ನೋವು, ಕಷ್ಟ ಕುರಿತ ಕವನಕ್ಕೆ ಆದ್ಯತೆ ನೀಡಿ
ಕ.ಪ್ರ.ವಾರ್ತೆ ಟಿ ಸಾಗರ ಟಿ ಡಿ.28
ಈ ನೆಲದ ಬಗ್ಗೆ, ನೆಲದ ಜನಸಮುದಾಯದ ನೋವು, ಕಷ್ಟ ಕೋಟಲೆಗಳ ಬಗ್ಗೆ ಬರೆಯದ ಕವಿಗಳು ಕೇವಲ ಶೋಕೇಸಿನಲ್ಲಿ ಅಲಂಕಾರಕ್ಕೆ ಇಟ್ಟಿರುವ ವಸ್ತಗಳಾಗುತ್ತಾರೆ ಎಂದು ಸಾಹಿತಿ ವಿಷ್ಣುನಾಯ್ಕರ್ ಹೇಳಿದರು.
ಇಲ್ಲಿನ ಚಿತ್ರಸಿರಿ ಟ್ರಸ್ಟ್ ಶನಿವಾರ ಸಂಜೆ ಏರ್ಪಡಿಸಿದ್ದ ಸಿರಿವಂತೆ ಚಂದ್ರಶೇಖರ್ ಬರೆದಿರುವ ಬತ್ತದ ಸಿರಿ ಕವನಸಂಕಲನ ಬಿಡುಗಡೆ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಸ್ವಹಿತಾಸಕ್ತಿ ಲೆಕ್ಕಾಚಾರ: ಪ್ರಸ್ತುತ ನಮ್ಮ ನಡುವೆ ಆಸ್ಥಾನ ಕವಿಗಳ ಹಾಗೆ ಬರೆಯುವ ಸಾಕಷ್ಟು ಬರಹಗಾರರಿದ್ದಾರೆ. ಅವರೆಲ್ಲ ಆಕಾಶದಲ್ಲಿ ವಿಹರಿಸಲು ಸಿದ್ಧರಿದ್ದಾರೆಯೇ ಹೊರತು ನೆಲ ನೋಡಲು ಸಿದ್ಧರಿಲ್ಲ. ಯಾರನ್ನೋ ಮೆಚ್ಚಿಸಲು, ಕೇವಲ ಸ್ವಹಿತಾಸಕ್ತಿಗಾಗಿ ಲೆಕ್ಕಾಚಾರ ಮಾಡಿ ಬರೆಯುವ ಕವಿಗಳ ಕುಲ ಅಳಿಯಬೇಕು ಎಂದು ಅಭಿಪ್ರಾಯಪಟ್ಟರು.
ಕೌರವನಿಗೆ ಸಿಂಹಾಸನ ಬಿಟ್ಟು ನೆಲಕ್ಕೆ ಬಂದಾಗ ತಾನು ಹಿಂದೆ ಮಾಡಿದ್ದೆಲ್ಲವೂ ನೆನಪಾಗುತ್ತದೆ. ಅಧಿಕಾರದ ಮದ ಇಳಿದಾಗ ಅಜ್ಜ ಭೀಷ್ಮ, ಬಂಧುಗಳು, ತಂದೆ ತಾಯಿ, ಅಭಿಮನ್ಯುವಿನ ಶೌರ್ಯ ಎಲ್ಲವೂ ನೆನಪಾಗುತ್ತದೆ. ನೆಲ ಮುಟ್ಟಿದ ಮೇಲೆ ತಾನು ಮಾಡಿದ್ದೆಲ್ಲವೂ ತಪ್ಪು ಅನಿಸುತ್ತದೆ. ಇದು ಇಂದಿನ ರಾಜಕಾರಣಿಗಳಿಗೆ ಪಾಠವಾಗಬೇಕು. ಇಲ್ಲಿನ ನೆಲ, ಕಾಡು, ನದಿ, ಪರಿಸರ ಎಲ್ಲವೂ ಹಿಂದೆ ಇದ್ದ ಹಾಗೆ ಈಗಿಲ್ಲ. ಮನುಷ್ಯನ ಕ್ರೌರ್ಯಕ್ಕೆ ಎಲ್ಲವೂ ಬಲಿಯಾಗಿದೆ. ಇಂಥವುಗಳ ಬಗ್ಗೆ ಸಾಹಿತ್ಯ ಬೆಳಕು ಚೆಲ್ಲಬೇಕು ಎಂದು ಹೇಳಿದರು.
ಸಾಹಿತ್ಯ ಜನಸಮುದಾಯ ತಲುಪಲಿ: ಮತ್ತೋರ್ವ ಅತಿಥಿ ವಿಧಾನ ಪರಿಷತ್ತಿನ ಮಾಜಿ ಸದಸ್ಯೆ ಪ್ರಪುಲ್ಲಾ ಮಧುಕರ್, ಜನರನ್ನು ಮುಟ್ಟುವ ಸಾಹಿತ್ಯ ಬರಬೇಕು. ಸಾಹಿತ್ಯಕ್ಕೆ ಜನಸಮುದಾಯವನ್ನು ತಲುಪುವುದು ಮುಖ್ಯವಾಗಬೇಕೆ ಹೊರತು ಶಾಸ್ತ್ರ, ಸಂಪ್ರದಾಯ ಮುಖ್ಯವಲ್ಲ ಎಂದು ಅಭಿಪ್ರಾಯಪಟ್ಟರು.
ಸಂಕಲನದ ಕುರಿತು ಮಾತನಾಡಿದ ಇಂದಿರಾಗಾಂಧಿ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕ ಪ್ರೊ. ಬಿ.ಎಲ್. ರಾಜು, ಕವನಸಂಕಲನದಲ್ಲಿ ಜನಸಮುದಾಯವನ್ನು ತಲುಪುವ ಆಪ್ತತೆ ಇದೆ. ಇಲ್ಲಿನ ಕವನಗಳಲ್ಲಿ ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ಹೇಳಿರುವಂತೆ ರಸ, ಭಾವ, ವಕ್ರೋಕ್ತಿ ಇಲ್ಲ. ಆದರೆ, ಬದುಕು, ಬದುಕಿನ ಲಯ, ಏರಿಳಿತ ಇದೆ. ಕಾವ್ಯದ ವಸ್ತು ಮನೆಯಿಂದ ಶುರುವಾಗಿ ಜಗತ್ತಿನ ತುದಿಯವರೆಗೆ ಹರಡಿದೆ. ಜಗತ್ತಿನ ವಿದ್ಯಮಾನಗಳಿಗೆ ಕವಿ ಇಲ್ಲಿ ಪ್ರತಿಕ್ರಿಯಿಸಿದ್ದಾರೆ. ಪದ್ಯಗಳು ಮೇಲ್ನೋಟಕ್ಕೆ ಸರಳವೆನಿಸಿದರೂ ಪದ್ಯದ ಆಳಕ್ಕೆ ವಿವೇಕ ಎಚ್ಚರ ಇದೆ ಎಂದು ಹೇಳಿದರು.
ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪನವರು ಕವನಸಂಕಲನವನ್ನು ಬಿಡುಗಡೆ ಮಾಡಿದರು. ಟ್ರಸ್ಟಿನ ಅಧ್ಯಕ್ಷ ಹೆಚ್.ಜಿ. ರಂಗನಾಥ್, ಲೇಖಕ ಸಿರಿವಂತೆ ಚಂದ್ರಶೇಖರ್ ಹಾಜರಿದ್ದರು.