ಅಕ್ರಮ ಬೀಟೆ ನಾಟ ವಶ: ಇಬ್ಬರ ಬಂಧನ
ಹೊಸನಗರ: ಅಕ್ರಮವಾಗಿ ಬೆಲೆಬಾಳುವ ಬೀಟೆ ನಾಟ ಸಾಗಿಸುತ್ತಿದ್ದ ವೇಳೆ ನಗರ ವಲಯ ಅರಣ್ಯಾಧಿಕಾರಿ ಮೃತ್ಯುಂಜಯಪ್ಪ ಮತ್ತು ತಂಡ ದಾಳಿ ನಡೆಸಿ ವಾಹನ ಸಮೇತ ಆರೋಪಿಗಳನ್ನು ಬಂಧಿಸಿದ ಘಟನೆ ತಾಲೂಕಿನ ಮತ್ತಿಮನೆ ಸಮೀಪ ಎಮ್ಮೆಹೊಂಡದ ಬಳಿ ನಡೆದಿದೆ.
ಹಾಲುಗುಡ್ಡೆ ಕಾಳೇಶ್ವರ ವಾಸಿ ಪ್ರದೀಪ್(23), ಕಟ್ಟಿನಹೊಳೆ ಕಾಕಡಜಡ್ಡು ವಾಸಿ ಕೆ.ಎಸ್. ಸುರೇಂದ್ರ (24) ಬಂಧಿತ ಆರೋಪಿಗಳು. ಮಾವಿನಕಟ್ಟೆ ವಾಸಿ ಸುರೇಶ್ ಶಾನೆ ಗುಂಡ ಮತ್ತು ಮಾವಿನಕಟ್ಟೆ ಪ್ರಕಾಶ್ ಎಂಬುವವರು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳಿಂದ ವಾಹನ ಸಮೇತ ಸುಮಾರು 50 ಸಾವಿರ ಬೆಲೆಬಾಳುವ ಬೀಟೆ ತುಂಡುಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಅಕ್ರಮವಾಗಿ ಬೀಟೆ ನಾಟ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಇಲಾಖೆ ಬಂದ ಹಿನ್ನಲೆಯಲ್ಲಿ ಕಾರ್ಯಪ್ರವೃತ್ತರಾದ ಆರ್ಎಫ್ಒ ಮೃತ್ಯುಂಜಯಪ್ಪ ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದರು.
ಅಧಿಕಾರಿಗಳು ಬರುವ ಸುಳಿವು ದೊರೆತ ಹಿನ್ನಲೆಯಲ್ಲಿ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಆದರೆ, ಅವರನ್ನು ಹಿಂಬಾಲಿಸಿದ ಅಧಿಕಾರಿಗಳು ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರೆದಿದೆ.
ಕಾರ್ಯಾಚರಣೆಯಲ್ಲಿ ಫಾರೆಸ್ಟ್ರ್ ದಿಲೀಪ್, ಮಧುಕರ್, ಎಡ್ವರ್ಡ್ ವನಪಾಲಕ ಅಶೋಕ, ವಸಂತ್, ಚಾಲಕ ರಾಮು ಪಾಲ್ಗೊಂಡಿದ್ದರು.