ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಂತಾರಾಜ್ಯ ವಿಪ್ರ ಸೌಹಾರ್ದ ಮಿಲನ

Vishwanath S
Updated On : 29 Dec 2013, 12:25 pm

ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಡಿ.28
ಮಲೆನಾಡಿನ ಗ್ರಾಮೀಣ ಭಾಗದ ವಿಪ್ರ ವೈವಾಹಿಕ ಸಮಸ್ಯೆ ಪರಿಹಾರಕ್ಕಾಗಿ ಶಿವಮೊಗ್ಗ  ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ನಡೆದ ಪ್ರಯತ್ನ ಕೊನೆಗೂ ಫಲಕೊಡುವ ಹಂತಕ್ಕೆ ಬಂದಿದೆ.
ಮಲೆನಾಡಿನ ಗ್ರಾಮೀಣ ಭಾಗದ ವೈವಾಹಿಕ ಅಪೇಕ್ಷೆಯ ವಿಪ್ರ ಯುವಕರನ್ನು ಕಾಣಲು ಬಂದ ಉತ್ತರ ಪ್ರದೇಶದ ವಿಪ್ರ ಕನ್ಯಾ ಪಿತೃಗಳು ಖುಷಿಯಲ್ಲಿದ್ದು, ತಮ್ಮ ಮಕ್ಕಳನ್ನು ಧಾರೆ ಎರೆದುಕೊಡಲು ಒಪ್ಪಿಗೆ ಸೂಚಿಸಿದ್ದಾರೆ. ಹಾಗೆಯೇ ಮುಂದಿನ ವರ್ಷದಲ್ಲಿ ಕನಿಷ್ಠ 100ರಿಂದ 150 ಸಂಖ್ಯೆಯಲ್ಲಿ ವೈವಾಹಿಕ ಸಂಬಂಧ ಬೆಳೆಸಲು ಉತ್ತರ ಪ್ರದೇಶದ ವಿಪ್ರ ಸಂಘಟನೆಯ ಪ್ರಮುಖರು ನಿಶ್ಚಯಿಸಿದ್ದಾರೆ.
ವರ ಪರೀಕ್ಷೆ: ಕಳೆದ 2 ದಿನಗಳಿಂದ ಜಿಲ್ಲೆಯ ವಿವಿಧ ಗ್ರಾಮೀಣ ಪ್ರದೇಶಗಳಿಗೆ ತೆರಳಿ ವರ ಪರೀಕ್ಷೆ ನಡೆಸಿದ್ದ ಉತ್ತರ ಪ್ರದೇಶ ವಿಪ್ರ ಕನ್ಯಾ ಪೋಷಕರು ಹಾಗೂ ಅಲ್ಲಿನ ವಿಪ್ರ ಸಂಘಟನೆ ಮುಖಂಡರೊಂದಿಗೆ ಶನಿವಾರ ಸಂಜೆ ಗಾಯತ್ರಿ ದೇವಸ್ಥಾನದ ಸಭಾಂಗಣದಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ವಿಪ್ರ ಮುಖಂಡ ಸಾವನಿ ಪ್ರಸಾದ್ ಶುಕ್ಲಾ, ಇಲ್ಲಿನ ಆಚಾರ ವಿಚಾರ, ಸಂಸ್ಕೃತಿ, ಆಹಾರ ಪದ್ಧತಿ ಬಗ್ಗೆ ತಿಳಿದುಕೊಂಡೆವು. ಉತ್ತಮ ನಡವಳಿಕೆ ಕಂಡೆವು. ನಾವು ಸಂಬಂಧ ಬೆಳೆಸಲು ಸಿದ್ಧ ಎಂದು ಘೋಷಿಸಿದರು. ಈ ಪ್ರಯತ್ನ ಮುಂದಿನ ದಿನಗಳಲ್ಲಿ ಎರಡೂ ಕಡೆಯ ಸಮಸ್ಯೆಯನ್ನು ಕಡಿಮೆ ಮಾಡಲಿದೆ ಎಂದೂ ಸಹ ಅಭಿಪ್ರಾಯಪಟ್ಟರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಾಲಿನಿಯವರು ಮಾತನಾಡಿ, ವಿಪ್ರ ವೈವಾಹಿಕ ಸಮಸ್ಯೆ ಜ್ವಲಂತವಾಗಿದೆ. ಇಂತಹ ಸಂದರ್ಭದಲ್ಲಿ ಶಿವಮೊಗ್ಗ ವಿಪ್ರ ಸಂಘಟನೆಗಳ ಪ್ರಯತ್ನ ಮೆಚ್ಚುವಂತಹದ್ದು ಎಂದರು.
ಉತ್ತರ ಪ್ರದೇಶದಲ್ಲಿ ವರದಕ್ಷಿಣೆ ಸಮಸ್ಯೆ ತೀವ್ರವಾಗಿದೆ. ಇದರಿಂದ ಅಲ್ಲಿನ ಆರ್ಥಿಕವಾಗಿ ಹಿಂದುಳಿದಂತಹ ವಿಪ್ರ ಕುಟುಂಬಗಳು ನಲುಗುತ್ತಿವೆ. ಅಲ್ಲಿನ ಪರಿಸ್ಥಿತಿಯನ್ನು ತೀರಾ ಹತ್ತಿರದಿಂದ ಕಂಡಿದ್ದೇನೆ ಎಂದು ವಿವರಿಸಿದರು.
ಒಂದಿಷ್ಟು ಯಶಸ್ಸು: ಪ್ರಾಸ್ತಾವಿಕವಾಗಿ ಮಾತನಾಡಿದ ಅಖಿಲ ಬ್ರಾಹ್ಮಣ ಮಹಾಸಭಾ ಮುಖಂಡ ಮ.ಸ.ನಂಜುಂಡಸ್ವಾಮಿ, 2012ರಲ್ಲಿ ನಡೆದ ವಿಪ್ರ ಚಿಂತನಾ ಸಮಾವೇಶದಲ್ಲಿ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘಕ್ಕೆ ಹೊಣೆಗಾರಿಕೆಯಂತೆ ಉತ್ತರ ಭಾರತದೊಂದಿಗಿನ ವೈವಾಹಿಕ ಸಂಬಂಧ ಏರ್ಪಡಿಸುವ ಪ್ರಯತ್ನದಲ್ಲಿ ಒಂದಷ್ಟು ಯಶಸ್ಸು ಸಾಧಿಸಿದ್ದೇವೆ.
ನಮ್ಮೂರ ಸಮಸ್ಯೆಗೆ ಪರಿಹಾರ ನೀಡಲು ಅಲ್ಲಿನ ಬ್ರಾಹ್ಮಣ ಸಂಘಟನೆಗಳು, ವಿಪ್ರ ಕನ್ಯೆಯ ಪಿತೃಗಳು ಇಲ್ಲಿಗೆ ಬಂದಿದ್ದಾರೆ ಎಂದರು.
ವಿಪ್ರ ಸಮಾಜ ಎದುರಿಸುತ್ತಿರುವ ವೈವಾಹಿಕ ಸಮಸ್ಯೆಗೆ ನಾವು ಪೂರ್ಣ ಪರಿಹಾರ ಕೊಡುತ್ತೇವೆಂಬ ಹುಚ್ಚು ಭ್ರಮೆ ನಮಗಿಲ್ಲ. ಆದರೆ, ಸಣ್ಣದಾದ ಪರಿಹಾರ ಕೊಡಿಸುವ ದಿಕ್ಕಿನತ್ತ ಧನಾತ್ಮಕ ಚಿಂತನೆಯೂಂದಿಗೆ ಹೆಜ್ಜೆ ಇಟ್ಟಿದ್ದೇವೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವೆಂದರು.
ಸಂಬಂಧಕ್ಕೆ ಉತ್ಸುಕತೆ: ಇಲ್ಲಿನ ಆಚಾರ ವಿಚಾರ ತಿಳಿದುಕೊಂಡಿರುವ ಅಲ್ಲಿನ ಮುಖಂಡರು, ಕನ್ಯಾ ಪಿತೃಗಳು ಸಂಬಂಧ ಬೆಳೆಸಲು ಉತ್ಸುಕರಾಗಿದ್ದಾರೆ. ಆದರೆ, ಮೂರು ಷರತ್ತುಗಳನ್ನು ಪಾಲಿಸಬೇಕಾಗುತ್ತದೆ. ವರನಾದವರು ಆರ್ಥಿಕವಾಗಿ ಸದೃಢನಾಗಿರಬೇಕು, ಸನ್ನಡತೆ ಹೊಂದಿರುವ ಜೊತೆಗೆ ವರ್ಷದಲ್ಲಿ ಕನಿಷ್ಠ ಒಮ್ಮೆಯಾದರೂ ಪತ್ನಿಯಾದವಳನ್ನು ತವರಿಗೆ (ಉತ್ತರ ಪ್ರದೇಶಕ್ಕೆ) ಕಳುಹಿಸಿಕೊಡಬೇಕು, ಕೊಂಚವಾದರೂ ಹಿಂದಿ ಬರಬೇಕು- ಕಲಿಯಬೇಕು, ವಧು-ವರನ ಅಂತರ 5 ವರ್ಷದೊಳಗಿರಬೇಕಾಗುತ್ತದೆ ಎಂದರು.
ವಿಚಾರ ವಿನಿಮಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಇತಿಹಾಸದ ಸಮಸ್ಯೆ ಇದಾಗಿದ್ದು, ಇದರ ಪರಿಹಾರಕ್ಕಾಗಿ ನಡೆಯುತ್ತಿರುವ ಪ್ರಯತ್ನ ಶ್ಲಾಘನೀಯವೆಂದರು. ಇಲ್ಲಿನ ಪರಿಸ್ಥಿತಿ ವೀಕ್ಷಣೆಗೆ ಬಂದವರು ಮಾನಸಿಕವಾಗಿ ಸಂಬಂಧ ಬೆಸೆಯಲು ಮುಂದಾಗಿದ್ದಾರೆಂದರೆ ಅದು ಸಂಘಟನೆಯ ಯಶಸ್ಸು ಎಂದರು. ರವಿಶಂಕರ್, ಜಿ.ಎಸ್.ಅನಂತ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement