗಿರುವ ಡಾ.ನಾ.ಡಿಸೋಜ ದಂಪತಿಗಳನ್ನು ಅವರ ಸ್ವಗೃಹದಲ್ಲಿ ಗುರುವಾರ ಅಭಿನಂದಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಸಮ್ಮೇಳನದ ಸಮಾರೋಪಕ್ಕೆ ಬಂದರೆ ಸಮ್ಮೇಳನದಲ್ಲಿ ತೆಗೆದುಕೊಳ್ಳುವ ನಿರ್ಣಯ, ಕನ್ನಡಿಗರು ಹಾಗೂ ಕನ್ನಡದ ಕಷ್ಟವನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸಮ್ಮೇಳನ ಜಾತ್ರೆ ಅಲ್ಲ: ಸಾಹಿತ್ಯ ಸಮ್ಮೇಳನ ಜಾತ್ರೆ ಎನ್ನುವ ಅಭಿಪ್ರಾಯ ಸರಿಯಲ್ಲ. ಪ್ರತಿ ಸಮ್ಮೇಳನದಲ್ಲಿ 15 ರಿಂದ 20 ಕೋಟಿ ರೂ. ಪುಸ್ತಕ ಮಾರಾಟವಾಗುತ್ತಿದೆ. ಪುಸ್ತಕ ಮಾರಾಟ ವ್ಯವಸ್ಥೆಯನ್ನು ಇನ್ನಷ್ಟು ಅಚ್ಚುಕಟ್ಟು ಮಾಡಿದರೆ ಪುಸ್ತಕ ಸಂಸ್ಕೃತಿ ಇನ್ನಷ್ಟು ಬೆಳೆಸಲು ಸಾಧ್ಯವಾಗುತ್ತದೆ ಎಂದರಲ್ಲದೆ ಸಮ್ಮೇಳನದಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ, ಕನ್ನಡ ಭಾಷೆಗೆ ಸಂಬಂಧಿಸಿದಂತೆ ಗಂಭೀರ ಚರ್ಚೆಗಳು ನಡೆಯುತ್ತವೆ ಎಂದರು.
ಇತ್ತೀಚಿನ ವರ್ಷಗಳಲ್ಲಿ ಬಾಯಿಪಾಠ ಮಾಡಿಕೊಂಡು ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆಯುವ ಮಕ್ಕಳನ್ನು ನೋಡಿದರೆ ನನಗೆ ಭಯವಾಗುತ್ತದೆ. ಭವಿಷ್ಯದ ಪೀಳಿಗೆಯನ್ನು ನಾವು ಯಾವ ರೀತಿ ಬೆಳೆಸುತ್ತಿದ್ದೇವೆ ಎನ್ನುವ ಆತಂಕ ಕಾಡುತ್ತಿದೆ. ನಮ್ಮ ಪ್ರಾಣಿ, ಪಕ್ಷಿ, ಹಣ್ಣು, ನದಿ ಕೊನೆಗೆ ತಂದೆತಾಯಿ ಹೆಸರನ್ನು ಸಹ ಮಕ್ಕಳು ಇಂಗ್ಲೀಷಿನಲ್ಲಿಯೆ ಉಚ್ಚಾರ ಮಾಡುತ್ತಿದ್ದಾರೆ. ಮಾತೃಭಾಷೆ ಹೊರತುಪಡಿಸಿ ಇತರೆ ಭಾಷೆಯನ್ನು ಕಲಿ ಎಂದು ಮಕ್ಕಳ ಮೇಲೆ ಹೇರುವ ಸಂಸ್ಕೃತಿ ಮಕ್ಕಳ ಭಾವ ಪ್ರಪಂಚವನ್ನು ನಾಶ ಮಾಡುತ್ತಿದೆ ಎಂದು ಹೇಳಿದರು.
ಸಾಹಿತಿ ಡಾ.ಬಸವರಾಜ ನೆಲ್ಲಿಸರ, ಲೇಖಕ ವಿಲಿಯಂ, ತಾಲ್ಲೂಕು ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ ಇನ್ನಿತರರು ಹಾಜರಿದ್ದರು.