ಶಿಸ್ತಿನ ಸಿಪಾಯಿ, ಛಲಗಾರ, ಮಹಾಬಲ
ಸಾಗರ: ಸಾಹಿತಿ, ಸಂಘಟಕ, ಪ್ರಕಾಶಕ, ಸಹಕಾರಿ ಧುರೀಣ, ರಾಜಕೀಯ, ಶೈಕ್ಷಣಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದ ಟಿ. ಮಹಾಬಲೇಶ್ವರ ಭಟ್ಟರು ತೀವ್ರ ಹೃದಯಾಘಾತದಿಂದ ಸೋಮವಾರ ಬೆಳಗ್ಗೆ 9-15ಕ್ಕೆ ನಿಧನರಾದರು.
ಅವರಿಗೆ 86 ವರ್ಷ ವಯಸ್ಸಾಗಿತ್ತು. ಮೃತರಿಗೆ ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಇದ್ದಾರೆ. ಮೂಲತಃ ತಾಲೂಕಿನ ಶರಾವತಿ ಹಿನ್ನೀರಿನ ಪ್ರದೇಶವಾದ ತೊರಮನೆ ಗ್ರಾಮದವರಾದ ಮಹಾಬಲೇಶ್ವರ ಭಟ್ಟರು ಮುಳುಗಡೆಯ ಕಾರಣಕ್ಕಾಗಿ ಆ ಊರನ್ನು ಬಿಟ್ಟು ಬೇದೂರು ಗ್ರಾಮಕ್ಕೆ ಬಂದು ನೆಲಸಿದರು.
ಸಾಮಾಜಿಕ ಕೆಲಸಗಳ ಕಾರಣಕ್ಕಾಗಿ ಬಹಳ ವರ್ಷಗಳ ಕಾಲ ಸಾಗರದಲ್ಲಿ ವಾಸವಿದ್ದರು. ತಮ್ಮ ಜೀವಿತದ ಕೊನೆಯ ದಿನಗಳಲ್ಲಿ ಮತ್ತೆ ಬೇದೂರು ಗ್ರಾಮಕ್ಕೆ ಹೋಗಿ ವಾಸವಾಗಿದ್ದರು.
ಪತ್ನಿ ಸಾವಿನಿಂದ ಆಘಾತ: ಕಳೆದ ಕೆಲವು ತಿಂಗಳುಗಳಿಂದ ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಭಟ್ಟರು ಇತ್ತೀಚೆಗಷ್ಟೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ನಡುವೆ ಕಳೆದ ಸೆಪ್ಟಂಬರ್‌ನಲ್ಲಿ ಪತ್ನಿ ಪದ್ಮಾವತಿಯವರ ಅಕಾಲಿಕ ಸಾವಿನಿಂದ ಭಟ್ಟರು ಮಾನಸಿಕವಾಗಿ ತೀವ್ರ ಆಘಾತಕ್ಕೆ ಒಳಗಾಗಿದ್ದರು.
ಬರಹಗಳು: ಸಾಹಿತಿಯಾಗಿ ಕತೆ, ಕವನ, ಕಾದಂಬರಿ, ಅಂಕಣ ಬರಹ, ಪ್ರವಾಸ ಕಥನ ಹೀಗೆ ಸಾಹಿತ್ಯದ ವಿವಿಧ ಕ್ಷೇತ್ರಗಳಲ್ಲಿ ಭಟ್ಟರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಬಹಳ ವರ್ಷಗಳ ಕಾಲ ಬೇವು- ಬೆಲ್ಲ ಅಂಕಣ ಬರೆದಿದ್ದಾರೆ. ಗುಲಾಬಿ, ತೋರಣ (ಕಥಾ ಸಂಕಲನ), ಹೂಮಾಲೆ (ಕವನ ಸಂಕಲನ), ಹೊಸೂರಿನ ಹಲವರು (ಜೀವನ ಚಿತ್ರಣ), ಮೈಸೂರಿನ ಉಕ್ಕಿನ ಮನುಷ್ಯ (ಜೀವನ ಪರಿಚಯ), ಸಾಹಿತ್ಯ ಶಿಲ್ಪಿಗಳು ಭಾಗ 1-2, ಕನ್ನಡ ಕುಲದೀಪಕರು (ಸಾಹಿತಿಗಳ ಪರಿಚಯ), ಋತುಗಾನ (ಕವನ ಸಂಗ್ರಹ), ಅಣ್ಣತಂಗಿ, ವ್ಯಾಘ್ರಮುಖ, ಮಾನವ ರಾಕ್ಷಸರು (ಕಾದಂಬರಿ), ನನ್ನ ಬದುಕು (ಜೀವನ ಚಿತ್ರ) ಕೃತಿಗಳು ಪ್ರಕಟಣೆಗೊಂಡಿದೆ.
ಇದರ ಜೊತೆಗೆ ಸಂಭ್ರಮ, ಕಾವ್ಯಸಾಗರ ಹಾಗೂ ಆರಾಧನೆ ಎಂಬ ಕೃತಿಗಳು ಮಹಾಬಲೇಶ್ವರ ಭಟ್ಟರ ಸಂಪಾದಕತ್ವದಲ್ಲಿ ಹೊರ ಬಂದಿದೆ.
ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಭಟ್ಟರು ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘದ ನಿರ್ದೇಶಕರಾಗಿ, ಆರು ವರ್ಷ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ತಾಲೂಕು ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದ ಭಟ್ಟರು ರಾಜಕೀಯ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸಿದ್ದಾರೆ. 1953ರಲ್ಲಿ ಸಾಗರ ಪುರಸಭೆ ಸದಸ್ಯರಾಗಿ ಸತತ ಮೂರು ಬಾರಿ ಆಯ್ಕೆಯಾಗಿದ್ದರು.
ಒಳ್ಳೆಯ ಸಂಘಟಕರಾಗಿದ್ದ ಭಟ್ಟರು ಸತತ ಒಂಬತ್ತು ವರ್ಷಗಳ ಕಾಲ ತಾ. ಕಸಾಪ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಇವರ ಅವಧಿಯಲ್ಲಿ ಸಾಗರದಲ್ಲಿ ಉಲ್ಲೇಖಿಸಬಹುದಾದ ಅನೇಕ ಸಾಹಿತ್ಯ ಕಾರ್ಯಕ್ರಮಗಳು ನಡೆದಿವೆ.
ಶಿವಮೊಗ್ಗ ಜಿಲ್ಲಾ 2ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಸುಳ್ಯದಲ್ಲಿ ನಡೆದ ಮೊದಲ ಹವ್ಯಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಭಟ್ಟರು ಅಲ್ಲಿಯೂ ತಮ್ಮ ಚಾಪನ್ನು ಮೂಡಿಸಿದ್ದರು.
ಸಾಗರದಲ್ಲಿ ನಡೆದ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ, ಎಂ.ಡಿ.ಎಫ್. ಬೆಳ್ಳಿಹಬ್ಬ ಸಮಿತಿ ಕಾರ್ಯಾಧ್ಯಕ್ಷರಾಗಿ, ಭಾರತೀಯ ವಿದ್ಯಾಭವನ ಶಿವಮೊಗ್ಗ ಕೇಂದ್ರದ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ.
ಯಾವಾಗಲೂ ಗರಿ ಗರಿ ನೆರಿಗೆಯ ಬಿಳಿಬಣ್ಣದ ಪಂಚೆ, ಉದ್ದ ನಿಲುವಂಗಿ, ಕೋಟು ಧರಿಸುವುದರಿಂದ ಹಿಡಿದು ಸಣ್ಣ ಸಣ್ಣ ಸಂಗತಿಗಳಲ್ಲಿಯೂ ಶಿಸ್ತನ್ನು ಕಾಪಾಡಿಕೊಂಡು ಬಂದಿದ್ದರು.
ಕಾರ್ಯಕ್ರಮಗಳಿಗೆ ಗಣ್ಯರನ್ನು ಕರೆಸುವುದು, ಹೇಳಿದ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭಿಸುವುದು, ಅಚ್ಚುಕಟ್ಟಾಗಿ ನಿರ್ವಹಿಸುವುದು ಎಲ್ಲದರಲ್ಲಿಯೂ ಭಟ್ಟರಲ್ಲಿ ಒಂದು ಶಿಸ್ತು ಎದ್ದು ಕಾಣುತ್ತಿತ್ತು.
- ರಾಜೇಶ ಭಡ್ತಿ