ಮುಗಿಯಿತು 2013, ನೆನಪು ನೂರಾರು...
ಶಿವಮೊಗ್ಗ: ಹಳೇ ವರ್ಷ ಮುಗಿದಿದೆ. ಹೊಸ ವರ್ಷ ಕಾಲಿಟ್ಟಿದೆ. ಮಲೆನಾಡ ಜಿಲ್ಲೆಯ ಮಟ್ಟಿಗೆ ಹಳೆಯ ವರ್ಷ ಎನ್ನುವುದು ಒಂದೆಡೆ ಸಂತಸಗಳ ಆಗರವಾದರೆ, ಇನ್ನೊಂದೆಡೆ ಕಹಿ ನೋವಿನ ಮೂಟೆಯೂ ಹೌದು.
ನಗರ ಸ್ಥಳೀಯ ಸಂಸ್ಥೆ ಹಾಗೂ ವಿಧಾನಸಭೆ ಚುನಾವಣೆ ಹಿಂದಿನ ವರ್ಷದ ಪ್ರಮುಖ ಘಟನೆಗಳು. ಐದು ವರ್ಷಗಳ ಮೆರೆದಿದ್ದ ಬಿಜೆಪಿಯು ಈ ಚುನಾವಣೆಗಳಲ್ಲಿ ಮಣ್ಣು ಮುಕ್ಕಿತ್ತು. ಬಹುತೇಕ ಕಡೆ ಕಾಂಗ್ರೆಸ್ ಜಯಭೇರಿ ಸಾಧಿಸಿತ್ತು. ಜಾತ್ಯತೀತ ಜನತಾದಳ ಪುಟಿದೆದ್ದು ನಿಂತಿತ್ತು. ಯಡಿಯೂರಪ್ಪ ಅವರು ಸ್ಥಾಪಿಸಿದ್ದ ಕರ್ನಾಟಕ ಜನತಾ ಪಕ್ಷ ಜಿಲ್ಲೆಯ ಮಟ್ಟಿಗೆ ಪರಿಣಾಮಕಾರಿ ಪ್ರಭಾವ ಬೀರಿತ್ತು. ವರ್ಷಾಂತ್ಯದಲ್ಲಿ ಯಡಿಯೂರಪ್ಪ ಅವರು ಮತ್ತೆ ಬಿಜೆಪಿಯತ್ತ ಮುಖ ಮಾಡಿ ನಿಂತಿದ್ದಾರೆ. ಜಿಲ್ಲೆಯ ರಾಜಕಾರಣ ಮತ್ತೊಂದು ಮಗ್ಗುಲಿಗೆ ಸರಿದಿದೆ.
ತೀರ್ಥಹಳ್ಳಿ ಶಾಸಕ ಕಿಮ್ಮನೆ ರತ್ನಾಕರ್ ಶಿಕ್ಷಣ ಸಚಿವರಾದರು. ಹಿರಿಯ ಮತ್ಸದ್ಧಿ ಕಾಗೋಡು ತಿಮ್ಮಪ್ಪ ವಿಧಾನಸಭೆಯ ಸಭಾಧ್ಯಕ್ಷರಾದರು. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಅವರು ರಾಜ್ಯ ಸಹಕಾರ ಬ್ಯಾಂಕುಗಳ ರಾಷ್ಟ್ರೀಯ ಮಹಾಮಂಡಳಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಸಾಂಸ್ಕೃತಿಕ ಹೆಗ್ಗುರುತು: ಸಾಂಸ್ಕೃತಿಕವಾಗಿಯೂ ಹೆಗ್ಗುರುತು ಮೂಡಿಸಿದ ವರ್ಷವಿದು. ಹಿರಿಯ ಸಾಹಿತಿ ನಾ. ಡಿಸೋಜ ಅವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದರು. ಹಿರಿಯ ಲೇಖಕ ಶ್ರೀಕಂಠ ಕೂಡಿಗೆ ಅವರು ರಾಜ್ಯೋತ್ಸವ ಪುರಸ್ಕಾರಕ್ಕೆ ಪಾತ್ರರಾದರು. ಸಾಗರದ ಹೆಗ್ಗೋಡಿನಲ್ಲಿ ನೆಲೆಸಿರುವ ಡಿ.ಎನ್. ಶಂಕರ ಬಟ್ಟರನ್ನು ಪಂಪ ಪ್ರಶಸ್ತಿಯು ಹುಡುಕಿಕೊಂಡು ಬಂತು.
ಆದರೆ ರಂಗಾಯಣ ನಿರ್ದೇಶಕ ಆಯ್ಕೆ ಆಗಲಿಲ್ಲ. ಕೆಲಸಗಳು ಸ್ಥಗಿತವಾದವು. ಕುವೆಂಪು ರಂಗಮಂದಿರ ಅಭಿವೃದ್ಧಿ ಕಾಮಗಾರಿ ಮುಂದುವರಿಯಲಿಲ್ಲ.
ಶಿವಮೊಗ್ಗದ ಜೆಎನ್‌ಎನ್ ಸಿಇ ಕ್ರೀಡಾಂಗಣದಲ್ಲಿ ಭಾರತ- ವೆಸ್ಟ್ ಇಂಡಿಸ್ ನಡುವೆ ಅಂತಾರಾಷ್ಟ್ರೀಯ ಪಂದ್ಯವು ಜಿಲ್ಲೆಯು ರಾಜ್ಯದ ಕ್ರೀಡಾ ಭೂಪಟದಲ್ಲಿ ಹೆಗ್ಗುರುತು ಮೂಡಿಸಿತು. ಶಿವಮೊಗ್ಗ ಜಿಲ್ಲೆಯ ಮಟ್ಟಿಗೆ 2013ನೇ ವರ್ಷ ನೋವು ನಲಿವುಗಳ ಮಿಶ್ರಣ.
ಮರೆಯಾದವರು
- ಪ್ರಗತಿಪರ ಕೃಷಿಕ ದೇವಂಗಿ ಪ್ರಫುಲ್ಲಚಂದ್ರ
- ಅಂತಾರಾಷ್ಟ್ರೀಯ ಕ್ರೀಡಾಪಟು ಶಾಮಿಯಾನ ರಾಮು
- ಸಾಹಿತಿ ಮಹಾಬಲೇಶ್ವರ ಭಟ್ಟ
- ಜನಸಂಘದ ಹಿರಿಯ ನಾಯಕ ಟ.ಜಿ. ಶ್ರೀಧರ ರಾವ್
- ವಾಗ್ಮಿ, ಆಡಳಿತಗಾರ ಎಸ್.ವಿ. ತಿಮ್ಮಯ್ಯ
ಅರಣ್ಯ ಲೋಕ
- ಸಕ್ರೆಬೈಲು ಆನೆ ಬಿಡಾರದ ಗಂಡಾನೆ ಮಕ್ನಾ ಸಾವು. ಬಿಡಾರದ ಹಿರಿಯ ಸದಸ್ಯೆ ಕಾವೇರಿಯೂ ಅಸ್ತಂಗತ. ಈ ನಡುವೆ ಬೆಳಕಿನ ಕಿರಣದಂತೆ ಆನೆ ಮರಿಯೊಂದರ ಜನನ.- ತ್ಯಾವರೆಕೊಪ್ಪ ಸಿಂಹಧಾಮದಲ್ಲಿ ಹಿರಿಯ ಹುಲಿ ಚಾಮುಂಡಿ ಸಾವು.- ಆಗುಂಬೆಯ ಕಾಡಿನಲ್ಲಿ ನೂರಾರು ಮಂಗಗಳು ಸಾವು ಕಂಡು ಸೋಜಿಗ ಮೂಡಿಸಿದವು.
ಅಭಿವೃದ್ಧಿ ಏನು ಕಥೆ?
- ಶಿವಮೊಗ್ಗ ನಗರಸಭೆಯು ನಗರ ಪಾಲಿಕೆಯಾಗಿ ಪರಿವರ್ತನೆ, 100 ಕೋಟಿ ರು. ಅನುದಾನಕ್ಕೆ ಕ್ರಿಯಾಯೋಜನೆ- ತಾಳಗುಪ್ಪ- ಶಿವಮೊಗ್ಗ ಪ್ಯಾಸೆಂಜರ್ ರೈಲು ಸಂಚಾರ ಆರಂಭ, ಕುಂಸಿಯಲ್ಲಿ ನಿಲುಗಡೆ- ಮೈಸೂರು- ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ವಿಸ್ತರಣೆ- ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪ್ರಗತಿ. ಪ್ರತಿ ಕಾರ್ಡುದಾರರ ಹೆಸರಿನಲ್ಲಿ ಪ್ರತ್ಯೇಕ ಖಾತೆ
ದುರಂತಗಳು
- ಜೋಗ ಜಲಪಾತಕ್ಕೆ ಬಿದ್ದು ಹುಬ್ಬಳ್ಳಿಯ ಮೂವರ ಸಾವು. ಶವ ಮೇಲೆತ್ತಲು ಕೋತಿ ರಾಮನ ಸಾಹಸ
- ಸಿಲಿಂಡರ್ ಸಾಗಿರುವ ಲಾರಿಗೆ ಬೆಂಕಿ, 300 ಸಿಲಿಂಡರ್ ಭಸ್ಮ
- ತ್ಯಾವರೇಕೊಪ್ಪ ಬಳಿ ಕಾರು-ಲಾರಿ ಡಿಕ್ಕಿ, ಇಬ್ಬರ ಸಾವು.
- ಹೋರಿ ಬೆದರಿಸುವ ಸ್ಪರ್ಧೆ ವೇಳೆ ವ್ಯಕ್ತಿ ಸಾವು
-ವಿಶೇಷ ವರದಿ