ಇದು ಕೆಜೆಪಿ ಕೊನೆಯ ಸಭೆ: ಬಿಎಸ್‌ವೈ
ಕ.ಪ್ರ.ವಾರ್ತೆ , ಶಿಕಾರಿಪುರ , ಡಿ. 29
ದೇಶದ ಇಂದಿನ ಸಂಕಷ್ಟ ಸ್ಥಿತಿಗೆ ನರೇಂದ್ರ ಮೋದಿ ನಾಯಕತ್ವ ಅನಿವಾರ್ಯವಾಗಿದ್ದು, ಇದುವರೆಗಿನ ಎಲ್ಲಾ ಕಹಿ ಅನುಭವಗಳನ್ನು ದೇಶಕ್ಕಾಗಿ ಮರೆತು ಬಿಜೆಪಿಯನ್ನು ಸಂಘಟಿಸೋಣ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸ್ವಕ್ಷೇತ್ರ ಶಿಕಾರಿಪುರದ ಕೆಜೆಪಿ ಮುಖಂಡರ ಸಭೆಯಲ್ಲಿ ತಿಳಿಸಿ ಇದೇ ಕೆಜೆಪಿಯ ಕೊನೆಯ ಸಭೆ ಎಂದು ಘೋಷಿಸುವ ಮೂಲಕ ಬಿಜೆಪಿಗೆ ಸೇರ್ಪಡೆಯಾಗುತ್ತಿರುವ ನಿರ್ಧಾರವನ್ನು ಭಾನುವಾರ ಅಧಿಕೃತವಾಗಿ ಪ್ರಕಟಿಸಿದರು.
ಭಾನುವಾರ ಪಟ್ಟಣದ ಮಾಳೇರಕೇರಿಯಲ್ಲಿನ ಕೆಜೆಪಿ ಕಚೇರಿಯಲ್ಲಿ ಅನೌಪಚಾರಿಕವಾಗಿ ಪಕ್ಷದ ಪ್ರಮುಖ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಪುರಸಭಾಧ್ಯಕ್ಷರಾಗಿ ರಾಜ್ಯದ ಮುಖ್ಯಮಂತ್ರಿವರೆಗೆ ಅಧಿಕಾರ ದೊರಕಿಸಿ ಎತ್ತರಕ್ಕೆ ಬೆಳೆಯಲು ಶಿಕಾರಿಪುರದ ಜನತೆ ಹೆಜ್ಜೆ ಹೆಜ್ಜೆಗೂ ಶ್ರಮವಹಿಸಿದ್ದಾರೆ ಎಂದರು.
ಆರೆಸ್ಸೆಸ್ ಶಕ್ತಿ: ಪುರಸಭಾಧ್ಯಕ್ಷರಾದ ಅವಧಿಯಲ್ಲಿ ಜನತೆಯ ತೆರಿಗೆ ಹಣವನ್ನು ಜನೋಪಯೋಗಿ ಕಾರ್ಯಕ್ಕೆ ಬಳಸಲು ಅವಕಾಶ ಕಲ್ಪಿಸದ ವಿರೋಧ ಪಕ್ಷದ ಧೋರಣೆಯನ್ನು ಖಂಡಿಸಿ ಹಠ, ಛಲದಿಂದ ಪಟ್ಟಣದ ಜನತೆಗೆ ಸೌಲಭ್ಯ ಕಲ್ಪಿಸಲು ಆರೆಸ್ಸೆಸ್‌ನಲ್ಲಿ ಬೆಳೆದ ಫಲವಾಗಿ ದೊರೆತ ಧೈರ್ಯ, ಸಂಕಷ್ಟವನ್ನು ಎದುರಿಸುವ ಶಕ್ತಿಯಿಂದ ಸಾಧ್ಯವಾಗಿದೆ ಎಂದರು.
ರಾಜಕೀಯವಾಗಿ ಎಲ್ಲಾ ರೀತಿಯ ಸ್ಥಾನಮಾನ ಅನುಭವಿಸಿದ್ದು, ಕೇವಲ 3 ವರ್ಷದ ಮುಖ್ಯಮಂತ್ರಿ ಅವಧಿಯಲ್ಲಿ ರಾಜ್ಯದ ಇತಿಹಾಸದಲ್ಲಿ ಶಿಕ್ಷಣ, ನೀರಾವರಿ, ಗ್ರಾಮೀಣ ಅಭಿವೃದ್ಧಿ, ಕೃಷಿ ಸಹಿತ ಎಲ್ಲಾ ಕ್ಷೇತ್ರದಲ್ಲಿ ಗಣನೀಯ ಸಧನೆ ಮಾಡಲಾಗಿದ್ದು, ವೇಗದ ಅಭಿವೃದ್ಧಿ ಕಾರ್ಯದಿಂದ ಸ್ಥಾನ ವಂಚಿತರಾಗಬೇಕಾಯಿತು ಎಂದು ಭಾವುಕರಾದವರು.
ಮಾನಸಿಕ ಹಿಂಸೆ: 75 ಶಾಸಕರ ಸಮ್ಮುಖದಲ್ಲಿ ರಾಜಿನಾಮೆ ಸಲ್ಲಿಸುವ ಪ್ರಸಂಗದಲ್ಲಿ ಬಿಜೆಪಿ ಮುಖಂಡರಿಗೆ ಜನರ ತೀರ್ಪಿಗೆ ವಿರುದ್ಧವಾಗಿ ನಡೆದುಕೊಂಡಲ್ಲಿ ಪಕ್ಷ ಅಧೋಗತಿ ತಲುಪಲಿದೆ ಎಂದು ತಿಳಿಸಿದ್ದು, ನಂತರದಲ್ಲಿ ಬಿಜೆಪಿ ಹಿನ್ನಡೆಗೆ ಮಾನಸಿಕವಾಗಿ ಹಿಂಸೆ ಅನುಭವಿಸಿದ್ದಾಗಿ ಅವರು ತಿಳಿಸಿದರು.
5 ವರ್ಷ ಸಂಪೂರ್ಣ ಅಧಿಕಾರ ದೊರೆತಿದ್ದಲ್ಲಿ ಗುಜರಾತ್ ಮೀರಿಸುವ ಅಭಿವೃದ್ಧಿ ಕಾರ್ಯವನ್ನು ಸಾಧಿಸುವ ಮೂಲಕ ರಾಜ್ಯದಲ್ಲಿ ಕನಿಷ್ಠ 25 ವರ್ಷ ಪಕ್ಷ ಅಧಿಕಾರದಿಂದ ವಿಮುಖವಾಗುವ ಸ್ಥಿತಿ ಬರುತ್ತಿರಲಿಲ್ಲ ಎಂದ ಅವರು, ಅನವಶ್ಯಕವಾಗಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ ಮುಖಂಡರು ಇದೀಗ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದರು.
22 ಲೋಕಸಭಾ ಕ್ಷೇತ್ರ: ರಾಜ್ಯಾದ್ಯಂತ ಅಲೆದಾಡಿ 20-22 ಲೋಕಸಭಾ ಕ್ಷೇತ್ರ ಗೆಲ್ಲಿಸಿದಲ್ಲಿ ಮಾತ್ರ ಪಕ್ಷ ಸೇರ್ಪಡೆ ಸಾರ್ಥಕವಾಗಲಿದ್ದು, ಕೆಜೆಪಿ, ಬಿಜೆಪಿ ಮತವಿಭಜನೆಯಿಂದಾಗಿ ಕಾಂಗ್ರೆಸ್ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಪಡೆದಿದ್ದು, ಇದೀಗ ನರೇಂದ್ರ ಮೋದಿ ಪ್ರಧಾನಿಯಾಗುವುದು ಶತಸಿದ್ಧ ಎಂದ ಅವರು ಅಗ್ನಿಪರೀಕ್ಷೆಯ ಈ ಸಂದರ್ಭದಲ್ಲಿ ಎಲ್ಲಾ ರೀತಿಯ ಸ್ವಾರ್ಥ ಮರೆತು ಬಿಜೆಪಿ ಸಂಘಟನೆಗೆ ಗ್ರಾಮೀಣ ಭಾಗದ ಕಾರ್ಯಕರ್ತರು,ಮುಖಂಡರು ಸಿದ್ಧರಾಗುವಂತೆ ತಿಳಿಸಿದರು.
ಬಿಜೆಪಿ ಸೇರ್ಪಡೆಗೆ ಎಲ್ಲಾ ರೀತಿಯ ಪ್ರಕ್ರಿಯೆ ಕೊನೆಗೊಂಡಿದ್ದು, 4-5 ದಿನದಲ್ಲಿ ಸೇರ್ಪಡೆಗೊಳ್ಳಲಾಗವುದು, ಇದು ಕೆಜೆಪಿ ಕಾರ್ಯಕರ್ತರ ಕೊನೆಯ ಸಭೆ ಎಂದರು.
ಸ್ಥಳೀಯರ ಶ್ರಮ: ಸಂಸದ ರಾಘವೇಂದ್ರ ಮಾತನಾಡಿ, ಜೀವನಪೂರ್ತಿ ಹೋರಾಟದ ಮೂಲಕ ಯಡಿಯೂರಪ್ಪನವರನ್ನು ರಾಜ್ಯ ರಾಷ್ಟ್ರ ಮಟ್ಟದ ನಾಯಕರಾಗಿ ರೂಪುಗೊಳ್ಳಲು ಸ್ಥಳೀಯ ಕಾರ್ಯಕರ್ತರ ಶ್ರಮ ಅಪಾರವಾಗಿದೆ ಎಂದರು.
ಮಾಜಿ ಶಾಸಕ ಮಹಾಲಿಂಗಪ್ಪ, ಮುಖಂಡ ಶೇಖರಪ್ಪ, ತಾಪಂ ಅಧ್ಯಕ್ಷೆ ಲೀಲಾವತಿ, ಜಿಪಂ ಸದಸ್ಯ ಈಶ್ವರಪ್ಪ,ಬಂಗಾರಿನಾಯ್ಕ, ಶಾಂತಮ್ಮ, ಮುಖಂಡ ರುದ್ರಮೂರ್ತಿ, ರುದ್ರಪ್ಪಯ್ಯ, ಹಾಲಪ್ಪ, ಮೋಹನ್, ವಸಂತಗೌಡ, ಸುಕೇಂದ್ರಪ್ಪ, ಗಾಯತ್ರಿದೇವಿ, ಸರೋಜಮ್ಮ, ಭೂಕಾಂತ್, ತಡುಗಣಿ ಮಂಜಪ್ಪ ಮೊದಲಾದವರು ಉಪಸ್ಥಿತರಿದ್ದರು.
ಪುರಸಭಾಧ್ಯಕ್ಷರಾದ ಅವಧಿಯಲ್ಲಿ ಜನತೆಯ ತೆರಿಗೆ ಹಣವನ್ನು ಜನೋಪಯೋಗಿ ಕಾರ್ಯಕ್ಕೆ ಬಳಸಲು ಅವಕಾಶ ಕಲ್ಪಿಸದ ವಿರೋಧ ಪಕ್ಷದ ಧೋರಣೆಯನ್ನು ಖಂಡಿಸಿ ಹಠ, ಛಲದಿಂದ ಪಟ್ಟಣದ ಜನತೆಗೆ ಸೌಲಭ್ಯ ಕಲ್ಪಿಸಲು ಆರೆಸ್ಸೆಸ್‌ನಲ್ಲಿ ಬೆಳೆದ ಫಲವಾಗಿ ದೊರೆತ ಧೈರ್ಯ, ಸಂಕಷ್ಟವನ್ನು ಎದುರಿಸುವ ಶಕ್ತಿಯಿಂದ ಸಾಧ್ಯವಾಗಿದೆ
- ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ