ಡಿಕೆಶಿ ಸಂಪುಟಕ್ಕೆ ಸೇರಿಸಿಕೊಂಡರೆ ಹೋರಾಟ
ಶಿವಮೊಗ್ಗ: ಡಿ.ಕೆ. ಶಿವಕುಮಾರ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡರೆ ಯಾವ ರೀತಿ ಸಂತೋಷ್ ಲಾಡ್ ಅವರ ವಿರುದ್ಧ ಪ್ರತಿಭಟನೆ ಮಾಡಿದ್ದೆವೋ ಅದೇ ರೀತಿ ರಾಜ್ಯಾದ್ಯಂತ ಬೀದಿಗಿಳಿಯುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಶಿವಮೊಗ್ಗ ಲೋಕಸಭಾ ಕ್ಷೇತ್ರ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರಿಗಾಗಿ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿದ ಅವರು, ಕಳಂಕಿತರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕತೆಯ ಮಾತನ್ನಾಡಿದ್ದರು. ತಮ್ಮ ಹೇಳಿಕೆಗೆ ಈಗಲೂ ಬದ್ಧರಾಗಿದ್ದಾರೆಯೋ, ಇಲ್ಲವೋ ಎಂಬುದನ್ನು ಅವರು ಕೂಡಲೇ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಅವರು ಈಗ ರಾಹುಲ್ ಗಾಂಧಿ ಹಾಗೂ ದಿಗ್ವಿಜಯ್ ಸಿಂಗ್ ಅವರ ರಿಮೋಟ್ ಕಂಟ್ರೋಲ್ನಲ್ಲಿದ್ದಾರೆ. ಡಿ.ಕೆ. ಶಿವಕುಮಾರ್ ಹಾಗೂ ರೋಷನ್ ಬೇಗ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಒತ್ತಡಕ್ಕೆ ಮಣಿಯುವ ಲಕ್ಷಣಗಳಿವೆ. ಹಾಗೇನಾದರೂ ಆದರೆ ಬಿಜೆಪಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಎಚ್ಚರಿಸಿದರು.
ಹಿಂಬರಕಿ ಸಿದ್ದು: ಯೋಜನೆಗಳನ್ನು ಘೋಷಿಸುವುದು, ನಂತರ ವಾಪಸು ಪಡೆಯುವುದು, ಬರೀ ಇದೇ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಇವರು ಹಿಂಬರಕಿ ಸಿದ್ದರಾಮಯ್ಯ ಎಂದು ಪ್ರಹ್ಲಾದ್ ಜೋಷಿ ಲೇವಡಿ ಮಾಡಿದರು.
ಕೇಂದ್ರ ವಿರುದ್ಧ ಟೀಕೆ: ಕೇಂದ್ರ ಸರ್ಕಾರವೂ ಭ್ರಷ್ಟಾಚಾರ, ಸ್ವಜನಪಕ್ಷಪಾತದಲ್ಲಿ ಮುಳುಗಿದೆ. ನರೇಂದ್ರ ಮೋದಿ ಅವರಿಗೆ ಕಿರಿಕಿರಿ ಮಾಡಲು ಸ್ನೂಪ್ ಗೇಟ್ ತನಿಖೆಗೆ ಆಯೋಗ ರಚಿಸಿದೆ. ರಾಬರ್ಟ್ ವಾದ್ರಾ ಅವರ ವ್ಯವಹಾರ ತನಿಖೆ ನಡೆಸುತ್ತದೆಯೇ ಎಂದು ಪ್ರಹ್ಲಾದ್ ಜೋಷಿ ಪ್ರಶ್ನಿಸಿದರು.
6.5 ಲಕ್ಷ ಕೋಟಿ ಅವ್ಯವಹಾರ ಯುಪಿಎ ಸರ್ಕಾರದಲ್ಲಿ ನಡೆದಿದೆ ಎಂದು ಆರೋಪಿಸಿದರು.
ನಮ್ಮನ್ನು ಗೋಡ್ಸೆ ಸಂತತಿ ಎಂದು ಟೀಕಿಸುತ್ತಾರೆ. ಇವರು ಬಿಂದ್ರನ್ ವಾಲೆ ಸಂತತಿ ಎಂಬುದನ್ನು ಅವರು ಮರೆಯದಿರಲಿ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ, ಸಂಸದ ಆಯನೂರು ಮಂಜುನಾಥ್, ವಿಧಾನಪರಿಷತ್ ಸದಸ್ಯ ಭಾನುಪ್ರಕಾಶ್, ಗಣೇಶ್ ಕಾರ್ಣಿಕ್, ಸೋಮಣ್ಣ ಬೇವಿನಮರದ, ರೈತಮೋರ್ಚಾ ರಾಜ್ಯಾಧ್ಯಕ್ಷ ಆರಗ ಜ್ಞಾನೇಂದ್ರ, ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಮುಖಂಡರಾದ ದೇವದಾಸ ನಾಯ್ಕ್, ಗಿರೀಶ್ ಪಟೇಲ್, ಗುರುರಾಜ್ ಉಪ್ಪುಂದ, ಪಾಣಿ ರಾಜಪ್ಪ, ದತ್ತಾತ್ರಿ ಸೇರಿದಂತೆ ಹಲವು ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.