ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಂಗೀತ ಸಾಹಿತ್ಯ ಅಭಿರುಚಿ ಅವಶ್ಯ

Vishwanath S
Updated On : 30 Dec 2013, 12:17 pm

ಶಿವಮೊಗ್ಗ: ಬೇಲೂರು ರಘುನಂದನ್ ಅವರ ಕವನಗಳ ಆಧಾರಿತ ಭಾವಗೀತೆಗಳ ಶ್ವೇತಗಾನ ಧ್ವನಿಮುದ್ರಿತ ಅಡಕ (ಸಿಡಿ) ಲೋಕಾರ್ಪಣೆಗೊಂಡಿದೆ.
ಶ್ರೀಗುರುಗುಹ ಸಂಗೀತ ಸಮಗ್ರ ಭಾನುವಾರ ಸಂಜೆ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರಿನ ಭಾಭಾ ಪರಮಾಣು ಸಂಶೋಧನಾ ಕೇಂದ್ರ ನಿವೃತ್ತ ವಿಜ್ಞಾನಿ ಮುಳಿಯ ರಾಘವಯ್ಯ ಸಿಡಿ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಅವರು, ಸಂಗೀತ ಮತ್ತು ಸಾಹಿತ್ಯಕ್ಕೆ ಉತ್ತಮ ಸಂಬಂಧವಿದೆ. ಎರಡು ಒಟ್ಟಾಗಿ ಮೇಳೈಸಿದಾಗ ಅದರ ರುಚಿಯೇ ಬೇರೆ. ಅದನ್ನು ಸವಿದವರಿಗೆ ಗೊತ್ತು ಎಂದು ಅಭಿಪ್ರಾಯಟ್ಟರು.
ಸಂಗೀತ, ಸಾಹಿತ್ಯದಲ್ಲಿ ಅಭಿರುಚಿ ಇಲ್ಲದವನ್ನು ಮನುಷ್ಯ ಎಂದು ಕರೆಯಲು ಸಾಧ್ಯವಿಲ್ಲ. ಪಶುಗಳಿಗೂ ಸಂಗೀತ ಎಂದರೆ ಇಷ್ಟ. ಕೃಷ್ಣನ ಕೊಳಲ ನಾದಕ್ಕೆ ಹಸುಗಳೇ ತಲೆದೂಗಿ ನಿಂತಿದ್ದವು. ಹೀಗಿರುವಾಗ ಮನುಷ್ಯರಾದ ನಾವುಗಳು ಸಂಗೀತ, ಸಾಹಿತ್ಯವನ್ನು ಆಸ್ವಾದಿಸಬೇಕು ಎಂದು ಕರೆ ನೀಡಿದರು.
ಕವಿ ಬೇಲೂರು ರಂಘನಂದನ್ ಮಾತನಾಡಿ, ಸಾಹಿತ್ಯ, ಸಂಗೀತಕ್ಕೆ ಶಿವಮೊಗ್ಗ ಹೆಚ್ಚಿನ ಆದ್ಯತೆ ನೀಡುತ್ತಿದೆ. ಅದು ನನಗೆ ತುಂಬ ಖುಷಿ ಕೊಟ್ಟಿದೆ. ನನಗೆ ಬದುಕು, ಜೀವನ ಕೊಟ್ಟಿದ್ದು ಬೇಲೂರಾದರೂ ಅದನ್ನು ಮರುಕಟ್ಟಿ ಕೊಟ್ಟಿದ್ದು ಶಿವಮೊಗ್ಗ. ಶ್ರೀಗುರುಗುಹ ಸಂಗೀತ ಶಾಲೆ ನನ್ನ ಕವನಗಳನ್ನು ಸಿಡಿ ಮೂಲಕ ಹೊರತರುತ್ತಿರುವದು ಮತ್ತಷ್ಟು ಕವನಗಳನ್ನು ಬರೆಯಲು ವೇದಿಕೆಯಾಗಿದೆ ಎಂದರು. ಶಾಸಕ ಕೆ.ಬಿ. ಪ್ರಸನ್ನಕಮಾರ್ ಮಾತನಾಡಿ, ಶ್ರೀಗುರುಗುಹ ಸಂಗೀತ ಶಾಲೆ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಈ ಸೇವೆ ನಿರಂತರವಾಗಿ ನಡೆಯಲಿ. ಅದಕ್ಕೆ ನಮ್ಮ ಸಹಕಾರ ಸದಾ ಇರುತ್ತದೆ ಎಂದರು. ಇದೇ ವೇಳೆ ಭಾವಸಿಂಚನ ಕಾರ್ಯಕ್ರಮ ನಡೆಯಿತು. ಗಾನಶ್ರೀ, ಅಪೇಕ್ಷಾ, ಕೃಪಾ, ಸಿ.ವಿ.ವಿಂಧ್ಯಾ, ಬಿ.ಆರ್. ನಾಗಶೃತಿ ಮತ್ತಿತರರು ಪ್ರಸಿದ್ಧ ಕವಿಗಳ ಕವನಗಳನ್ನು ಗಾಯನ ರೂಪದಲ್ಲಿ ಪ್ರಸ್ತುತ ಪಡಿಸಿದರು.
ಕಾರ್ಯಕ್ರಮಕ್ಕೂ ಮೊದಲು ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಅರಬಿಂದೂ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಎಂ.ಎಸ್. ವಿನಾಯಕ ಹಾಗೂ ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯ ಕನ್ನಡ ಉಪನ್ಯಾಸಕ ತುರವನೂರು ಎಂ.ವಿ.ಮಲ್ಲಿಕಾರ್ಜುನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬಕ್ಕೇರಿ, ಶ್ರೀಗುರುಗುಹ ಸಂಗೀತ ಸಮಗ್ರ ಸಂಸ್ಥೆಯ ವಿದ್ವಾನ್ ಎಚ್.ಎಸ್. ನಾಗರಾಜ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement