ಸವಾಲು ಸ್ವೀಕಾರ ಭಟ್ಟರ ಅಭ್ಯಾಸ
ಸಾಗರ: ಮಹಾಬಲೇಶ್ವರ ಭಟ್ಟರು ಎಂತಹ ದೊಡ್ಡ ಸವಾಲನ್ನಾದರೂ ಸ್ವೀಕರಿಸಿ ಅದನ್ನು ದಿಟ್ಟವಾಗಿ ಎದುರಿಸಿ ಗೆಲ್ಲುತ್ತಿದ್ದರು ಎನ್ನುವುದು ಸಾಹಿತಿ, 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಡಾ. ನಾ. ಡಿಸೋಜ ಅವರ ಅಭಿಪ್ರಾಯ.
ಮಹಾಬಲೇಶ್ವರ ಭಟ್ಟರ ನಿಧನದ ಹಿನ್ನೆಲೆಯಲ್ಲಿ “OÚ«ÚsÚ®Úúڒ¥ÚæàM¦Væ ತಮ್ಮ ಹಾಗೂ ಭಟ್ಟರ ಒಡನಾಟವನ್ನು ನೆನಪಿಸಿಕೊಂಡು ಅವರ ಘನ ವ್ಯಕ್ತಿತ್ವದ ಬಗ್ಗೆ ಬೆಳಕು ಚೆಲ್ಲಿದರು.
ತೊಂಬತ್ತರ ದಶಕದಲ್ಲಿ ರಾಷ್ಟ್ರಕವಿ ಕುವೆಂಪು ಅವರನ್ನು ಸಾಗರಕ್ಕೆ ಕರೆಸಬೇಕು ಎನ್ನುವ ಹಿನ್ನೆಲೆಯಲ್ಲಿ ಅವರನ್ನು ಭೇಟಿ ಮಾಡಲಾಗಿತ್ತು. ಸಾಗರಕ್ಕೆ ಬರಲು ಒಪ್ಪಿದ್ದ ಕುವೆಂಪು ಅದಕ್ಕೂ ಮೊದಲು ತಮ್ಮ ಸಾಹಿತ್ಯದ ಕುರಿತು ವಿಚಾರಗೋಷ್ಠಿ ನಡೆಸುವಂತೆ ಸೂಚಿಸಿದ್ದರು. ಕುವೆಂಪು ಅವರನ್ನು ಕರೆಸಲೇಬೇಕು ಎಂದು ಹಠತೊಟ್ಟಿದ್ದ ಮಹಾಬಲೇಶ್ವರ ಭಟ್ಟರು ಕುವೆಂಪು ಸಾಹಿತ್ಯದ ವಿಚಾರಗೋಷ್ಠಿಯನ್ನು ನಡೆಸಿದ್ದರು. ಆ ನಂತರ ಮತ್ತೆ ಕುವೆಂಪು ಅವರನ್ನು ಭೇಟಿ ಮಾಡಿದಾಗ ತಮ್ಮ ನಾಟಕಗಳ ನಾಟಕೋತ್ಸವ ಆಯೋಜಿಸುವಂತೆ ತಾಕೀತು ಮಾಡಿದ್ದರು. ಅದನ್ನೂ ಕೂಡ ಭಟ್ಟರು ಯಶಸ್ವಿಯಾಗಿ ನಡೆಸಿದ್ದರು. ಆ ನಂತರ ತಾವು ಬರುವ ಕಾರ್ಯಕ್ರಮಕ್ಕೆ ಮೈಸೂರು, ಬೆಂಗಳೂರು, ಹಂಪೆ ವಿ.ವಿ.ಗಳ ಕುಲಪತಿಗಳನ್ನು ಕರೆಸಬೇಕೆಂದು ಕುವೆಂಪು ಹೇಳಿದರು. ನಂತರ ಕುವೆಂಪು ಕಾರ್ಯಕ್ರಮಕ್ಕೆ ಈ ಮೂರು ವಿವಿಗಳ ಕುಲಪತಿಗಳನ್ನು ಕರೆಸಿ ಅಚ್ಚುಕಟ್ಟಾಗಿ ನಿರ್ವಹಿಸಲಾಗಿತ್ತು. ಸವಾಲನ್ನು ಸ್ವೀಕರಿಸಿ ಕಾರ್ಯಕ್ರಮ ನಡೆಸುವುದು ಭಟ್ಟರಿಗೆ ಅಭ್ಯಾಸವಾಗಿತ್ತು ಎಂದು ಹಿಂದಿನ ಘಟನೆಯನ್ನು ನೆನಪಿಸಿಕೊಂಡರು.
ವಸಂತ ಸಾಹಿತ್ಯೋತ್ಸವ: ಮಹಾಬಲೇಶ್ವರ ಭಟ್ಟರು ಬಹಳ ವರ್ಷಗಳ ಹಿಂದೆ ಸಾಗರ ಪಟ್ಟಣದಲ್ಲಿ ಮಹಾನಂದ ಎನ್ನುವ ಕಿರಾಣಿ ಅಂಗಡಿಯನ್ನು ನಡೆಸುತ್ತಿದ್ದರು. ಈ ಅಂಗಡಿಯಲ್ಲಿ ಕೇವಲ ಕಿರಾಣಿ ಸಾಮಗ್ರಿಗಳಲ್ಲದೆ ಸಾಹಿತ್ಯದ ಪುಸ್ತಕ, ದಿನಪತ್ರಿಕೆ, ಮ್ಯಾಗ್ಜಿನ್ಗಳನ್ನು ಇಡುತ್ತಿದ್ದರು. ಇದು ನನ್ನನ್ನು ಸೆಳೆದಿತ್ತು. ಇದೇ ಅಂಗಡಿಯಲ್ಲಿಯೇ ಜಲಂಧರ ಪ್ರಕಾಶನವನ್ನು ಆರಂಭಿಸಿ ಹಲವಾರು ಪುಸ್ತಕಗಳನ್ನು ಪ್ರಕಾಶಿಸಿದ್ದಾರೆ. ಕನ್ನಡ ಸಂಘವನ್ನು ಸ್ಥಾಪಿಸಿ ಒಂದು ವಾರ ಕಾಲ ವಸಂತ ಸಾಹಿತ್ಯೋತ್ಸವ ನಡೆಸುತ್ತಿದ್ದುದನ್ನು ನೆನಪಿಸಿಕೊಂಡರು.