ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಹೊಸ ವರ್ಷದ ನೆಪದಲ್ಲಿ ಸಾಧನೆ ಮೂಲೆಗುಂಪಾಗದಿರಲಿ

Vishwanath S
Updated On : 30 Dec 2013, 12:15 pm

ಶಿವಮೊಗ್ಗ: ಹೊಸವರ್ಷ ಬರುತ್ತಿರುವ ಹಿನ್ನೆಲೆಯಲ್ಲಿ ಡಿ.31ರ ಮಧ್ಯರಾತ್ರಿ ಕುಣಿದು ಕುಪ್ಪಳಿಸಲು ಹಲವರು ಸಜ್ಜಾಗುತ್ತಿದ್ದಾರೆ. 31ರ ಮಧ್ಯರಾತ್ರಿಯನ್ನು ಇವರು ಸ್ವಾಗತ ಮಾಡದೇ ಹೋದರೆ ಹೊಸ ವರ್ಷ ಬರುವುದೇ ಇಲ್ಲವೇನೋ ಅನ್ನುವಂತೆ ವರ್ತಿಸುತ್ತಿದ್ದಾರೆ ಎಂದು ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವೆಂಕಟೇಶ ನಗರದ ಬಸವ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ಬಸವ ಕೇಂದ್ರದ ಹೆಚ್ಚುವರಿ ಕಟ್ಟಡದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು, 2000ನೇ ಇಸವಿ ಆಗಮಿಸುವ ವೇಳೆಗೆ ಮಿಲೇನಿಯಂ ಆಗಮಿಸುತ್ತಿದೆ ಎಂದು ಡಿ.31ರ ಮಧ್ಯರಾತ್ರಿ ಕುಣಿದು ಕುಪ್ಪಳಿಸಿದ್ದರು. ಇವರು ಕುಣಿಯದೇ ಹೋದರೆ ಹೊಸ ವರ್ಷ ಬರುವುದೇ ಇಲ್ಲವೇನೋ ಅನ್ನುವಂತೆ ವರ್ತಿಸಿದ್ದರು. ಈಗಲೂ ಸಜ್ಜಾಗಿದ್ದಾರೆ. ಆದರೆ, ಇದಾವುದಕ್ಕೂ ಮಹತ್ವ ಇಲ್ಲ. ಅದರ ಬದಲಾಗಿ 2013ರಲ್ಲಿ ಏನು ಅಭಿವೃದ್ಧಿಯಾಯಿತು, ಏನು ಸಾಧನೆ ಮಾಡಿದೆವು ಎನ್ನುವ ಬಗ್ಗೆ ಎಲ್ಲಿಯೂ ಚಿಂತನೆಯೇ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾಮಾಜಿಕ ನ್ಯಾಯದ ಬಗ್ಗೆ ಅರ್ಥೈಸಿಕೊಂಡು ಆದರ್ಶ ಸಮಾಜವನ್ನು ನಿರ್ಮಾಣ ಮಾಡಲು ಮುಂದಾಗಿದ್ದವರು ಬಸವಣ್ಣನವರು ಹೇಳಿದ್ದಾರೆ. ದೇಶ, ಸಮಾಜ ನಡೆಸಲು ಬೇಕಾದ ವ್ಯವಸ್ಥೆ ರೂಪಿಸುವುದು ಬಹಳ ದೊಡ್ಡ ಜವಾಬ್ದಾರಿಯಾಗಿದೆ. ಅದನ್ನು ಸಾಮಾನ್ಯ ಜನರು ರೂಪಿಸುವುದು ಸಾಧ್ಯವೇ ಇಲ್ಲ. ಸಮಾಜ, ದೇಶ, ಪಂಥ, ಧರ್ಮ, ವಿವಿಧ ಸ್ತರಗಳಿಗೆ ಸಮಾನ ಅವಕಾಶ ಮಾಡಿಕೊಟ್ಟು ಸಮನ್ವಯ ಸಾಧಿಸುವುದು ಕಷ್ಟದ ಕೆಲಸ ಎಂದರು.
ಚಿತ್ರದುರ್ಗ ಬಸವ ಕೇಂದ್ರದ ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಮಾನವ ಸಮುದಾಯದಲ್ಲಿ ಕ್ಲಿಷ್ಟಕರವಾದದ್ದು ಆದರ್ಶಗಳ ಅನುಸರಣೆ. ಮಾನವ ಯಾವತ್ತೂ ಆಡಂಬರವನ್ನು ಬಯಸುತ್ತಾನೆ. ಮಾನವನಿಗೆ ಆಡಂಬರವೆಂದರೆ ಬಹಳ ಪ್ರಿಯ. ಆಡಂಬರ ಯಾವತ್ತೂ ಆದರ್ಶವನ್ನು ಬಯಸುವುದಿಲ್ಲ. ನಾವೆಲ್ಲರೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಆಡಂಬರಕ್ಕೆ ಪ್ರೋತ್ಸಾಹ ನೀಡುವವರೇ ಆಗಿದ್ದೇವೆ. ಆದರೆ, ಕೊನೆಗೂ ಆದರ್ಶವೇ ಗೆಲ್ಲುತ್ತದೆ ಎಂಬುದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ, ಇತರರಿಗಾಗಿ ಬದುಕುವ ಬದುಕೇ ನಿಜವಾದ ಬದುಕು. ಆದರೆ, ನಮ್ಮ ಸಮಾಜ ಜಾತಿ-ಮತ, ಪ್ರಾಂತ, ಮೇಲು-ಕೀಳು, ಅಲ್ಪ ಸಂಖ್ಯಾತ-ಬಹುಸಂಖ್ಯಾತ ಎಂದು ಹಂಚಿಹೋಗಿದೆ. ಯಾವತ್ತಿಗೂ ನಮ್ಮಲ್ಲಿ ಒಂದು ಎನ್ನುವ ಭಾವನೆ ಮೂಡುತ್ತಲೇ ಇಲ್ಲ ಎಂದರು.
ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಬಸವ ಕೇಂದ್ರಕ್ಕೆ ಇನ್ನೂ 5 ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಸಂಸದ ಬಿ.ವೈ. ರಾಘವೇಂದ್ರ, ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿದರು. ಬಸವಕೇಂದ್ರದ ಶ್ರೀ ಬಸವಮರುಳಸಿದ್ದ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ವೇದಿಕೆಯಲ್ಲಿ ಕೆಜೆಪಿ ಮುಖಂಡ ಜ್ಯೋತಿಪ್ರಕಾಶ್, ರುದ್ರೇಗೌಡ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಷಡಾಕ್ಷರಿ, ನಗರಸಭೆ ಸದಸ್ಯ ನಾಗರಾಜ್ ಕಂಕಾರಿ, ಗೋಪಿ, ಬಳ್ಳಕೆರೆ ಸಂತೋಷ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement