ಖಾಸಗಿ ಶಿಕ್ಷಣ ಸಂಸ್ಥೆಗಳತ್ತ ಒಲವು ಅಪಾಯಕಾರಿ ಬೆಳವಣಿಗೆ: ಅಣ್ಣಪ್ಪ
ಜೋಗ್ಫಾಲ್ಸ್: ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರಿಗೆ ಸರ್ಕಾರಿ ಶಾಲೆಗಳು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನಮಾಡಿ, ಇಂದು ಗ್ರಾಮೀಣ ಪ್ರದೇಶದಲ್ಲಿ ಸುವರ್ಣ ಮಹೋತ್ಸವ ಆಚರಣೆಯ ಹೊಸ್ತಿಲನ್ನು ದಾಟುವ ವಿಚಾರಗಳು ದಾಖಲೆಯ ಮೈಲುಗಲ್ಲು ಆಗಿದೆ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಕಾಗೋಡು ಅಣ್ಣಪ್ಪ ತಿಳಿಸಿದರು.
ಇಲ್ಲಿಗೆ ಸಮೀಪದ ಬಿದರೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸರ್ಕಾರ ಸಾಕಷ್ಟು ಯೋಜನೆಗಳನ್ನು ಶೈಕ್ಷಣಿಕವಾಗಿ ಪೂರೈಸಿದ್ದರೂ ಸಾಮಾನ್ಯ ಜನರ ಒಲವು ಖಾಸಗಿ ಶಿಕ್ಷಣ ಸಂಸ್ಥೆಗಳತ್ತ ಸಾಗುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ. ಶಾಲೆಗಳಲ್ಲಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಪರಿಪಾಠವನ್ನು ಶಿಕ್ಷಕರು ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಜಿಪಂ ಸದಸ್ಯೆ ಲಲಿತಾ ನಾರಾಯಣ್, ಸಮುದಾಯದ ಸಹಭಾಗಿತ್ವ ಶಾಲೆಗಳ ಅಭಿವೃದ್ಧಿಯಲ್ಲಿ ಪ್ರಧಾನ ಪಾತ್ರ ವಹಿಸಲಿದೆ ಎಂದರು. ತಾಲೂಕು ಪಂಚಾಯ್ತಿ ಅಧ್ಯಕ್ಷ ಹರೀಶ್ ಗಂಟೆ, ಸದಸ್ಯೆ ಗಿರಿಜಮ್ಮ ಮಹದೇವಪ್ಪ, ಸಾಮಾಜಿಕ ಕಾರ್ಯಕರ್ತ ಶ್ರೀನಿವಾಸ ಎಂ. ಪೈ ಮಾತನಾಡಿದರು.
ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಬಿ.ಎಸ್. ಸತ್ಯಂಧರ ಇಂದ್ರ ಅಧ್ಯಕ್ಷತೆ ವಹಿಸಿದ್ದರು. ಅರಲಗೋಡು ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ದಿನೇಶ, ಸದಸ್ಯ ರಮಾನಂದ ಶರ್ಮ, ಉಮೇಶ, ದೇವಮ್ಮ ವಾಸು ಉಪಸ್ಥಿತರಿದ್ದರು. ಸಂಚಾಲಕ ಮೋಹನ್ಕುಮಾರ್ ಜೈನ್ ಪ್ರಾಸ್ತಾವಿಕವಾಗಿ ಭಾಷಣ ಮಾಡಿದರು.