ಅಡಕೆ ಪರ ವಾದಿಸಲು ವಕೀಲರ ನೇಮಕ: ಸಿಎಂ ಭರವಸೆ
ಶಿವಮೊಗ್ಗ: ಅಡಕೆ ಕುರಿತು ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣದಲ್ಲಿ ರಾಜ್ಯ ಅಡಕೆ ಬೆಳೆಗಾರರ ಪರವಾಗಿ ವಾದಿಸಲು ಖ್ಯಾತ ವಕೀಲರೊಬ್ಬರನ್ನು ನೇಮಿಸುವುದಾಗಿ ಸರ್ಕಾರ ಭರವಸೆ ನೀಡಿದೆ.
ಭಾನುವಾರ ಸಂಜೆ ಸಾಗರದಲ್ಲಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರನ್ನು ಅಡಕೆ ಬೆಳೆಗಾರರ ಪರವಾಗಿ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ್ ಗೌಡ, ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಬಿ.ಆರ್. ಜಯಂತ್ ಮತ್ತಿತರರು ಭೇಟಿ ಮಾಡಿ ಚರ್ಚೆ ನಡೆಸಿದ ಬಳಿಕ ಕಾಗೋಡು ತಿಮ್ಮಪ್ಪ ಅವರು ಕಾನೂನು ಸಚಿವ ಟಿ.ಬಿ. ಜಯಚಂದ್ರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದರು.
ಈ ವೇಳೆ ಅಡಕೆ ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚೆ ನಡೆಸಿ ಅಡಕೆ ಬೆಳೆಗಾರರ ಪರವಾಗಿ ವಾದಿಸಲು ರಾಜ್ಯ ಸರ್ಕಾರ ವಕೀಲರೊಬ್ಬರನ್ನು ನೇಮಿಸುವಂತೆ ನೀಡಿದ ಸಲಹೆಗೆ ಮುಖ್ಯಮಂತ್ರಿ ಮತ್ತು ಕಾನೂನು ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಜ.2ರಂದು ಸಭೆ: ಇನ್ನೊಂದೆಡೆ ಅಡಕೆಯು ತೆರಿಗೆ ತಪ್ಪಿಸಿ ಹೋಗುತ್ತಿರುವುದು, ಮಾರುಕಟ್ಟೆಯ ಹೊರಗೆ ವಹಿವಾಟು ನಡೆಯುತ್ತಿರುವುದು, ಅಡಕೆಗೆ ಕಳಪೆ ಗುಣಮಟ್ಟದ ಬಣ್ಣ ಬೆರೆಸುತ್ತಿರುವುದು ಇತ್ಯಾದಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಜ.2 ರಂದು ಬೆಂಗಳೂರಿನಲ್ಲಿ ಸಭೆ ನಡೆಸಲು ಉದ್ದೇಶಿಸಲಾಗಿದೆ. ಕಾನೂನು ಸಚಿವ ಟಿ.ಬಿ.ಜಯಚಂದ್ರ ಮತ್ತು ಸ್ಪೀಕರ್ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಈ ಸಭೆ ನಡೆಯಲಿದ್ದು, ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಅಡಕೆ ಬೆಳೆಗಾರರ ಪರವಾಗಿ ಮಂಜುನಾಥ ಗೌಡರು, ಬಿ. ಆರ್. ಜಯಂತ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.