ಮಗು ಮಾರಾಟಕ್ಕೆ ಯತ್ನಿಸಿದ ಪೋಷಕರು
ಸಾಗರ: ಇಲ್ಲಿನ ಸಂಜೀವಿನ ನರ್ಸಿಂಗ್ ಹೋಂನಲ್ಲಿ ಸೋಮವಾರ ಹುಟ್ಟಿದ ಗಂಡು ಮಗುವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ವೈದ್ಯರು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಗೆ ತಿಳಿಸಿ ಮಾರಾಟ ತಡೆಗಟ್ಟಿದ ಘಟನೆ ನಡೆದಿದೆ. ಪಟ್ಟಣದ ಬಸವನಹೊಳೆ ಡ್ಯಾಂ ಸಮೀಪದ ಜಂಬಗಾರು ನಿವಾಸಿ ಮಂಜಪ್ಪ ಎಂಬುವವರ ಪತ್ನಿ ಲಕ್ಷ್ಮೀ ಸೋಮವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಪೋಷಕರು ಬಡತನದ ಹಿನ್ನೆಲೆಯಲ್ಲಿ ಮಗುವನ್ನು ಮಾರಾಟ ಮಾಡುವ ಪ್ರಯತ್ನ ನಡೆಸಿದ್ದರು.
ಹೊರಗಿನ ಕೆಲವರು ಪದೇಪದೇ ಮಗುವನ್ನು ನೋಡಿಕೊಂಡು ಹೋಗಲು ಬರುತ್ತಿರುವುದು, ಹಣಕಾಸಿನ ವ್ಯವಹಾರ ಕುರಿತು ಚರ್ಚೆ ನಡೆಸುತ್ತಿರುವುದರಿಂದ ಅನುಮಾನಗೊಂಡ ಆಸ್ಪತ್ರೆಯ ನರ್ಸ್ ವಿಷಯವನ್ನು ನರ್ಸಿಂಗ್ ಹೋಂನ ಮುಖ್ಯಸ್ಥರಾದ ಡಾ.ವೀರಭದ್ರ ಶೆಟ್ಟಿ ಅವರಿಗೆ ಮಾಹಿತಿ ನೀಡಿದ್ದಾರೆ. ಡಾ. ವೀರಭದ್ರಪ್ಪ ಶೆಟ್ಟಿಯವರು ವಿಷಯವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ತಿಳಿಸಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಪಿ.ಜಿ. ಜೋಯಪ್ಪ ಮಂಜಪ್ಪ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಮಾರಾಟ ಮಾಡಲು ಪ್ರಯತ್ನಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ.
ಮಂಜಪ್ಪ ಹಾಗೂ ಲಕ್ಷ್ಮೀ ದಂಪತಿಗಳಿಗೆ 5 ಗಂಡು ಹಾಗೂ 1 ಹೆಣ್ಣು ಮಗುವಿದೆ. ಇವರಲ್ಲಿ 3 ಮಕ್ಕಳು ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದರೆ, ಇನ್ನು 3 ಅಂಗನವಾಡಿಗೆ ಹೋಗುತ್ತಿದ್ದಾರೆ. ತೀವ್ರ ಬಡತನವೆ ಮಾರಾಟಕ್ಕೆ ಕಾರಣ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ.