ಜ.18, 19ಕ್ಕೆ ಹೋಬಳಿ ಸಾಹಿತ್ಯ ಸಮ್ಮೇಳನ ಮುಂದೂಡಿಕೆ
ಭದ್ರಾವತಿ: ಡಿ.28, ಮತ್ತು ಡಿ.29ರಂದು ಭದ್ರಾವತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯೂರು ಹೋಬಳಿ ಘಟಕದ ಆಶ್ರಯದಲ್ಲಿ ಹಿರಿಯೂರು ಗ್ರಾಮದಲ್ಲಿ ನಡೆಯಬೇಕಿದ್ದ ದ್ವಿತೀಯ ಹೋಬಳಿ ಸಾಹಿತ್ಯ ಸಮ್ಮೇಳನವನ್ನು ಜ.18ರ ಶನಿವಾರ ಮತ್ತು ಜ.19ರ ಭಾನುವಾರಕ್ಕೆ ಮುಂದೂಡಲಾಗಿದೆ ಎಂದು ತಾಲೂಕು ಕ.ಸಾ.ಪ. ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕುವೆಂಪು ಅವರ ಜನ್ಮದಿನೋತ್ಸವ ಮತ್ತು ಸ್ಥಳೀಯ ಜಾತ್ರಾ ಮಹೋತ್ಸವದ ಕಾರಣದಿಂದ ಸಮ್ಮೇಳನವನ್ನು ಮುಂದೂಡಲಾಗಿದೆ ಎಂದರು.
ತಮ್ಮ ಅಧ್ಯಕ್ಷತೆಯಲ್ಲಿ ತಾಲೂಕು ಕ.ಸಾ.ಪ. ಸಾಹಿತ್ಯದ ನಡಿಗೆ ಹಳ್ಳಿಗಳ ಕಡೆಗೆ ಎಂಬ ಧ್ಯೇಯದೊಂದಿಗೆ ಹೋಬಳಿ ಮಟ್ಟದ ಘಟಕಗಳನ್ನು ಸ್ಥಾಪಿಸಿದ್ದು 8 ಶಾಲೆಯಂಗಳಕೆ ಸಾಹಿತ್ಯ, 4 ಮಹಿಳಾ ಘಟಕದ ಕಾರ್ಯಕ್ರಮಗಳು, 19 ಮನೆ-ಮನಗಳಿಗೆ ಸಾಹಿತ್ಯ ಕಾರ್ಯಕ್ರಮಗಳು, ಕನ್ನಡಾಂಬೆಗೆ ಗೀತಚೇತನ ಹಾಗೂ ನಾ.ಡಿಸೋಜ ಅವರಿಗೆ ಅಭಿನಂದನಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದೆ. ಒಂದು ಹೋಬಳಿಮಟ್ಟದ ಸಮ್ಮೇಳನ ನಡೆಸಿದ್ದು, ಈಗ ದ್ವಿತೀಯ ಹೋಬಳಿ ಸಾಹಿತ್ಯ ಸಮ್ಮೇಳನವನ್ನು ಹಿರಿಯೂರು ಗ್ರಾಮದಲ್ಲಿ ಹಮ್ಮಿಕೊಂಡಿದೆ ಎಂದು ಕೋ. ತಿಪ್ಪೇಸ್ವಾಮಿ ತಿಳಿಸಿದರು.