'ಸಂಘ ಸಂಸ್ಥೆಗಳು ಪ್ರಗತಿಪರ ಚಿಂತನೆಗೆ ಮುಂದಾಗಲಿ'
ಸೊರಬ: ಯಾವುದೇ ಖಾಸಗಿ ಸಂಘ- ಸಂಸ್ಥೆಯಾಗಿರಲಿ ಅದರ ಮೂಲ ಧ್ಯೇಯ ಪ್ರಗತಿಪರ ಚಿಂತನೆಗಳಾಗಿರಬೇಕು ಎಂದು ಗೆಂಡ್ಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಂತಪ್ಪ ತಿಳಿಸಿದರು.
ತಾಲೂಕಿನ ಗೆಂಡ್ಲ ಗ್ರಾಮದಲ್ಲಿ ಅಪ್ಪಾಜಿ ಸೇವಾ ಟ್ರಸ್ಟ್, ಸೊರಬ, ಸಮಾಜ ಸೇವಾ ಗ್ರಾಮಾಭಿವೃದ್ಧಿ ಸಂಸ್ಥೆವತಿಯಿಂದ ಗ್ರಾಮೀಣ ಜನರ ಪ್ರಗತಿಯತ್ತ ನಮ್ಮ ಚಿತ್ತ ಎಂಬ ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ ಶ್ರೀಗಂಧದ ಮಾಲೆ ತಯಾರಿಕಾ ತರಬೇತಿ ಶಿಬಿರನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಎಲ್ಲರಿಗೂ ಉದ್ಯೋಗ ಕಲ್ಪಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸ್ವಯಂ ಉದ್ಯೋಗದಿಂದ ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಆದ್ದರಿಂದ ಗ್ರಾಮೀಣ ಮಹಿಳೆಯರು ವಿವಿಧ ಸಂಘ- ಸಂಸ್ಥೆಗಳು ಹಮ್ಮಿಕೊಳ್ಳುವ ಸ್ವಯಂ ಉದ್ಯೋಗ ತರಬೇತಿಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಅಪ್ಪಾಜಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಬಿ.ಆರ್. ಸ್ವಾಮಿ ಮಾತನಾಡಿ, ಹೆಣ್ಣು ಸಂಸಾರದ ಕಣ್ಣು. ಒಂದು ಕುಟುಂಬ ಉತ್ತಮ ರೀತಿಯಲ್ಲಿ ಸಾಗಬೇಕಾದರೆ ಸ್ತ್ರೀ ಪ್ರಮುಖ ಪಾತ್ರ ವಹಿಸುತ್ತಾಳೆ. ಈಗಿನ ದುಬಾರಿ ಯುಗದಲ್ಲಿ ಒಬ್ಬ ವ್ಯಕ್ತಿಯಿಂದ ಕುಟುಂಬ ನಿರ್ವಹಣೆ ಕಷ್ಟಸಾಧ್ಯ. ಹಾಗಾಗಿ ಮಹಿಳೆಯರು ತಮ್ಮ ಬಿಡುವಿನ ವೇಳೆಯಲ್ಲಿ ಸ್ವಂತ ಉದ್ಯೋಗ ನಿರ್ವಹಿಸುವುದರಿಂದ ಸಂಸಾರವನ್ನು ಉತ್ತಮ ರೀತಿಯಲ್ಲಿ ಸಾಗಿಸಬಹುದು ಎಂದರು.
ಗ್ರಾಮಸ್ಥರಾದ ಸುಭಾಷ್ ಗೌಡ, ಕೃಷ್ಣಾಚಾರ್, ರತ್ನಮ್ಮ, ಮೈತ್ರಿ ಹೊಸಬಾಳೆ, ಪವಿತ್ರಾ ಶಿಡ್ಡಿಹಳ್ಳಿ, ರಾಕೇಶ್, ಕಮಲಾಕರ್ ಇದ್ದರು. ನಂತರ ಸೊರಬದ ಗುಡಿಗಾರ್ ಶಾಂತಾಬಾಯಿ ಅವರಿಂದ ಶ್ರೀಗಂಧ ಮಾಲೆ ತಯಾರಿಕಾ ತರಬೇತಿ ನೀಡಲಾಯಿತು. ಸುಮಾರು 65ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು.