ಹಿರಿಯ ಸಾಹಿತಿ ಸಾಗರದ ಮಹಾಬಲೇಶ್ವರ ಭಟ್ಟ ನಿಧನ
ಸಾಗರ: ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಸಾಹಿತಿ ಟಿ.ಮಹಾಬಲೇಶ್ವರ ಭಟ್ಟ ಅವರು ತೀವ್ರ ಹೃದಯಾಘಾತದಿಂದ ಸೋಮವಾರ ಬೆಳಗ್ಗೆ ಸಾಗರ ತಾಲೂಕಿನ ಬೇದೂರು ಗ್ರಾಮದ ತಮ್ಮ ಮನೆಯಲ್ಲಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಮೃತರಿಗೆ ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಇದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮಹಾಬಲೇಶ್ವರ ಭಟ್ಟ ಅವರು ಇತ್ತೀಚೆಗಷ್ಟೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ನಡುವೆ, ಕಳೆದ ಸೆಪ್ಟೆಂಬರ್ನಲ್ಲಿ ಪತ್ನಿ ಪದ್ಮಾವತಿಯವರ ಅಕಾಲಿಕ ಸಾವಿನಿಂದ ಭಟ್ಟರು ತೀವ್ರ ಆಘಾತಕ್ಕೆ ಒಳಗಾಗಿದ್ದರು. ಮೃತರ ಅಂತ್ಯಕ್ರಿಯೆ ಸೋಮವಾರ ಸಂಜೆ 6 ಗಂಟೆಗೆ ನಡೆಯಿತು.
ಎಲ್ಲ ಪ್ರಕಾರದ ಸಾಹಿತ್ಯ: ಭಟ್ಟ ಅವರು ಕತೆ, ಕವನ, ಕಾದಂಬರಿ, ಅಂಕಣಬರಹ, ಪ್ರವಾಸ ಕಥನ... ಹೀಗೆ ಸಾಹಿತ್ಯದ ವಿವಿಧ ಕ್ಷೇತ್ರಗಳಲ್ಲಿ ಭಟ್ಟರು ಕೃಷಿ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಸಹಕಾರಿ, ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿದ್ದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೆ ಮೂರು ಅವಧಿಯಲ್ಲಿ ಅಧ್ಯಕ್ಷರಾಗಿದ್ದರು.
ನಾಡಿನ ಖ್ಯಾತ ಸಾಹಿತಿ, ಬರಹಗಾರರನ್ನು ಸಾಗರಕ್ಕೆ ಕರೆಸಿ ಕಾರ್ಯಕ್ರಮ ಆಯೋಜಿಸಿದ್ದು ಭಟ್ಟ ಅವರ ದೊಡ್ಡ ಹೆಗ್ಗಳಿಕೆ. ಇವರ ಅವಧಿಯಲ್ಲಿ ಕುವೆಂಪು, ಬೇಂದ್ರೆ ಗೂರೂರು ರಾಮಸ್ವಾಮಿ ಅಯ್ಯಂಗಾರ್, ಪುತಿನ, ಗೊರೂಚ, ಹಾ.ಮಾ. ನಾಯಕ್ ಮೊದಲಾದವರು ಸಾಗರಕ್ಕೆ ಬಂದು ಹೋಗಿದ್ದಾರೆ. ಬಹಳ ವರ್ಷಗಳ ಹಿಂದೆ ಸಾಗರದಲ್ಲಿ ಜಲಂಧರ ಪ್ರಕಾಶನವನ್ನು ಆರಂಭಿಸಿ ಹಲವು ಅತ್ಯುತ್ತಮ ಪುಸ್ತಕಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ.
ವಿವಿಧ ಸೇವೆ: 1953ರಲ್ಲಿ ಸಾಗರ ಪುರಸಭೆ ಸದಸ್ಯರಾಗಿ ಸತತ ಮೂರು ಬಾರಿ ಆಯ್ಕೆಯಾಗಿದ್ದರು. ಶಿವಮೊಗ್ಗ ಜಿಲ್ಲಾ ಬರಹಗಾರರ ಮಂಡಳಿ ಅಧ್ಯಕ್ಷರಾಗಿ 9 ವರ್ಷ, ಮಲೆನಾಡು ಅಡಕೆ ಮಾರಾಟ ಸಹಕಾರ ಸಂಘದ ನಿರ್ದೇಶಕರಾಗಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಂಘದ ಅಧ್ಯಕ್ಷರಾಗಿ 8 ವರ್ಷ, ಸಾಗರ ತಾಲೂಕು ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ 5 ವರ್ಷ, ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ, ಕೃಷಿ ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾಗಿ, ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ 49ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಉಪಾಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.
ಗಣ್ಯರಿಂದ ಅಂತಿಮ ದರ್ಶನ: ಮಹಾಬಲೇಶ್ವರ ಭಟ್ಟ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಡಾ.ನಾ. ಡಿಸೋಜ, ಮಾಜಿ ಸಚಿವ ಹೆಚ್. ಹಾಲಪ್ಪ, ಕಸಾಪ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್, ತಾಲೂಕು ಅಧ್ಯಕ್ಷ ವಿ.ಟಿ. ಸ್ವಾಮಿ ಮೊದಲಾದವರು ಬೇದೂರು ಗ್ರಾಮಕ್ಕೆ ತೆರಳಿ ಮಣತರ ಅಂತಿಮ ದರ್ಶನ ಪಡೆದರು.