ಮೊರಾರ್ಜಿ ಶಾಲೆಗೆ ಗೋದಾಮಿನಿಂದ ಮುಕ್ತಿ ನೀಡಿ
ಶಿವಮೊಗ್ಗ: ಭದ್ರಾವತಿ ತಾಲೂಕಿನ ಬಿ.ಎಚ್. ರಸ್ತೆಯಲ್ಲಿರುವ ಮೊರಾರ್ಜಿ ದೇಸಾಯಿ ಶಾಲೆಯನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರ ಮಾಡುವಂತೆ ಒತ್ತಾಯಿಸಿ ಮಂಗಳವಾರ ನವ ಕರ್ನಾಟಕ ನಿರ್ಮಾಣ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸರ್ಕಾರ ರಾಜ್ಯಾದ್ಯಂತ ಮೊರಾರ್ಜಿ ವಸತಿ ಶಾಲೆಗಳನ್ನು ಸ್ಥಾಪಿಸಿದ್ದು, ಜಿಲ್ಲೆಯಲ್ಲಿ ಒಟ್ಟು 18 ಮೊರಾರ್ಜಿ ವಸತಿ ಶಾಲೆಗಳಿವೆ. ಅವುಗಳಲ್ಲಿ ಬಿ.ಎಚ್.ರಸ್ತೆಯ ಕಡದಕಟ್ಟೆ ಸಮೀಪವಿರುವ ವಸತಿ ಶಾಲೆ ಅವ್ಯವಸ್ಥೆಯ ಆಗರವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಗೋದಾಮಿನಲ್ಲಿ ಶಾಲೆ: ಕಳೆದ 5ವರ್ಷದಿಂದ ಈ ಶಾಲೆ ನಡೆಯುತ್ತಿದೆ. ಸುಮಾರು 250 ವಿದ್ಯಾರ್ಥಿಗಳು ಶಾಲೆಯಲ್ಲಿದ್ದಾರೆ. ಸ್ವಂತ ಕಟ್ಟಡವಿಲ್ಲದೆ ರೈಸ್ ಮಿಲ್ ಗೋಡೌನ್ನಲ್ಲಿ ಶಾಲೆ ನಡೆಸಲಾಗುತ್ತಿದೆ. ಈ ಶಾಲೆಯಲ್ಲಿ ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕ ಕೊಠಡಿಗಳಿದ್ದರೂ, ರಕ್ಷಣೆ ಇಲ್ಲವಾಗಿದೆ. ರಾತ್ರಿ ವೇಳೆ ಹೆಣ್ಣು ಮಕ್ಕಳು ಊಟದ ಹಾಲ್ನಲ್ಲಿ ಮಲಗುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಶೌಚಾಲಯವು ಕಟ್ಟಡದ ಹೊರಭಾಗದಲ್ಲಿದ್ದು, ರಾತ್ರಿ ವೇಳೆಯಲ್ಲಿ ಬಾಲಕರು ಹಾಗೂ ಬಾಲಕಿಯರು ಶೌಚಾಲಯಕ್ಕೆ ಹೋಗಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಇಲ್ಲಿಯವರೆಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸುಸಜ್ಜಿತ ಕಟ್ಟಡಕ್ಕೆ ಶಾಲೆ ಸ್ಥಳಾಂತರಿಸುವ ಗೋಜಿಗೆ ಹೋಗಿಲ್ಲ ಎಂದು ಪ್ರತಿಭಟನಾಕಾರರು ಆಪಾದಿಸಿದರು.
45 ಸಾವಿರ ಬಾಡಿಗೆ: ಪ್ರಸ್ತುತ ಕಟ್ಟಡಕ್ಕೆ ಒಟ್ಟಾರೆ 45 ಸಾವಿರ ರುಪಾಯಿ ಮಾಸಿಕ ಬಾಡಿಗೆ ನೀಡಲಾಗುತ್ತಿದೆ. ಇಷ್ಟೊಂದು ದೊಡ್ಡ ಮೊತ್ತದ ಬಾಡಿಗೆ ನೀಡುತ್ತಿದ್ದರೂ ವಿದ್ಯಾರ್ಥಿಗಳಿಗೆ ಯಾವುದೇ ಭದ್ರತೆ ಇಲ್ಲವಾಗಿದೆ. ಆದ್ದರಿಂದ ಜಿಲ್ಲಾಡಳಿತ ಶಾಲೆಯನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಗೋ. ರಮೇಶ್ ಗೌಡ, ನಗರಾಧ್ಯಕ್ಷ ಮಂಜುನಾಥ್, ರಾಜುನಾಯ್ಕ್, ರಘು, ರವಿ, ಸಂತೋಷ್, ಸತೀಶ್ ಮತ್ತಿತರರು ಇದ್ದರು.